ಎಲ್ಲಾ ಮೊಬೈಲ್‌ಗಳಲ್ಲಿ (Mobile) ʼಸಂಚಾರ್ ಸಾಥಿʼ ಆ್ಯಪ್ (Sanchar Saathi App) ಪ್ರಿ-ಇನ್ಸ್ಟಾಲ್ ಮಾಡಬೇಕು ಎಂದು ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ ಇದೀಗ ತನ್ನ ಆದೇಶವನ್ನು ಹಿಂಪಡೆದಿದೆ. ವಿರೋಧ ಪಕ್ಷಗಳಿಂದ ತೀವ್ರ ವಿರೋಧದ ಬಳಿಕ ಕೇಂದ್ರ ಸರ್ಕಾರದ ‘ಸಂಚಾರ್ ಸಾಥಿ’ ಆ್ಯಪ್ ಪೂರ್ವ-ಸ್ಥಾಪನೆ ಕಡ್ಡಾಯವಲ್ಲ ಎಂದು ದೂರ ಸಂಪರ್ಕ ಇಲಾಖೆ (DoT) ಹೇಳಿದೆ. ಹಾಗಿದ್ರೆ ಏನಿದು ಸಂಚಾರ್ ಸಾಥಿ ಆ್ಯಪ್? ಇದು ಹೇಗೆ ಕಾರ್ಯ ನಿರ್ವಹಿಸುತ್ತದೆ? ಇದರಿಂದಾಗುವ ಪ್ರಯೋಜನಗಳೇನು? ವಿರೋಧ ಪಕ್ಷದಿಂದ ವಿರೋಧವೇಕೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಏನಿದು ಸಂಚಾರ್ ಸಾಥಿ?
2023ರಲ್ಲಿ ಪರಿಚಯಿಸಿದ ಸಂಚಾರ್ ಸಾಥಿ ವೆಬ್‌ಸೈಟ್‌ನ ಮುಂದುವರಿದ ಆವೃತ್ತಿಯೇ ಈ ಹೊಸ ಆ್ಯಪ್. ಈ ವರ್ಷದ ಜನವರಿಯಲ್ಲಿ ದೂರಸಂಪರ್ಕ ಇಲಾಖೆಯು ಆಂಡ್ರಾಯ್ಡ್ ಹಾಗೂ ಐಒಎಸ್ ಬಳಕೆದಾರರಿಗೆ ಈ ಆ್ಯಪ್ಅನ್ನು ಬಿಡುಗಡೆ ಮಾಡಿತ್ತು. ಈ ಆ್ಯಪ್ ಅಳವಡಿಸಿದ ಬಳಿಕ ಮೊಬೈಲ್ ಕಳೆದು ಹೋದರೆ ಅಥವಾ ಕಳ್ಳತನವಾದರೆ ಬಳಕೆದಾರರು ಯಾವುದೇ ನೆಟ್‌ವರ್ಕ್ ಇದ್ದರೂ ಮೊಬೈಲ್ ಅನ್ನು ಬ್ಲಾಕ್ ಮಾಡಬಹುದು. ಬ್ಲಾಕ್ ಆದ ಬಳಿಕ ದೇಶದ ಯಾವುದೇ ಭಾಗದಲ್ಲಿ ಮೊಬೈಲ್ ಬಳಕೆಯಾದರೂ ಕಾನೂನು ಜಾರಿ ಸಂಸ್ಥೆಗಳಿಗೆ ತಿಳಿಯಲಿದೆ.
ಸಂಚಾರ್ ಸಾಥಿ ಅಪ್ಲಿಕೇಶನ್ ಇಂದ ಕಳೆದುಹೋದ ನಿಮ್ಮ ಸ್ಮಾರ್ಟ್‌ಫೋನ್‌ಗಳನ್ನು ಪತ್ತೆ ಮಾಡಲು ಸಾಧ್ಯವಿದೆ. ಈ ಉದ್ದೇಶಕ್ಕಾಗಿ ಟೆಲಿಕಾಂ ಇಲಾಖೆಯ ಅಡಿಯಲ್ಲಿ ಸೆಂಟರ್ ಫಾರ್ ಡೆವಲಪ್ಮೆಂಟ್ ಆಫ್ ಟೆಲಿಮ್ಯಾಟಿಕ್ಸ್ (ಸಿ-ಡಾಟ್) ಸಂಚಾರ್ ಸಾಥಿ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ. ಕಳೆದುಹೋದ ಸ್ಮಾರ್ಟ್ ಫೋನ್‌ಗಳನ್ನು ನಿರ್ಬಂಧಿಸಲು, ಪತ್ತೆಹಚ್ಚಲು ಮತ್ತು ಮರುಪಡೆಯಲು ಅನುವು ಮಾಡಿಕೊಡುತ್ತದೆ.
