ಉಡುಪಿ: ಆಗುಂಬೆಯಾ ಪ್ರೇಮ ಸಂಜೆಯಾ ಬಿಡಲಾರೆ ನಾನು ಎಂದಿಗೂ.., ಓ ಗೆಳೆತಿಯೆ ಓ ಗೆಳತಿಯೇ ಓ.,ಗೆಳತಿಯೇ. ಗೆಳತಿಯೇ ಗೆಳತಿಯೇ. ಗೆಳತಿ ಜೊತೆಯಲ್ಲಿ ಇಲ್ಲದಿದ್ದರೂ ಆಗುಂಬೆಗೆ ಹೋದವರು ಈ ಹಾಡನ್ನೊಂದು ಸಾರಿ ಗುನುಗಿಯೇ ಗುನುಗುತ್ತಾರೆ. ಅದು ಆಗುಂಬೆಯ ಮೋಡಿ.
ಆಗುಂಬೆ ಈ ಹೆಸರೇ ಒಂತರ ರೋಮಾಂಚಕ. ಶಿವಮೊಗ್ಗ- ಉಡುಪಿ ಜಿಲ್ಲೆಯ ನಡುವೆ ಸಿಗುವ ಆಗುಂಬೆ ಘಾಟ್ ಪ್ರವಾಸಿಗರಿಗೆ ಹಾಟ್ ಸ್ಪಾಟ್. ಮಳೆಗಾಲದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಆಗುಂಬೆ, ಬೇಸಿಗೆಯಲ್ಲಿ ನೀಲಿ ಆಗಸದಿಂದ ಕಣ್ಮನ ಸೆಳೆಯುತ್ತದೆ. ಆಗುಂಬೆಯ ಚೆಲುವು ಮಳೆಗಾಲದಲ್ಲಿ ಕಣ್ತುಂಬಿಕೊಳ್ಳುವುದೇ ಚಂದ. ಆಗಸದೆತ್ತರದಲ್ಲಿ ನಿಂತು ಮೋಡಗಳನ್ನು ಕಾಲ ಬುಡದಲ್ಲಿ ಕಾಣುವ ಅವಕಾಶವಿರೋದು ಮಳೆಗಾಲದಲ್ಲಿ ಮಾತ್ರ. ಘಾಟ್‍ನ ತಿರುವು ಮುರುವು ರಸ್ತೆ ಸಂಪೂರ್ಣ ಮೋಡದಿಂದ ಮುಸುಕಿರುತ್ತದೆ. ಕಾಣದ ರಸ್ತೆಯಲ್ಲಿ ವಾಹನ ಸಂಚಾರವೇ ಚಾಲಕರಿಗೆ ಒಂದು ಸವಾಲಾಗಿರುತ್ತದೆ.
Advertisement
Advertisement
ಹೋಗೋದು ಹೇಗೆ?: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಿಂದ ಮೊದಲು ಹೆಬ್ರಿಗೆ ಹೋಗಬೇಕು. ಅಲ್ಲಿಂದ ಸೋಮೇಶ್ವರದ ಮೂಲಕ ಆಗುಂಬೆ ಪ್ರವೇಶ. ಪಶ್ಚಿಮ ಘಟ್ಟದ ತಪ್ಪಲು ಊರೇ ಸೋಮೇಶ್ವರ. ಸೋಮೇಶ್ವರದ ಬಡಕಿಲ್ಲಾಯ ಹೋಟೆಲ್‍ನಲ್ಲಿ ಬಿಸಿ ಬಿಸಿ ಇಡ್ಲಿ, ತೋವೆ, ಗರಂ ಚಾಯ್ ಕುಡಿದು ಆಗುಂಬೆ ನೋಡಲು ಹೊರಟ್ರೆ ಅದ್ರ ಮಜಾನೇ ಬೇರೆ. ಆಗುಂಬೆ ರಸ್ತೆಯ ತಿರುವು ಮುರುವು ಇಕ್ಕೆಲಗಳಲ್ಲಿ ಮಿನಿ ಜಲಪಾತಗಳು ನಮ್ಮನ್ನು ಸ್ವಾಗತ ಮಾಡುತ್ತವೆ. ರಸ್ತೆಯ ಮೇಲೆಯೇ ಮಳೆನೀರು ಹರಿದು ಜಲರಾಶಿಗಳು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತವೆ.
