ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ವಿಚಿತ್ರ ಸಂಗತಿಗಳು ನಡೆಯುತ್ತಲೇ ಇವೆ. ಪ್ರಶಾಂತ್ ಸಂಬರಗಿ ಜೋರು ಧ್ವನಿಯಲ್ಲಿ ಮಾತನಾಡಿದರೆ, ಅರುಣ್ ಸಾಗರ್ ವಿಪರೀತ ಮಾತನಾಡಿ ಮನೆಯಾಚೆ ಟ್ರೋಲ್ ಆಗುತ್ತಿದ್ದಾರೆ. ರೂಪೇಶ್ ಶೆಟ್ಟಿ ಮತ್ತು ಸಾನ್ಯ ಅಯ್ಯರ್ ನಡುವಿನ ಸ್ನೇಹಿ ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕಾವ್ಯಶ್ರೀ ಮತ್ತು ವಿನೋದ್ ನಡುವೆ ಮನಸ್ತಾಪ ಮುಂದುವರೆಯುತ್ತಲೇ ಇದೆ. ಅದೇ ರೀತಿಯ ಆರ್ಯವರ್ಧನ್ ಗುರೂಜಿಯ ಮಾತುಗಳು ಮನೆಯಲ್ಲಿರುವವರಿಗೆ ಇಷ್ಟವಾಗುತ್ತಿಲ್ಲ.
ಆರ್ಯವರ್ಧನ್ (Aryavardhan) ಬಾಯ್ಬಿಟ್ಟರೆ ಬೈಗಳು ಕೇಳಿಸುತ್ತದೆ. ಹೀಗೆ ಬೈದರೆ ಹೇಗೆ ಎಂದು ಯಾರಾದರೂ ಕೇಳಿದರೆ, ಅದನ್ನೆಲ್ಲ ಕಟ್ ಮಾಡಿ ವಾಹಿನಿಯವರು ಪ್ರಸಾರ ಮಾಡ್ತಾರೆ ಬಿಡಿ ಅಂತಾರೆ. ಒಂದೊಂದು ಸಲ ಬಿಗ್ ಬಾಸ್ ಮನೆಯಲ್ಲಿ ಇರುವವರೂ ಮುಜುಗರ ಪಟ್ಟುಕೊಳ್ಳುವಷ್ಟು ಕೆಟ್ಟ ಪದಗಳಿಂದ ಅವರು ಬೈಯುತ್ತಾರೆ. ಈ ಮಾತುಗಳು ಸ್ವತಃ ಸುದೀಪ್ ಅವರಿಗೂ ನೋವನ್ನುಂಟು ಮಾಡಿವೆ. ಹಾಗಾಗಿಯೇ ಈ ಬಾರಿ ಈ ಕುರಿತು ಸುದೀಪ್ (Sudeep) ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್
ಈ ವಾರ ನಡೆದ ಕಿಚ್ಚನ ಜೊತೆಗಿನ ಮಾತುಕತೆಯಲ್ಲಿ ಆರ್ಯವರ್ಧನ್ ಗುರೂಜಿ ಜೊತೆ ಮಾತನಾಡಿದ ಸುದೀಪ್, ‘ಯಾಕೆ ನೀವು ಅಷ್ಟೊಂದು ಕೆಟ್ಟದ್ದಾಗಿ ಬೈತಿರಿ? ಬೈಗುಳ (Baigula) ಕಂಟ್ರೋಲ್ ಮಾಡಿಕೊಳ್ಳಲು ಆಗುವುದಿಲ್ಲವಾ? ಎಂದು ಕೇಳುತ್ತಾರೆ. ಅದಕ್ಕೆ ಗುರೂಜಿ ಕೊಟ್ಟ ಉತ್ತರಕ್ಕೆ ಸುದೀಪ್ ತೃಪ್ತಿ ಆಗುವುದಿಲ್ಲ. ನಾನು ಹಳ್ಳಿಯಿಂದ ಬಂದವನು, ಹಳ್ಳಿಯ ಬೈಗುಳ ಸಡನ್ನಾಗಿ ಬರುತ್ತವೆ. ಅದು ನನಗೆ ಗೊತ್ತಿಲ್ಲದೇ ಬರುವಂಥದ್ದು ಅಂತಾರೆ.
ಗುರೂಜಿ (Guruji) ಮಾತನ್ನು ಒಪ್ಪಿಕೊಳ್ಳದ ಸುದೀಪ್, ಏನೇನೋ ಮಾತಾಡಿ ಹಳ್ಳಿಯ ಮರ್ಯಾದೆ ತಗೆಯಬೇಡಿ. ಡಾ.ರಾಜ್ ಕುಮಾರ್ ಕೂಡ ಹಳ್ಳಿಯಿಂದಲೇ ಬಂದವರು. ಎಂದೂ ಅವರು ಕೆಟ್ಟ ಮಾತುಗಳನ್ನು ಆಡಲಿಲ್ಲ. ಅದೆಷ್ಟೋ ಜನರು ಹಳ್ಳಿಯಿಂದ ಬಂದಿದ್ದಾರೆ. ಅವರೆಲ್ಲರೂ ಅಂತಹ ಪದಗಳನ್ನು ಬಳಸುವುದಿಲ್ಲ ಎಂದು ಹೇಳುತ್ತಾರೆ. ಹೀಗೆ ಸಮರ್ಥನೆ ಮಾಡಿ ಹಳ್ಳಿಗೆ ಅವಮಾನ ಮಾಡಬೇಡಿ ಎನ್ನುತ್ತಾರೆ ಸುದೀಪ್.
ಮತ್ತೆ ತಮ್ಮ ಮಾತನ್ನು ಮುಂದುವರೆಸುವ ಗುರೂಜಿ, ನಾನು ಹೀಗೆ ಆಡುವುದಕ್ಕೆ ಗ್ರಹಗತಿ ಕಾರಣ ಎಂದು ತಮ್ಮದೇ ಆದ ಲೆಕ್ಕಾಚಾರವನ್ನು ಮುಂದುವರೆಸುತ್ತಾರೆ ಗುರೂಜಿ. ಮೂರನೇ ಮನೆಯಲ್ಲಿ ಶನಿ ಇದ್ದಾನೆ. ಎರಡನೇ ಮನೆ ವಾಸಸ್ಥಾನ ಮತ್ತು ಮೂರನೇ ಮನೆ ಕೋಪ ಸ್ಥಾನ ಎಂದು ಹೇಳಲು ಶುರು ಮಾಡುತ್ತಾರೆ ಗುರೂಜಿ. ನನ್ನಿಂದ ಈ ಮಾತುಗಳು ಬರುತ್ತಿಲ್ಲ, ಗ್ರಹಗತಿಗಳೇ ನನ್ನಿಂದ ಹಾಗೆ ಆಡಿಸುತ್ತವೆ ಎಂದು ಹೇಳಿದಾಗ, ಸುದೀಪ್ ಅದನ್ನು ಒಪ್ಪಿಕೊಳ್ಳುವುದಿಲ್ಲ. ಎಲ್ಲದಕ್ಕೂ ಗ್ರಹಗತಿ ಅನ್ನಬೇಡಿ. ಕೆಟ್ ಕೆಟ್ ಪದಗಳನ್ನು ಆಡೋದು ಬೇಡ ಎನ್ನುತ್ತಾರೆ.