ಬೆಂಗಳೂರು: ಸಾರ್ವಜನಿಕರಿಂದ ತೀವ್ರ ಆಕ್ಷೇಪಣೆ ಒಳಗಾಗಿದ್ದ ಬಿಬಿಎಂಪಿ ವ್ಯಾಪ್ತಿಯಲ್ಲಿ ಸಾಕು ನಾಯಿಗಳಿಗೆ ಲೈಸೆನ್ಸ್ ನಿಯಮಾವಳಿಯಿಂದ ಬಿಬಿಎಂಪಿ ಹಿಂದೆ ಸರಿದಿದೆ.
ಸದ್ಯ ಸಾರ್ವಜನಿಕರಿಂದ ಆಕ್ಷೇಪಣೆ ಪರಿಗಣಿಸಿ ಹೊಸ ನಿಯಮಾವಳಿ ರಚಿಸಲು ತೀರ್ಮಾನಿಸಿರುವ ಬಿಬಿಎಂಪಿ. ಈ ಮೊದಲು ರೂಪಿಸಿದ್ದ ಪ್ರತಿ ಫ್ಲಾಟ್‍ಗೆ 1 ನಾಯಿ, ಮನೆಗೆ 3 ನಾಯಿ ಸಾಕಲು ಅವಕಾಶ ನೀಡುವ ಬಗ್ಗೆ ನಿಯಮಗಳನ್ನು ಹಿಂಪಡೆದಿದೆ.
ಬಿಬಿಎಂಪಿ ನಿಯಮವಾಳಿ ವಿರುದ್ಧ ಹೈಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಾಹೇಶ್ವರಿ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ದ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಎ.ಎಸ್.ಪೊನ್ನಣ್ಣ ಅವರು ನಿಯಮಾವಳಿ ಹಿಂಪಡೆಯುವ ಕುರಿತು ಗುರುವಾರ ತಿಳಿಸಿದರು. ಎಎಜಿ ಎ.ಎಸ್. ಪೊನ್ನಣ್ಣ ಅವರ ಹೇಳಿಕೆಯನ್ನು ಪುರಸ್ಕರಿಸಿದ ನ್ಯಾಯಾಪೀಠ ಪ್ರಾಣಿದಯಾ ಸಂಘಟನೆಗಳು ಪಿಐಎಲ್ ಇತ್ಯರ್ಥಗೊಳಿತು.
ನಿಯಮದಲ್ಲಿ ಏನಿತ್ತು?
ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಮುಂದೆ ನಾಯಿ ಸಾಕಲು ವಾರ್ಷಿಕ 110 ಪರವಾನಗಿ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸಬೇಕು. ಅಲ್ಲದೆ, ತಪ್ಪದೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿಸಬೇಕು. ಈ ನಿಯಮ ಉಲ್ಲಂಘಿಸಿದರೆ 1 ಸಾವಿರ ದಂಡ ಕಟ್ಟಬೇಕು. ಒಂದು ವೇಳೆ ಈ ನಿಯಮವನ್ನು ಉಲ್ಲಂಘಿಸಿದರೆ ಮುದ್ದಿನ ನಾಯಿಯನ್ನು ಮಾಲೀಕರು ಕಳೆದುಕೊಳ್ಳುವ ಸಾಧ್ಯತೆಯಿದೆ.
ಫ್ಲ್ಯಾಟ್‍ಗಳಲ್ಲಿರುವವರು ಒಂದು ನಾಯಿ, ಮನೆಗಳಲ್ಲಿರುವವರು ಗರಿಷ್ಠ ಮೂರು ನಾಯಿ ಸಾಕಲು ಅವಕಾಶ ನೀಡಿತ್ತು. ಹೆಚ್ಚು ನಾಯಿ ಸಾಕಿದರೆ, ಬಿಬಿಎಂಪಿ ನೋಟಿಸ್ ನೀಡುವ ಹಾಗೂ ನಿಗದಿತ ಅವಧಿಯೊಳಗೆ ನೋಟಿಸ್‍ಗೆ ಉತ್ತರಿಸಬೇಕು. ನಿಯಮ ಉಲ್ಲಂಘಿಸುವವರ ನಾಯಿಯನ್ನು ವಶಕ್ಕೆ ಪಡೆದು ಬಿಬಿಎಂಪಿಯ ಶ್ವಾನ ಸಂತಾನ ನಿಯಂತ್ರಣ ಕೇಂದ್ರದಲ್ಲಿಟ್ಟು, ಮುಂದೆ ಹರಾಜು ಹಾಕಲಾಗುತ್ತದೆ ಅಥವಾ ಸಾಕುವವರಿಗೆ ಉಚಿತವಾಗಿ ಕೊಡಲಾಗುತ್ತದೆ ಎಂದು ಹೇಳಿತ್ತು.
ನಾಯಿಗಳ ಕುತ್ತಿಗೆಗೆ ಪಟ್ಟಿ ಕಟ್ಟಿ ಕಾಲರ್ ಐಡಿ ಹಾಕಬೇಕು. ಈ ಪಟ್ಟಿಯಲ್ಲಿ ನಾಯಿಯ ಆರೋಗ್ಯ, ಲಸಿಕೆ ಕೊಡಿಸಿದ್ದು, ಮಾಲೀಕರ ವಿವರ, ಪರವಾನಗಿ ಸಂಖ್ಯೆ ಮೊದಲಾದ ಮಾಹಿತಿ ಇರಬೇಕು. ಬೀದಿ ನಾಯಿಗಳನ್ನು ಹಿಡಿದು ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಿ ಮೂಲ ಸ್ಥಳದಲ್ಲೇ ವಾಪಸ್ ಬಿಡಲಾಗುತ್ತದೆ. ಒಂದು ವೇಳೆ ನಾಯಿಗಳಿಂದ ತೊಂದರೆ ಆಗಿದ್ದಲ್ಲಿ ಬಿಬಿಎಂಪಿಗೆ ದೂರು ನೀಡಬಹುದು. ಅದನ್ನು ಆಧರಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿಬಿಎಂಪಿ ತಿಳಿಸಿತ್ತು.