ಗದಗ: ನಮ್ಮ ದೇಶದ ಅನ್ನ ಉಂಡು, ವೈರಿ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು ತಪ್ಪು. ಇದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದ್ದಾರೆ.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 130 ಕೋಟಿ ಜನರೂ ದೇಶ ಭಕ್ತರಾಗಬೇಕು. ದೇಶದ ಸಂಸ್ಕೃತಿಯನ್ನು ಗೌರವವಿಸಬೇಕು, ಸಂವಿಧಾನದ ಚೌಕಟ್ಟಿನಲ್ಲಿ ದೇಶಪ್ರೇಮ ಬೆಳೆಸಬೇಕು. ಈ ಹುಡುಗಿಗೆ ತಿಳುವಳಿಕೆ ಕಡಿಮೆ ಇರುವುದರಿಂದ ಹೀಗೆ ಆಗಿರಬಹುದು. ಇಂತಹ ತಪ್ಪು ಯಾರೇ ಮಾಡಿದರೂ ಕಾನೂನು ಕ್ರಮ ಕೈಗೊಳ್ಳಲಾಗುವುದು. ದೇಶ ದ್ರೋಹದ ಚಟುವಟಿಕೆಗಳನ್ನು ಸರ್ಕಾರ ಸಹಿಸುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
Advertisement
Advertisement
ಮಹದಾಯಿ, ಕಳಸಾ ಬಂಡೂರಿ ಯೋಜನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಡಿಸಿಎಂ ಕಾರಜೋಳ ಸಂತಸ ವ್ಯಕ್ತಪಡಿಸಿ, ಇದು ರಾಜ್ಯಕ್ಕೆ ಸಿಕ್ಕ ಜಯ. ಮಹಾದಾಯಿ, ಕಳಸಾ ಬಂಡೂರಿ ನಮ್ಮ ಭಾಗದ ಜನರ ಬಹುದಿನದ ಹೋರಾಟವಾಗಿತ್ತು. ಟ್ರಿಬ್ಯೂನಲ್ ನಲ್ಲಿ ನಮಗೆ ಗೆಲುವು ಆಗಿದ್ದರೂ, ಗೋವಾ, ಮಹಾರಾಷ್ಟ್ರ, ರಾಜ್ಯದವರು ಖ್ಯಾತೆ ತೆಗೆದು ಕೋರ್ಟ್ ಮೆಟ್ಟಿಲೇರಿದ್ದರು. ಇದರಿಂದಾಗಿ ಟ್ರಿಬ್ಯೂನಲ್ ನೀಡಿದ್ದ ಆದೇಶದ ಕುರಿತ ಗೆಜೆಟ್ ನೋಟಿಫಿಕೇಷನ್ ತಡವಾಗಿತ್ತು. ಆದರೆ ಸುಪ್ರೀಂ ಕೋರ್ಟ್ ಟ್ರಿಬ್ಯೂನಲ್ ಆದೇಶದಂತೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಆದೇಶಿಸಿದೆ. ಇದನ್ನು ಸ್ವಾಗತಿಸುತ್ತೇನೆ ಎಂದರು.
Advertisement
Advertisement
ಪ್ರಥಮ ಹಂತದಲ್ಲಿ ಜಯ ಸಿಕ್ಕಿದೆ, ಬಂದ ನೀರನ್ನು ಕುಡಿಯಲು, ನೀರಾವರಿಗೆ ಬಳಸಿಕೊಳ್ಳುವ ಕುರಿತು ಯೋಜನೆ ರೂಪಿಸಲು ನಮ್ಮ ಸರ್ಕಾರ ಬದ್ಧವಿದೆ. ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪಾಲಿಸಬೇಕು. ಬೇಗನೆ ನೋಟಿಫಿಕೆಷನ್ ಆಗುವಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.