ನವದೆಹಲಿ: ದೇಶದ ರಾಜಕೀಯದಲ್ಲಿ ಮಹಿಳಾ ಮೀಸಲಾತಿ (Women Reservation Bill) ಪ್ರಮಾಣ ಹೆಚ್ಚುಗೊಳಿಸುವ ಪ್ರಕ್ರಿಯೆಗೆ ವೇಗ ಸಿಕ್ಕಿದೆ.
2011ರ ಜನಗಣತಿ (2011 Census) ಪ್ರಕಾರವೇ ಮಹಿಳಾ ಮೀಸಲಾತಿ ನಿಗದಿಯಾಗಲಿದೆ. ಆಗ ಮಹಿಳಾ ಮೀಸಲಾತಿಯ ಪ್ರಕಾರ 273 ಸ್ಥಾನಗಳು ನಿಗದಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
2029ರ ಚುನಾವಣೆಗೆ ದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆಯು 816ಕ್ಕೆ ಹೆಚ್ಚಾಗಲಿದ್ದು, ಪ್ರತಿ ಲೋಕಸಭೆ(Lok Sabha) ಹಾಗೂ ವಿಧಾನಸಭೆಗಳಲ್ಲಿ (Vidhan Sabha) ಸೀಟ್ ಸಂಖ್ಯೆ ಶೇ.50ರಷ್ಟು ಹೆಚ್ಚಾಗಲಿದೆ.
ಈ ಸಂಬಂಧ ನಾರಿಶಕ್ತಿ ವಂದನಾ ಅಭಿಯಾನದಡಿ ವಿಪಕ್ಷಗಳನ್ನು ಸಂಪರ್ಕಿಸಲು ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆ ನಡೆಸಿದ್ದು, ವಿಪಕ್ಷ ನಾಯಕರಿಗೆ ವಿವರಣೆ ಕೊಟ್ಟಿದ್ದಾರೆ. ಅಲ್ಲದೆ ಇದೇ ಅಧಿವೇಶನದಲ್ಲೇ ಮಸೂದೆ ಮಂಡಿಸುವ ಸಾಧ್ಯತೆ ಇದೆ. ಇದನ್ನೂ ಓದಿ: ಅಧಿಕಾರಿ ಆತ್ಮಹತ್ಯೆಗೆ ಪ್ರಚೋದನೆ ಆರೋಪ – ಪಂಜಾಬ್ ಮಾಜಿ ಸಚಿವ ಲಾಲ್ಜಿತ್ ಭುಲ್ಲರ್ ಅರೆಸ್ಟ್
ಸೆಪ್ಟೆಂಬರ್ 20, 2023 ರಂದು ನಾರಿ ಶಕ್ತಿ ವಂದನ್ ಅಧಿನಿಯಮ್ (ಮಹಿಳಾ ಮೀಸಲಾತಿ ಮಸೂದೆ, 2023) ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. 454 ಸದಸ್ಯರು ಮಸೂದೆ ಪರವಾಗಿ ಮತ ಚಲಾಯಿಸಿದ್ದರೆ ಮಸೂದೆ ವಿರುದ್ಧ ಇಬ್ಬರು ಮತ ಚಲಾಯಿಸಿದ್ದರು. ಸೆಪ್ಟೆಂಬರ್ 21 ರಂದು ರಾಜ್ಯಸಭೆಯಲ್ಲಿ ಅವಿರೋಧವಾಗಿ ಅಂಗೀಕರಿಸಲಾಗಿತ್ತು.
ಮಹಿಳೆಯರಿಗೆ ರಾಜಕೀಯ ಮೀಸಲಾತಿ ನೀಡಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ (Narendra Modi) ಈ ಮಸೂದೆಯನ್ನು ವಿಶೇಷ ಅಧಿವೇಶನ ಕರೆದು ಮಂಡಿಸಿತ್ತು. ಹೊಸ ಸಂಸತ್ ಭವನದಲ್ಲಿ ಮಂಡನೆಯಾದ ಈ ಮೊದಲ ಮಸೂದೆಗೆ ಬಹುತೇಕ ವಿರೋಧ ಪಕ್ಷಗಳು ಬೆಂಬಲ ವ್ಯಕ್ತಪಡಿಸಿದ ಹಿನ್ನೆಲೆ ಯಾವುದೇ ತಕರಾರು ಇಲ್ಲದೇ ಇದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿತ್ತು.