Advertisement
ಸನ್ಸೆಟ್ ಪಾಯಿಂಟಲ್ಲಿ ನಿಂತರೆ ಆಗುಂಬೆಯ ಚೆಲುವು ಆಸ್ವಾದಿಸಬಹುದು. ಮಳೆಗಾಲದಲ್ಲಂತೂ ಹಾಲಿನ ಸಾಗರದಂತೆ ಬೆಟ್ಟದ ಕೆಳಭಾಗ ಕಾಣಿಸುತ್ತದೆ. ಮೋಡ ಮರೆಯಾದಾಗ ಅಲ್ಲಲ್ಲಿ ಜಲಪಾತಗಳು ಇಣುಕುತ್ತದೆ, ಮತ್ತೆ ಮರೆಯಾಗುತ್ತದೆ. ಇದು ನೋಡುಗರಿಗೆ ಹಿತವಾದ ಮುದವನ್ನು ನೀಡುತ್ತದೆ.
Advertisement
ಮೈಗೆ ಸೋಕಿಕೊಂಡೇ ಮೋಡಗಳು ತೇಲಿ ಹೋಗುವ ಅನುಭವವಾಗಬೇಕಂದ್ರೆ ಆಗುಂಬೆಗೆ ಬರಬೇಕು. ದಕ್ಷಿಣ ಭಾರತದ ಚಿರಾಪುಂಜಿ ಅಂತಲೇ ಆಗುಂಬೆಯನ್ನು ಕರೆಯಲಾಗುತ್ತದೆ. ಮಳೆಗಾಲದ ಆರು ತಿಂಗಳು ಯಾವಾಗ ಹೋದರೂ ಆಗುಂಬೆಯಲ್ಲಿ ಸದಾ ಮಳೆಯಿರುತ್ತದೆ. ಲ್ಯಾಟರೈಟ್ ಅನ್ನೋ ಶಿಲೆಯಿಂದಲೇ ಈ ಆಗುಂಬೆಯ ಗುಡ್ಡ ಪ್ರದೇಶ ನಿರ್ಮಾಣವಾಗಿದೆ.
ಆಗುಂಬೆ ಘಾಟ್ ಹತ್ತಿ ಹೋದರೆ ಆಗುಂಬೆ ಪೇಟೆ ಸಿಗುತ್ತದೆ. ಮಾಲ್ಗುಡಿ ಡೇಸ್ ಚಿತ್ರೀಕರಣವಾದ ಊರದು. ಆಗುಂಬೆ ಪೇಟೆ ಇಂದಿಗೂ ಅದೇ ಹಳೆಯ ಮನೆಗಳ ಶೈಲಿಯನ್ನು, ಬೀದಿಯನ್ನು ಉಳಿಸಿಕೊಂಡಿದೆ.
ಮಂಗಗಳ ಕಾಟ: ಆಗುಂಬೆ ಘಾಟ್‍ನ ಯಾವ ತಿರುವಿನಲ್ಲಿ ನಿಲ್ಲಿಸಿದರೂ ಕೋತಿಗಳಿಂದ ರಕ್ಷಣೆ ಪಡೆಯಬೇಕಂದ್ರೆ ಕಷ್ಟಪಡಲೇಬೇಕು. ಕೈಯ್ಯಲ್ಲೇನಾದ್ರು ತಿಂಡಿ ಪೊಟ್ಟಣ ಹಿಡ್ಕೊಂಡಿದ್ರೆ ನಮ್ಮ ಕಥೆ ಮುಗಿಯಿತು. ಮಂಗಗಳು ಮುಗಿಬೀಳೋ ಮೊದಲು ತಿಂಡಿ ಹಂಚಿಬಿಡದಿದ್ದರೆ ನಮ್ಮನ್ನು ಅವುಗಳು ಬಿಡೋದೆ ಇಲ್ಲ.
