Connect with us

Bengaluru Rural

ಬಡವರಿಗಾಗಿ ಈ ವರ್ಷದಲ್ಲಿ 50 ಸಾವಿರ ಮನೆಗಳ ನಿರ್ಮಾಣ – ಸೋಮಣ್ಣ ಭರವಸೆ

Published

on

ಬೆಂಗಳೂರು: ಬಡವರಿಗೆ ಸೂರು ಕಲ್ಪಿಸುವ ಸಲುವಾಗಿ ವರ್ಷಾಂತ್ಯದ ವೇಳೆಗೆ 50 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ನೆಲಮಂಗಲ ಸಮೀಪದ ದಾಸನಪುರ ಹೋಬಳಿಯ ಅಗ್ರಹಾರಪಾಳ್ಯದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸೋಮಣ್ಣ ಅವರು ಈ ಬಗ್ಗೆ ಭರವಸೆ ನೀಡಿದರು. ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ ವತಿಯಿಂದ 1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆಯಡಿ ಜಿ+3 ಮಾದರಿಯಲ್ಲಿ ನಿರ್ಮಿಸುತ್ತಿರುವ ವಸತಿ ಸಮುಚ್ಚಯ ಕಾಮಗಾರಿಗೆ ಸೋಮಣ್ಣ ಅವರು ಶಂಕುಸ್ಥಾಪನೆ ನೆರವೇರಿಸಿದರು.

Advertisement
Continue Reading Below

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದಿಂದ 600 ಕೋಟಿ ರೂ. ಅನುದಾನ ನೀಡಿದ್ದರೂ ಕಾಂಗ್ರೆಸ್ ಹಾಗೂ ಸಮ್ಮಿಶ್ರ ಸರ್ಕಾರಗಳ ಅವಧಿಯಲ್ಲಿ ಚಾಲನೆ ಸಿಗದೆ, ಈ ಯೋಜನೆಯು ಕಳೆದ ನಾಲ್ಕು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ವಸತಿ ಯೋಜನೆಯ ಭಾಗವಾಗಿ ಇಂದು 843 ಬಹುಮಹಡಿ ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ಒಂದು ವರ್ಷದ ಅವಧಿಯಲ್ಲಿ ಕನಿಷ್ಟ 50 ಸಾವಿರ ಮನೆ ನಿರ್ಮಾಣ ಮಾಡಿ ಬಡವರಿಗೆ ಹಸ್ತಾಂತರ ಮಾಡಲಾಗುವುದು. ಯಲಹಂಕ ಕ್ಷೇತ್ರದಲ್ಲಿ 3 ಸಾವಿರ ಮನೆಗಳ ನಿರ್ಮಾಣ ಮಾಡಲಾಗುವುದು ಎಂದು ಭರವಸೆ ನೀಡಿದರು.

ಸರ್ಕಾರದಿಂದ ಕಟ್ಟುತ್ತಿರುವ ಆಸ್ಪತ್ರೆ, ಆಟದ ಮೈದಾನ, ಕೊಳಚೆ ನೀರು ಸಂಸ್ಕರಣಾ ಘಟಕ ಸೇರಿ ಅಗತ್ಯ ಮೂಲಸೌಲಭ್ಯಗಳನ್ನು ಸಮುಚ್ಚಯಗಳಲ್ಲಿ ಒದಗಿಸುವ ಮೂಲಕ ಪ್ರಧಾನಿ ಮೋದಿ ಹಾಗೂ ಸಿಎಂ ಯಡಿಯೂರಪ್ಪ ಅವರ ಮಹತ್ವಾಕಾಂಕ್ಷಿ ವಸತಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು ಎಂದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿವಿಧ ವಸತಿ ಯೋಜನೆಗಳಲ್ಲಿ ಲಭ್ಯವಿರುವ ಸುಮಾರು 4 ಲಕ್ಷ ರೂ. ಅನುದಾನ ಹಾಗೂ ಬ್ಯಾಂಕ್‍ಗಳಲ್ಲಿ 2 ಲಕ್ಷ ರೂ. ಸಾಲ ಸೌಲಭ್ಯ ಒದಗಿಸುವ ಮೂಲಕ ಸುಮಾರು 6 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಿಸಿ ಬಡವರ ಕನಸನ್ನು ನನಸು ಮಾಡಲು ಬದ್ಧವಿರುವುದಾಗಿ ತಿಳಿಸಿದರು.

ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್ ವಿಶ್ವನಾಥ್ ಮಾತನಾಡಿ, ಯಲಹಂಕವನ್ನು ಗುಡಿಸಲು ರಹಿತ ಮಾದರಿ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಹಿಂದಿನ ಸರ್ಕಾರಗಳ ಆಡಳಿತದ ಅವಧಿಯಲ್ಲಿ ಕಾರಣಾಂತರಗಳಿಂದ ಮನೆ ಬಡವರಿಗೆ ನೀಡಲು ಸಾಧ್ಯವಾಗಿರಲಿಲ್ಲ. ಪ್ರಧಾನ ಮಂತ್ರಿ ಅವಾಸ್ ಯೋಜನೆಯಡಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಕ್ಷೇತ್ರದ, ಕುಕ್ಕನಹಳ್ಳಿ, ತೋಟಗೆರೆ, ಪಿಳ್ಳಹಳ್ಳಿ, ಲಕ್ಷ್ಮಿಪುರ, ಬಿಳಿಜಾಜಿ, ದಾಸನಪುರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮನೆ ನಿರ್ಮಾಣ ಮಾಡಲಾಗುವುದು. ಕ್ಷೇತ್ರದಲ್ಲಿ 10 ಸಾವಿರ ಮನೆ ನಿರ್ಮಾಣ ಮಾಡುವ ಗುರಿ ಇದೆ. ಸರ್ಕಾರದಿಂದ ಸಿಗುವ ಎಲ್ಲಾ ಯೋಜನೆಗಳನ್ನು ಕ್ಷೇತ್ರಕ್ಕೆ ತರುವುದಾಗಿ ಭರವಸೆ ನೀಡಿದರು.

ಜಿಲ್ಲಾಧಿಕಾರಿ ಶಿವಮೂರ್ತಿ, ರಾಜೀವ್ ಗಾಂಧಿ ವಸತಿ ನಿಗಮ ನಿ. ಎಂಡಿ ಡಾ.ರಾಮ ಪ್ರಸಾದ್ ಮನೋಹರ್, ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಬೆಂಗಳೂರು ನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಜಿ.ಮರಿಸ್ವಾಮಿ, ಜಿ.ಪಂ ಸದಸ್ಯ ರವಿಕುಮಾರ್, ಬೆಂಗಳೂರು ಉತ್ತರ ತಾಲೂಕು ತಹಶೀಲ್ದಾರ್ ಶಿವರಾಜ್, ಗೋಪಾಲಪುರ ಗ್ರಾ.ಪಂ ಅಧ್ಯಕ್ಷ ಟಿ.ಎಂ ಬಸವೇಗೌಡ ಸೇರಿ ಯಲಹಂಕ ಕ್ಷೇತ್ರ ಬಿಜೆಪಿ ಅಧ್ಯಕ್ಷ ಹನುಮಯ್ಯ ಇನ್ನಿತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮನೆಗಳು ಹೇಗಿರಲಿವೆ?
ಸುಮಾರು 5 ಎಕ್ರೆ ಜಮೀನಿನಲ್ಲಿ ಜಿ+3 ಮಾದರಿಯಲ್ಲಿ ನಿರ್ಮಿಸುತ್ತಿರುವ ವಸತಿ ಸಮುಚ್ಚಯದಲ್ಲಿ 836 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಪ್ರತಿ ಮನೆಯನ್ನು 30 ಚ.ಮೀ ವಿಸ್ತೀರ್ಣದಲ್ಲಿ ಒಂದು ಹಾಲ್, ಬೆಡ್ ರೂಂ, ಅಡುಗೆಮನೆ ಸೇರಿದಂತೆ ಪ್ರತ್ಯೇಕ ಸ್ಥಾನದ ಮನೆ, ಶೌಚಾಲಯ, ಕಾಂಕ್ರೀಟ್ ಗೋಡೆಗಳು, ನೆಲಹಾಸಿಗೆಗೆ ವೆಟ್ರಿಫೈಡ್ ಟೈಲ್ಸ್, ಗ್ರಾನೈಟ್ ಬಳಸಿ ಸುಸಜ್ಜಿತವಾಗಿ ನಿರ್ಮಿಸಲಾಗುತ್ತಿದೆ. ಜೊತೆಗೆ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ, ಕುಡಿಯುವ ನೀರು, ಪಂಪ್ ರೂಂ, ಮಳೆ ನೀರು ಕೊಯ್ಲು ಮುಂತಾದ ವ್ಯವಸ್ಥೆಯನ್ನು ಕೂಡ ಒದಗಿಸಲಾಗುತ್ತಿದೆ.

Click to comment

Leave a Reply

Your email address will not be published. Required fields are marked *