ಕೇಂದ್ರದ ಆದೇಶವೇನು?
ಭಾರತದಲ್ಲಿ ತಯಾರಾಗುವ ಅಥವಾ ಆಮದು ಮಾಡಿಕೊಳ್ಳುವ ಎಲ್ಲ ಮೊಬೈಲ್‌ಗಳಲ್ಲಿಯೂ ʼಸಂಚಾರ್ ಸಾಥಿʼ ಆ್ಯಪ್ ಅನ್ನು ಮೊದಲೇ ಇನ್ಸ್ಟಾಲ್ ಮಾಡಿರಬೇಕು. ಈಗಾಗಲೇ ಮಾರುಕಟ್ಟೆಯಲ್ಲಿರುವ (ಇನ್ನೂ ಖರೀದಿಯಾಗದ) ಮೊಬೈಲ್‌ಗಳಲ್ಲಿ ಮೊದಲ ಸಾಫ್ಟ್‌ವೇರ್ ಅಪ್‌ಡೇಟ್ ವೇಳೆ ಈ ಆ್ಯಪ್ ಅನ್ನು ಬಳಕೆದಾರರಿಗೆ ನೀಡಬೇಕು. ಈ ಆ್ಯಪ್ ಅನ್ನು ಇನ್ಸ್ಟಾಲ್ ಮಾಡಿರುವ ಹೊಸ ಮೊಬೈಲ್‌ಗಳನ್ನು ʼಸೆಟ್ಟಿಂಗ್ʼ ಮಾಡುವಾಗಲೇ ಬಳಕೆದಾರರಿಗೆ ಈ ಆ್ಯಪ್ ಇರುವುದು ಸುಲಭವಾಗಿ ಕಾಣುವಂತೆ ಮಾಡಬೇಕು. ಈ ಆ್ಯಪ್ ಡಿಸೇಬಲ್ ಆಗಲಿ ನಿರ್ಬಂಧಿಸುವುದಾಗಲಿ ಮಾಡುವಂತಿಲ್ಲ ಎಂದು ಸಚಿವಾಲಯ ಆದೇಶ ಹೊರಡಿಸಿತ್ತು.
ಅಲ್ಲದೇ ತಯಾರಿಕಾ ಕಂಪನಿಗಳು ಮತ್ತು ಮೊಬೈಲ್‌ಗಳನ್ನು ಆಮದು ಮಾಡಿಕೊಳ್ಳುವ ಕಂಪನಿಗಳು ಆದೇಶ ಪ್ರಕಟವಾದ 120 ದಿನಗಳ ಒಳಗೆ ಆ್ಯಪ್ ಇನ್ಸ್ಟಾಲ್ ಆದ ಕುರಿತು ವರದಿ ನೀಡಬೇಕು ಎಂದು ಸೂಚಿಸಲಾಗಿತ್ತು.
ಪ್ರತಿಪಕ್ಷಗಳ ಕಿಡಿ:
ಸರ್ಕಾರದ ಈ ನಿರ್ದೇಶನಕ್ಕೆ ವಿರೋಧ ಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸೂಚನೆಗಳನ್ನು ಅಸಂವಿಧಾನಿಕವೆಂದು ಕರೆದಿರುವ ಕಾಂಗ್ರೆಸ್, ಕೇಂದ್ರ ತೆಗೆದುಕೊಂಡ ನಿರ್ಧಾರವನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿತ್ತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಗೌಪ್ಯತೆಯ ಹಕ್ಕು ಸಂವಿಧಾನದ 21ನೇ ವಿಧಿಯ ಅಡಿಯಲ್ಲಿ ಸಂರಕ್ಷಿತ ಮೂಲಭೂತ ಹಕ್ಕಾಗಿದೆ. ನಾಗರಿಕರ ಫೋನ್‌ಗಳಲ್ಲಿ ತೆಗೆದುಹಾಕಲಾಗದ ಸರ್ಕಾರಿ ಆ್ಯಪ್ ಅನ್ನು ಕಡ್ಡಾಯಗೊಳಿಸುವುದು ಮೇಲ್ವಿಚಾರಣೆಯ ಸಾಧನವಾಗಿ ಪರಿಣಮಿಸುತ್ತದೆ, ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಕಿಡಿಕಾರಿದ್ದರು.