ಬೈಕ್ ರೈಡ್‍ನಲ್ಲೇ ಆಗುಂಬೆ ಹತ್ತಿ: ಆಗುಂಬೆ ಘಾಟ್‍ನ ನಿಜವಾದ ಸೊಬಗು ಅನುಭವಿಸಬೇಕಾದ್ರೆ ಆಗುಂಬೆಯನ್ನು ಬೈಕಿನಲ್ಲೇ ಹತ್ತಬೇಕು. ಜೋರು ಮಳೆ ಸುರಿಯುತ್ತಿರಬೇಕು, ಒದ್ದೆಯಾಗಬೇಕು ಆಗಷ್ಟೇ ನಿಜವಾದ ಆಗುಂಬೆಯನ್ನು ಅನುಭವಿಸಬಹುದು.
ಆಗುಂಬೆಯ ಸನ್ಸೆಟ್ ಪಾಯಿಂಟಲ್ಲಿ ಮುಳ್ಳುಸೌತೆ ಮತ್ತು ಅನಾನಾಸು ಸ್ಲೈಸ್‍ಗೆ ಖಾರ ಪುಡಿ, ಉಪ್ಪು, ಪೆಪ್ಪರ್ ಸೇರಿಸಿ ಹತ್ತಾರು ಜನ ವ್ಯಾಪಾರ ಮಾಡ್ತಾರೆ. ಮಳೆಯ ನಡುವೆ ಖಡಕ್ ಸ್ಲೈಸ್‍ಗಳನ್ನು ತಿನ್ನೋ ಖುಷಿಯೇ ಬೇರೆ. ಒಂದು ದಿನದ ಮಟ್ಟಿಗೆ ಎಂಜಾಯ್ ಮಾಡಬೇಕಂದ್ರೆ ಆಗುಂಬೆ ಪರ್ಫೆಕ್ಟ್ ಪ್ಲೇಸ್. ಬೋಟಿಂಗ್, ಸ್ಮಿಮ್ಮಿಂಗ್, ವ್ಯವಸ್ಥೆಯೂ ಆಗುಂಬೆಯಲ್ಲಿದ್ದು ಸಿಕ್ಕಾಪಟ್ಟೆ ಎಂಜಾಯ್ ಮಾಡೋ ಅವಕಾಶವಿದೆ.
ಬೇಸಿಗೆ ಆಗುಂಬೆ: ಬೇಸಿಗೆ ಆಗುಂಬೆಯಲ್ಲಿ ಬರೀ ಹೆಸರಿಗಷ್ಟೇ ಬೇಸಿಗೆ. ಆದ್ರೆ ಆಗುಂಬೆ ವರ್ಷಪೂರ್ತಿ ತಂಪಾಗಿಯೇ ಇರುತ್ತೆ. ಸಮುದ್ರದಿಂದ ಜೋರಾಗಿ ಬೀಸೋ ಗಾಳಿ ಪಶ್ಚಿಮ ಘಟ್ಟಕ್ಕೆ ಅಪ್ಪಳಿಸುತ್ತದೆ. ಹೀಗಾಗಿ ಸದಾ ತಂಗಾಳಿ ಬೀಸ್ತಾ ತಂಪಾದ ವಾತಾವರಣ ಇರುತ್ತದೆ.
ಸಮುದ್ರ ತೀರದಲ್ಲಿ ಸೂರ್ಯಾಸ್ತ ನೋಡುವುದಕ್ಕೂ, ಆಗುಂಬೆ ಸನ್ಸೆಟ್ ಪಾಯಿಂಟಲ್ಲಿ ಸೂರ್ಯಾಸ್ತ ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ. ಆಗಸದಲ್ಲಿ ನಿಂತು ಸಮುದ್ರ ನೋಡೋ ಅವಕಾಶ ಮತ್ತೆಲ್ಲೂ ಸಿಗಲ್ಲ. ಸೂರ್ಯಾಸ್ತದ ವೇಳೆ ಬಾನೆಲ್ಲಾ ಬಂಗಾರದ ಬಣ್ಣಕ್ಕೆ ತಿರುಗುತ್ತದೆ. ಅವಕಾಶ ಸಿಕ್ರೆ, ಸಮಯ ಮಾಡ್ಕೊಂಡು ಒಂದ್ಸಾರಿ ಆಗುಂಬೆ ಸೊಬಗು ನೋಡೋದನ್ನು ಮಿಸ್ ಮಾಡ್ಕೋಬೇಡಿ.