ಹಣಕ್ಕಾಗಿ ಮೊಮ್ಮಗಳನ್ನೇ ಮಾರಾಟ ಮಾಡಿದ ಪಾಪಿ ಅಜ್ಜ

Public TV
2 Min Read
father baby son daughter

ದಾವಣಗೆರೆ: ಆಧುನಿಕತೆ ಬೆಳೆದಂತೆ ಸಂಬಂಧಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಮೊದಲೆಲ್ಲ ಮನೆಯಲ್ಲಿ ಮಗು ಹುಟ್ಟಿದೆ ಎಂದರೆ ಸಾಕು ಸಂಭ್ರಮದ ವಾತಾವರಣ ಇರುತ್ತಿತ್ತು. ಯಾಕಂದ್ರೆ ಆ ಮಗುವಿಗಾಗಿ ಇಡೀ ಕುಟುಂಬವೇ ಕಾತುರದಿಂದ ಕಾಯುತ್ತಿರುತ್ತದೆ. ದಾವಣಗೆರೆಯಲ್ಲಿ ಒಬ್ಬ ಅಜ್ಜ ಹಣದ ಆಸೆಗೆ ತನ್ನ ಮೊಮ್ಮಗಳನ್ನೇ ಬೇರೆಯವರಿಗೆ ಮಾರಾಟ ಮಾಡಿದ್ದಾನೆ.

ದಾವಣಗೆರೆಯ ಶಾಮನೂರು ಬಳಿ ಇರುವ, ಕೇಶವಮೂರ್ತಿ ಬಡಾವಣೆಯ ನಿವಾಸಿ ಅಜ್ಜ ಬಸಣ್ಣ ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದ. ಈತನಿಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳು. ಮಗಳು ಸ್ವಲ್ಪ ಬುದ್ದಿಮಾಂಧ್ಯೆಯಾಗಿದ್ದು, ಸಣ್ಣವರಿದ್ದಾಗಲೇ ತಾಯಿಯನ್ನು ಕಳೆದುಕೊಂಡಿದ್ದಾರೆ. ಬಸಣ್ಣ ಮದ್ಯವೆಸನಿಯಾಗಿದ್ದು, ಮದ್ಯಪಾನ ಮಾಡಲು ಹಣಕ್ಕಾಗಿ ಪರದಾಡುತ್ತಿದ್ದ. ಹೇಗೋ ಸಾಲಸೋಲಮಾಡಿ ಮಗಳಾದ ಸುಜಾತಾಳ ಮದುವೆ ಮಾಡಿದ.

baby

ಮಗು ಸತ್ತಿದೆ ಎಂದು ಸುಳ್ಳು
ಇತ್ತ ಕುಡಿಯಲು ಹಣ ಬೇಕು, ಅತ್ತ ಸಾಲ ಕಟ್ಟಬೇಕು ಎನ್ನುವ ಚಿಂತೆಯಲ್ಲಿ ಬಸಣ್ಣ ಇದ್ದ. ಅದೇ ಸಮಯಕ್ಕೆ ಸುಜಾತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದೇ ಸಮಯಕ್ಕೆ ಕಾದು ಕುಳಿತಿದ್ದ ಬಸಣ್ಣ ಮಗಳಿಗೆ ಹುಟ್ಟಿದ ಹೆಣ್ಣು ಮಗುವನ್ನು ಹುಟ್ಟಿದ ಎರಡೇ ದಿನಕ್ಕೆ ತುಮಕೂರಿನಲ್ಲಿರುವ ಒಂದು ಕುಟುಂಬಕ್ಕೆ 50 ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ಇತ್ತ ಸಂಬಂಧಿಕರಿಗೆ, ತಾಯಿಗೆ ಮಗು ಹುಟ್ಟಿದ ತಕ್ಷಣ ಸಾವನ್ನಪ್ಪಿದೆ. ಮಗುವನ್ನು ತಿಪ್ಪೆಯಲ್ಲಿ ಮುಚ್ಚಿದ್ದಾರೆ ಎಂದು ಸುಳ್ಳು ಹೇಳಿದ್ದಾನೆ. ನಂತರ ಅನುಮಾನಗೊಂಡ ಮಗ ಪ್ರಶಾಂತ್ ಪ್ರಶ್ನಿಸಿದಾಗ ಬಸಣ್ಣ ತಪ್ಪೊಪ್ಪಿಕೊಂಡಿದ್ದಾನೆ.