ಆ್ಯಪ್ ಅಳವಡಿಕೆಗೆ ಆದೇಶ ಮಾಡಿರುವುದನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪಕ್ಷದ ನಾಯಕಿ ಪ್ರಿಯಾಂಕಾ ವಾದ್ರಾ, ‘ಸಂಚಾರ್ ಸಾಥಿ ಒಂದು ಗೂಢಚಾರಿ ಅಪ್ಲಿಕೇಶನ್ ಆಗಿದ್ದು, ಇದು ಸ್ಪಷ್ಟವಾಗಿ ಹಾಸ್ಯಾಸ್ಪದವಾಗಿದೆ. ನಾಗರಿಕರಿಗೆ ಗೌಪ್ಯತೆಯ ಹಕ್ಕಿದೆ. ಇದು ಸ್ನೂಪಿಂಗ್ ಅಪ್ಲಿಕೇಶನ್ ಆಗಿದ್ದು, ತಕ್ಷಣವೇ ಇದನ್ನು ಹಿಂಪಡೆಯಬೇಕು’ ಎಂದು ಆಗ್ರಹಿಸಿದ್ದರು. ಆಪ್ ನಾಯಕ ಅರವಿಂದ ಕೇಜ್ರಿವಾಲ್ ಸೇರಿ ಅನೇಕರು ಇದೇ ರೀತಿ ಒತ್ತಾಯಿಸಿದ್ದರು.
ಆದೇಶ ಹಿಂಪಡೆಯುವ ಮೊದಲೇ ಈ ಬಗ್ಗೆ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಅಪ್ಲಿಕೇಶನ್ ಸಂಪೂರ್ಣವಾಗಿ ಐಚ್ಛಿಕ. ನೀವು ಅದನ್ನು ಅಳಿಸಲು ಬಯಸಿದರೆ, ಅದನ್ನು ನೀವು ಡಿಲೀಟ್ ಮಾಡಬಹುದು. ನೀವು ಅದನ್ನು ಬಳಸಲು ಬಯಸದಿದ್ದರೆ, ನೋಂದಾಯಿಸಬೇಡಿ. ನೀವು ನೋಂದಾಯಿಸಿದರೆ, ಅದು ಸಕ್ರಿಯವಾಗಿರುತ್ತದೆ; ಇಲ್ಲದಿದ್ದರೆ, ಅದು ನಿಷ್ಕ್ರಿಯವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದರು.
ಒಂದೇ ದಿನ 10% ಹೆಚ್ಚುವರಿ ಡೌನ್‌ಲೋಡ್:
ಸರ್ಕಾರದ ಸಂಚಾರ್ ಸಾಥಿ ಅಪ್ಲಿಕೇಶನ್ ಬಳಕೆಯನ್ನು ಕಡ್ಡಾಯಗೊಳಿಸಿದ ಸರ್ಕಾರದ ಆದೇಶದ ಬೆನ್ನಲ್ಲೇ ಸಾಕಷ್ಟು ವಿವಾದ ಸೃಷ್ಟಿಯಾಗಿತ್ತು. ಈ ವಿವಾದದ ನಡುವೆಯೂ ಡಿ.2ರಂದು ಅಪ್ಲಿಕೇಷನ್ ಡೌನಲೋಡ್‌ಗಳು ಹೆಚ್ಚಾಗಿದೆ ಎಂದು ದೂರಸಂಪರ್ಕ ಇಲಾಖೆ ಹೇಳಿದೆ.
ದೂರಸಂಪರ್ಕ ಇಲಾಖೆಯ ಮೂಲಗಳ ಪ್ರಕಾರ, ಮಂಗಳವಾರ ಸುಮಾರು 6,00,000 ಜನರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿದ್ದಾರೆ. ಇದು ಸಾಮಾನ್ಯ ದಿನದಲ್ಲಿ ಸುಮಾರು 60,000 ಆಗಿತ್ತು. ಅಂದರೆ ಒಂದೇ ದಿನದಲ್ಲಿ ಡೌನ್‌ಲೋಡ್‌ಗಳು ಹತ್ತು ಪಟ್ಟು ಹೆಚ್ಚಾಗಿದೆ. ಸರ್ಕಾರ ಆದೇಶ ಹೊರಡಿಸುವ ಮೊದಲೇ 15 ಮಿಲಿಯನ್ ಜನರು ಸಂಚಾರ್ ಸಾಥಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡಿದ್ದರು.
ಸಂಚಾರ್ ಸಾಥಿಯ ಪ್ರಯೋಜನಗಳೇನು?
ಕಳೆದುಹೋದ ಮೊಬೈಲ್ ಸಾಧನಗಳ ಪತ್ತೆ:
ನಾಗರಿಕರು ಪೋರ್ಟಲ್ ಮೂಲಕ ಕಳೆದುಹೋದ ಅಥವಾ ಕಳುವಾದ ಮೊಬೈಲ್ ಸಾಧನಗಳನ್ನು ವರದಿ ಮಾಡಬಹುದು. ಭಾರತದ ಎಲ್ಲಾ ಟೆಲಿಕಾಂ ನೆಟ್‌ವರ್ಕ್‌ಗಳಲ್ಲಿ ಈ ಸಾಧನಗಳನ್ನು ನಿರ್ಬಂಧಿಸುವುದನ್ನು ಪೋರ್ಟಲ್ ಸುಗಮಗೊಳಿಸುತ್ತದೆ. ಬ್ಲಾಕ್ ಮಾಡಲಾದ ಸಾಧನ ಕಂಡುಬಂದರೆ, ಅದನ್ನು ಪೋರ್ಟಲ್ ಮೂಲಕ ಅನ್‌ಲಾಕ್ ಮಾಡಬಹುದು.
ಮೊಬೈಲ್ ಸಂಪರ್ಕಗಳ ನಿರ್ವಹಣೆ:
ಬಳಕೆದಾರರು ತಮ್ಮ ಹೆಸರಿನಲ್ಲಿ ಎಷ್ಟು ಮೊಬೈಲ್ ಸಂಪರ್ಕಗಳನ್ನು ನೋಂದಾಯಿಸಲಾಗಿದೆ ಎಂಬುದನ್ನು ಪರಿಶೀಲಿಸಬಹುದು. ಬಳಕೆದಾರರು ತಾವು ತೆಗೆದುಕೊಳ್ಳದ ಅಥವಾ ಅಗತ್ಯವಿಲ್ಲದ ಯಾವುದೇ ಸಂಪರ್ಕಗಳನ್ನು ವರದಿ ಮಾಡಲು ಪೋರ್ಟಲ್ ಅನುಮತಿಸುತ್ತದೆ.
ಮೊಬೈಲ್ ಹ್ಯಾಂಡ್‌ಸೆಟ್ ನೈಜತೆಯನ್ನು ಪರಿಶೀಲಿಸುವುದು:
ಬಳಕೆದಾರರು IMEI ಸಂಖ್ಯೆಯನ್ನು ನಮೂದಿಸುವ ಮೂಲಕ ತಮ್ಮ ಮೊಬೈಲ್ ಹ್ಯಾಂಡ್‌ಸೆಟ್‌ಗಳ ದೃಢೀಕರಣವನ್ನು ಪರಿಶೀಲಿಸಬಹುದು.
ಮೋಸದ ಅಂತರರಾಷ್ಟ್ರೀಯ ಕರೆಗಳನ್ನು ವರದಿ ಮಾಡುವುದು:
ನಾಗರಿಕರು ಭಾರತೀಯ ಸಂಖ್ಯೆಗಳೊಂದಿಗೆ (+91-xxxxxxxxxxx) ಸ್ವೀಕರಿಸಿದ ಅಂತರರಾಷ್ಟ್ರೀಯ ಕರೆಗಳನ್ನು ವರದಿ ಮಾಡಬಹುದು. ಇದು ಇಂಟರ್ನೆಟ್ ಬಳಸಿ ಅಕ್ರಮ ಟೆಲಿಕಾಂ ಸೆಟಪ್‌ಗಳನ್ನು ಗುರುತಿಸಲು ಮತ್ತು ಪರಿಹರಿಸಲು ಸಹಾಯ ಮಾಡುತ್ತದೆ.
ಸಾಮಾನ್ಯ ಅರಿವು:
ಪೋರ್ಟಲ್ ಟೆಲಿಕಾಂ ಮತ್ತು ಅಂತಿಮ-ಬಳಕೆದಾರರ ಭದ್ರತೆಯ ವಿವಿಧ ಅಂಶಗಳ ಕುರಿತು ಮಾಹಿತಿ ಮತ್ತು ನವೀಕರಣಗಳನ್ನು ಸಹ ಒದಗಿಸುತ್ತದೆ.
ಅಪ್ಲಿಕೇಶನ್‌ನಿಂದ ಆಗುವ ಪರಿಣಾಮಗಳೇನು?
-ಇದುವರೆಗೆ 7,00,000 ಕ್ಕೂ ಹೆಚ್ಚು ಕಳೆದುಹೋದ ಫೋನ್‌ಗಳನ್ನು ಮರುಪಡೆಯಲಾಗಿದೆ.
-ಅಕ್ಟೋಬರ್ ತಿಂಗಳಲ್ಲೇ ಸುಮಾರು 50,000 ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ.
-3.7 ಮಿಲಿಯನ್ ಕದ್ದ/ಕಳೆದುಹೋದ ಸಾಧನಗಳನ್ನು ನಿರ್ಬಂಧಿಸಲಾಗಿದೆ.
-3 ಕೋಟಿಗೂ ಹೆಚ್ಚು ವಂಚನೆಯ ಸಿಮ್ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.
-5 ಮಿಲಿಯನ್‌ಗೂ ಹೆಚ್ಚು ಅಪ್ಲಿಕೇಶನ್ ಡೌನ್‌ಲೋಡ್ ಆಗಿದೆ.
-ಸಂಚಾರ್ ಸಾಥಿ ಅಪ್ಲಿಕೇಶನ್ 22 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿದೆ.

