ಉಡುಪಿ: ತುಂಬು ಗರ್ಭಿಣಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳದ ಅಮಾನವೀಯ ಘಟನೆ ಉಡುಪಿಯಲ್ಲಿ ನಡೆದಿದೆ.
ಜಿಲ್ಲೆಯ ಕುಂದಾಪುರ ತಾಲೂಕಿನ ಕೋಟೇಶ್ವರ ಗ್ರಾಮದ ಆಶಾ ಎಂಬ ಮಹಿಳೆಗೆ ಭಾನುವಾರ ತಡರಾತ್ರಿ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಆಶಾ ಅವರನ್ನು ಆಟೋ ಮೂಲಕ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಎಂಬ ಉತ್ತರ ಸಿಬ್ಬಂದಿಯಿಂದ ಬಂದಿದೆ. ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂತ ಬಿಟ್ಟಿ ಸಲಹೆ ಕೊಟ್ಟಿದ್ದಾರೆ.
Advertisement
Advertisement
ಕೊನೆಗೆ ಆಶಾ ಅವರನ್ನು ಅದೇ ಆಟೋದಲ್ಲಿ ಕುಂದಾಪುರದ ಶ್ರೀದೇವಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಆಸ್ಪತ್ರೆ ಸೇರಿದ 10 ನಿಮಿಷಕ್ಕೆ ಆಶಾ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಕೊಳ್ಳದ ಬಗ್ಗೆ ಸೋಮವಾರ ಆಶಾ ಅವರ ಕುಟುಂಬಸ್ಥರು ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಲಿಖಿತ ದೂರು ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ಬೇಜಾವಬ್ದಾರಿ ಮತ್ತು ಅವ್ಯವಸ್ಥೆಯ ಕುರಿತು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಸಾಂತ್ವಾನ ಕೇಂದ್ರದ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ಕೊಟ್ಟು ಆಶಾ ಅವರ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.
Advertisement
Advertisement
ವೈದ್ಯರು ಆಸ್ಪತ್ರೆಯಲ್ಲಿ 24 ಗಂಟೆ ಇರಬೇಕು. 108 ಗೆ ಕರೆ ಮಾಡಿದರೆ ಅದೂ ಬರಲಿಲ್ಲ. ತುಂಬು ಗರ್ಭಿಣಿಯರನ್ನು ಮೊದಲು ದಾಖಲು ಮಾಡಿಕೊಳ್ಳಬೇಕು. ನಂತರ ಕೂಡಲೇ ವೈದ್ಯರನ್ನು ಕರೆಸಬೇಕು. ಒಬ್ಬ ವೈದ್ಯರು ರಜೆಯಲ್ಲಿದ್ದರೆ, ಇನ್ನೊಬ್ಬರು ವೈದ್ಯರು ಆಸ್ಪತ್ರೆಯಲ್ಲಿ ಇರಲೇಬೇಕು. ಡಾ. ರೋಹಿಣಿ ಮತ್ತು ಡಾ. ಉದಯ ಶಂಕರ್ ಗೆ ದೂರಿನ ಪ್ರತಿಯನ್ನು ರವಾನೆ ಮಾಡಿದ್ದೇನೆ. ನರ್ಸ್‍ಗಳದ್ದೂ ಇದರಲ್ಲಿ ಬೇಜವಾಬ್ದಾರಿಯಿದೆ. ಬಡವರಿಗೆ ಇರುವ ಸರ್ಕಾರಿ ಆಸ್ಪತ್ರೆಯಲ್ಲಿ ಹೀಗೆ ಆದ್ರೆ ಹೇಗೆ ಎಂದು ಕುಂದಾಪುರದ ಮಹಿಳಾ ಸಾಂತ್ವಾನ ಕೇಂದ್ರದ ಮುಖ್ಯಸ್ಥೆ ರಾಧಾ ದಾಸ್ ಪ್ರಶ್ನೆ ಮಾಡಿದ್ದಾರೆ.