ಸಾಲ ತೀರಿಸಿ, ಕುಡಿಯಲು ಬಳಕೆ
ಸ್ಥಳೀಯ ಮುಖಂಡರು ಬಸಣ್ಣ ಮಗು ಮಾರಾಟ ಮಾಡಿರುವುದರ ಬಗ್ಗೆ ವಿವರವಾಗಿ ಬಾಯಿ ಬಿಡಿಸಿದ್ದು, ಮಗುವನ್ನು ತುಮಕೂರಿನ ಬಳಿ ಇರುವ ಒಂದು ಗ್ರಾಮದ ದಂಪತಿಗೆ 50 ಸಾವಿರಕ್ಕೆ ಮಾರಾಟ ಮಾಡಲಾಗಿದೆ. ಆ ಹಣದಲ್ಲಿ ಸಾಲು ತೀರಿಸಿ ಉಳಿದ ಹಣವನ್ನು ಕುಡಿಯಲು ಬಳಕೆ ಮಾಡಿಕೊಂಡಿದ್ದಾನೆ. ಅಲ್ಲದೆ ಸ್ಥಳಕ್ಕೆ ಮಹಿಳಾ ಠಾಣೆ ಪೊಲೀಸರು ಆಶಾ ಕಾರ್ಯಕರ್ತೆಯರು ಧಾವಿಸಿ, ಮಾರಾಟ ಮಾಡಿರುವ ಬಗ್ಗೆ ಮಾಹಿತಿ ಪಡೆದರು.

ALCOHOL

ಬಸಣ್ಣ, ಬುದ್ಧಿಮಾಂದ್ಯತೆ ಇರುವ ತಾಯಿ ಸುಜಾತಾಳನ್ನು ಮಹಿಳಾ ಠಾಣೆಯ ಪೊಲೀಸರು ಹೆಚ್ಚಿನ ತನಿಖೆಗೆ ಠಾಣೆಗೆ ಕರೆದೊಯ್ದಿದ್ದಾರೆ. ಹೀಗೆ ಹೆತ್ತ ಮಗಳ ಮಗುವನ್ನು ಮಾರಾಟ ಮಾಡಿ ಮಾನವೀಯ ಸಂಬಂಧಗಳಿಗೆ ಬೆಲೆಯೇ ಇಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಕೂಡಲೇ ಇದರ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಿ ಅವರಿಗೂ ಕೂಡ ಶಿಕ್ಷೆ ಕೊಡಿಸಬೇಕಿದೆ ಎಂದು ಸ್ಥಳೀಯ ಮುಖಂಡರು ಆಗ್ರಹಿಸಿದ್ದಾರೆ.

ಏನೇ ಅಗಲಿ ಹಣದ ಆಸೆಗೆ ಎರಡು ದಿನದ ನವಜಾತ ಶಿಶುವನ್ನೇ ಮಾರಾಟ ಮಾಡಿದ್ದು, ಇತ್ತ ಮಗುವಿಗಾಗಿ ತಾಯಿ ಹೃದಯ ಹಂಬಲಸುತ್ತಿದೆ. ಪಾಪಿ ಅಜ್ಜ ತುಮಕೂರಿನಲ್ಲಿ ಯಾರಿಗೆ ಮಗು ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತನಿಖೆ ನಡೆಸಿ ಹುಡುಕಾಟ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *