ಪಕ್ಷಭೇದವಿಲ್ಲದೆ ಎಲ್ಲಾ ಮಾಜಿ ಪ್ರಧಾನಿಗಳಿಗಾಗಿ ನಿರ್ಮಾಣವಾಗಲಿದೆ ಮ್ಯೂಸಿಯಂ

Public TV
2 Min Read
modi bhagavad gita

ನವದೆಹಲಿ: ರಾಷ್ಟ್ರಕ್ಕೆ ಸೇವೆ ಸಲ್ಲಿಸಿರುವ ಎಲ್ಲಾ ಮಾಜಿ ಪ್ರಧಾನಿಗಳಿಗಾಗಿ ಮೀಸಲಾಗಿರುವ ಭವ್ಯ ವಸ್ತುಸಂಗ್ರಹಾಲಯ(ಗ್ರ್ಯಾಂಡ್ ಮ್ಯೂಸಿಯಂ) ಒಂದನ್ನು ದೆಹಲಿಯಲ್ಲಿ ನಿರ್ಮಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ.

ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಪುಸ್ತಕವನ್ನು ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಗ್ರ್ಯಾಂಡ್ ಮ್ಯೂಸಿಯಂ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ಮಾಜಿ ಪ್ರಧಾನಿಯಾಗಿದ್ದ ಎಲ್ಲಾ ನಾಯಕರಿಗೆ ಸಂಬಂಧ ಪಟ್ಟ ವಿವಿಧ ವಸ್ತುಗಳು, ವಿಚಾರವನ್ನು ಅವರವರ ಕುಟುಂಬಸ್ಥರಲ್ಲಿ ಹಂಚಿಕೊಳ್ಳಲು ಕೇಳಿಕೊಂಡರು. ಈ ಮಾಹಿತಿ, ವಸ್ತುಗಳನ್ನು ಸಂಗ್ರಹಿಸಿ ಗ್ರ್ಯಾಂಡ್ ಮ್ಯೂಸಿಯಂನಲ್ಲಿ ಇರಿಸಲಾಗುತ್ತದೆ ಎಂದರು.

pm modi

ನಮ್ಮ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದ ಎಲ್ಲಾ ಮಾಜಿ ಪ್ರಧಾನಿಗಳಿಗೆ ಮ್ಯೂಸಿಯಂ ಇರುತ್ತದೆ. ಮಾಜಿ ಪ್ರಧಾನಿಗಳಾದ ಚರಣ್ ಸಿಂಗ್, ದೇವೇಗೌಡ, ಐಕೆ ಗುಜ್ರಾಲ್, ಮತ್ತು ಡಾ. ಮನಮೋಹನ್ ಸಿಂಗ್ ಅವರು ಸೇರಿದಂತೆ ಎಲ್ಲಾ ನಾಯಕರ ಜೀವನದ ಅಂಶಗಳನ್ನು ಹಂಚಿಕೊಳ್ಳುವಂತೆ ಮೋದಿ ಅವರ ಕುಟುಂಬಗಳಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮೋದಿ ಕಾಂಗ್ರೆಸ್ ಹೆಸರನ್ನು ಪ್ರಸ್ತಾಪಿಸದೇ, ನಮ್ಮ ದೇಶದಲ್ಲಿ ಒಂದು ಗುಂಪು ಇದೆ. ಈ ಗುಂಪು ಅಂಬೇಡ್ಕರ್ ಮತ್ತು ಸರ್ದಾರ್ ಪಟೇಲ್ ಅವರ ಸಾಧನೆಯನ್ನು ತೋರಿಸಲೇ ಇಲ್ಲ. ಈ ಗುಂಪು ಮೊರಾರ್ಜಿ ದೇಸಾಯಿ ಅವರನ್ನು ಕಡೆಗಣಿಸಿತ್ತು. ಆದರೆ ತಮಗೆ ಬೇಕಾದ ಪ್ರಧಾನಿಗಳ ಹೆಸರಿನಲ್ಲಿ ಪ್ರಶಸ್ತಿಗಳನ್ನು ಸ್ಥಾಪಿಸಿತು ಎಂದು ಟಾಂಗ್ ನೀಡಿದರು.

ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಕೊಡುಗೆಗಳನ್ನು ಶ್ಲಾಘಿಸಿ, ನಮ್ಮ ರೈತರಿಗಾಗಿ, ಬಡವರಿಗಾಗಿ ಮತ್ತು ಅಂಚಿನಲ್ಲಿರುವವರಿಗಾಗಿ ಸದಾ ಕೆಲಸ ಮಾಡಿದ್ದಾರೆ. ಆದರೆ ಚಂದ್ರಶೇಖರ್ ಅವರ ಐತಿಹಾಸಿಕ ಪಾದಯಾತ್ರೆಯನ್ನು ಗೌರವಿಸಲಾಗಿಲ್ಲ ಎಂದು ಕಿಡಿಕಾರಿದರು.

ಈಗಿನ ಕಾಲದಲ್ಲಿ ಒಬ್ಬ ಸಣ್ಣ ನಾಯಕ 10-12 ಕಿ.ಮೀ ಪಾದಯಾತ್ರೆ ಮಾಡಿದರೂ ಕೂಡ ಟಿವಿಯಲ್ಲಿ ಅದನ್ನೇ ದೊಡ್ಡ ವಿಷಯವಾಗಿ ಪ್ರಸಾರ ಮಾಡುತ್ತಾರೆ. ಆದರೆ, ಚಂದ್ರಶೇಖರ್ ಜಿ ಅವರ ಐತಿಹಾಸಿಕ ಪಾದಯಾತ್ರೆಯನ್ನು ನಾವು ಏಕೆ ಗೌರವಿಸಲಿಲ್ಲ? ಅವರು ಬಡವರು ಮತ್ತು ನಮ್ಮ ರೈತರಿಗಾಗಿ ಪಾದಯಾತ್ರೆ ನಡೆಸಿದರು. ಅವರಂತಹ ಮಹಾನ್ ನಾಯಕನಿಗೆ ನಾವು ಮಾಡಿದ ದೊಡ್ಡ ಅನ್ಯಾಯಗಳಲ್ಲಿ ಇದು ಕೂಡ ಒಂದು ಎಂದು ಮೋದಿ ಬೇಸರ ವ್ಯಕ್ತಪಡಿಸಿದರು.

ದೇಶಕ್ಕಾಗಿ ಸೇವೆ ಸಲ್ಲಿಸಿದ ಪ್ರತಿ ನಾಯಕರಿಗೆ ಗೌರವ ಸಲ್ಲಬೇಕು. ನಾಯಕರು ಮತ್ತು ಜನರ ಸಾಮೂಹಿಕ ಪ್ರಯತ್ನದಿಂದ ಭಾರತವನ್ನು ನಿರ್ಮಿಸಲಾಗಿದೆ ಎಂದು ಮೋದಿ ಅವರು ನಂಬಿಕೆ ಇಟ್ಟಕೊಂಡಿದ್ದಾರೆ. ಹೀಗಾಗಿ ಪ್ರತಿ ಪ್ರಧಾನಮಂತ್ರಿಯ ಪರಂಪರೆಯನ್ನು ಗೌರವಿಸಬೇಕು, ಸಂರಕ್ಷಿಸಬೇಕು ಮತ್ತು ಪ್ರದರ್ಶಿಸಬೇಕು. ಇದು ಹೊಸ ಭಾರತವಾಗಿದ್ದು, ರಾಷ್ಟ್ರವನ್ನು ಮುಂದೆ ನಡೆಸುವ ಎಲ್ಲರ ಕೊಡುಗೆಗಳನ್ನು ಗೌರವಿಸುತ್ತದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *