Connect with us

Bengaluru City

ಪಬ್ಲಿಕ್ ಟಿವಿ ಕ್ಯಾಮೆರಾ ಕಂಡೊಡನೆ ಸರ್ಕಾರಿ ಕಚೇರಿಯಿಂದ ರಸ್ತೆಯಲ್ಲಿ 2 ಕಿ.ಮೀ ಓಡಿದ ಟಾಪ್ ಅಧಿಕಾರಿ!

Published

on

– ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಯ ಹುಚ್ಚಾಟ
– ಪ್ರಶ್ನೆಗೆ ಹೆದರಿ ಓಡಿ ಹೋದ ಐಟಿ ಮುಖ್ಯಸ್ಥ ಸೂರಿ ಪಾಯಲ್
– ಈತನಿಗೆ ತಿಂಗಳಿಗೆ ಒಂದೂವರೆ ಲಕ್ಷ ಸಂಬಳ

-ಪವಿತ್ರ ಕಡ್ತಲ
ಬೆಂಗಳೂರು: ತಿಂಗಳಿಗೆ ಒಂದೂವರೆ ಲಕ್ಷ ಸಂಪಾದನೆ ಮಾಡೋ ಅಧಿಕಾರಿಯೊಬ್ಬ ಪಬ್ಲಿಕ್ ಟಿವಿ ಕ್ಯಾಮೆರಾ ಕಂಡೊಡನೆ ಸರ್ಕಾರಿ ಕಚೇರಿಯ ಚೇಂಬರ್ ನಿಂದ ಹುಚ್ಚನಂತೆ 2 ಕಿ.ಮೀ ಓಡಿದ್ದಾನೆ. ಓಡಿದ್ದು ಮಾತ್ರವಲ್ಲದೇ ಕ್ಯಾಮೆರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಹೋಗಿ ಕ್ಯಾಮೆರಾಮೆನ್ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

ರಸ್ತೆಯಲ್ಲಿ ಹುಚ್ಚರಂತೆ ಓಡಿದ್ದು ಬೇರೆ ಯಾರು ಅಲ್ಲ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಐಟಿ ಹೆಡ್ ಸೂರಿ ಪಾಯಲ್ ಪಬ್ಲಿಕ್ ಟಿವಿಯ ಪ್ರಶ್ನೆಗೆ ಉತ್ತರ ನೀಡದೇ ರಸ್ತೆಯಲ್ಲೇ ಓಡಿದ್ದಾನೆ.

ಯಾರು ಈ ಅಧಿಕಾರಿ?
ಆಂಧ್ರ ಮೂಲದ ಪಾಯಲ್ ಸಿದ್ದರಾಮಯ್ಯ ಸೊಸೆಗೆ ಸೋದರ ಸಂಬಂಧಿಯಾಗಿದ್ದಾನೆ. ಸೊಸೆ ಸಂಬಂಧಿಗಾಗಿ ಹುದ್ದೆ ಕೊಡಿಸಲು ಸಿದ್ದರಾಮಯ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಲಕ್ಷ್ಮಣ್ ಮೂಲಕ ಪಾಯಲ್ ಗೆ ಕೆಲಸ ಕೊಡಿಸಿದ್ದಾರೆ. ಕೇವಲ 5 ತಿಂಗಳಲ್ಲಿಯೇ ಈತನ ನೇಮಕಾತಿ ಮುಗಿದಿದ್ದು ಅಷ್ಟರಲ್ಲಿಯೇ ಶಿಸ್ತಾಗಿ ಹುದ್ದೆಗೆ ಹಾಜರಾಗಿದ್ದಾನೆ. ಈ ವಿಚಾರ ಪಬ್ಲಿಕ್ ಟಿವಿಗೆ ಗೊತ್ತಾಗುತ್ತಿದ್ದಂತೆ ಸೂರಿ ಪಾಯಲ್‍ನನ್ನು ಪ್ರಶ್ನಿಸಲು ತೆರಳಿದೆ. ಆದರೆ ಕ್ಯಾಮೆರಾ ಕಂಡೊಡನೆ ಈತನಿಗೆ ಭಯ ಶುರುವಾಗಿ ಚರ್ಚ್ ಸ್ಟ್ರೀಟ್ ನಿಂದ ಎಂಜಿ ರೋಡ್, ಚಿನ್ನಸ್ವಾಮಿ ಸ್ಟೇಡಿಯಂ ಗಲ್ಲಿ ಗಲ್ಲಿಯಲ್ಲಿ ಓಡಿದ್ದಾನೆ.

ಉದ್ಯೋಗ ಸಿಕ್ಕಿದ್ದು ಹೇಗೆ?
ಸೂರಿ ಪಾಯಲ್ ಸಾಮಾನ್ಯ ವ್ಯಕ್ತಿಯಲ್ಲ. ಈತನಿಗೆ ಈ ಹುದ್ದೆ ಕೊಡಿಸಬೇಕಾದರೆ ರಾಜಕೀಯ ವಲಯದಲ್ಲೇ ದೊಡ್ಡ ಬಿರುಗಾಳಿ ಎದ್ದಿತ್ತು. ರಾಜಕೀಯ ಮುಖಂಡರು ತಲೆ ಕೆಡಿಸಿಕೊಂಡು ಈತನಿಗೆ ಹುದ್ದೆ ಕೊಡಿಸಿದ್ದರು. ಹಿಂದೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ(ಕೆಐಎಡಿಬಿ) ಈತನಿಗೆ ಸರ್ಕಾರಿ ಹುದ್ದೆ ಕೊಡಿಸಲು ಪ್ರಯತ್ನ ನಡೆದಿತ್ತು. ಆದರೆ ಸಕ್ಸಸ್ ಆಗದೇ ಇದ್ದಾಗ ಸಿದ್ದರಾಮಯ್ಯನವರು ಮಾಸ್ಟರ್ ಪ್ಲಾನ್ ರೂಪಿಸಿ, 6 ತಿಂಗಳು ಕಷ್ಟಪಟ್ಟ ನಂತರ ಮಾಲಿನ್ಯ ನಿಯಂತ್ರಣ ಇತಿಹಾಸವನ್ನೇ ಬದಲಾಯಿಸಿ ಐಟಿ ಹೆಡ್ ಅನ್ನೋ ಹುದ್ದೆ ಕರುಣಿಸಿದ್ದಾರೆ. ಗೊತ್ತು ಗುರಿ ಇಲ್ಲದ ಈ ಸೂರಿ ಪಾಯಲ್‍ಗಾಗಿ ಎಲ್ಲ ನಿಯಮಾವಳಿಗಳನ್ನು ಕೈಬಿಡಲಾಗಿದೆ. ಈತನ ನೇಮಕಕ್ಕೆ ಕಮಿಟಿ ರಚನೆ ಮಾಡಿ ಕೆಪಿಎಸ್ಸಿ ಮೂಲಕ ಆಯ್ಕೆ ಆಗುವಂತೆ ಮಾಡಲಾಗಿದೆ.

ಚೇಸಿಂಗ್ ಆಗಿದ್ದು ಹೀಗೆ:
ಪಬ್ಲಿಕ್ ಟಿವಿ ಪರಿಸರ ಭವನದಲ್ಲಿರುವ ಸೂರಿ ಪಾಯಲ್ ಹೊಸ ಚೇಂಬರ್ ಗೆ ಎಂಟ್ರಿ ಕೊಟ್ಟಿದೆ. ಎಂಟ್ರಿಯಾಗುತ್ತಿದ್ದಂತೆ ಸೂರಿಗೆ ಅಕ್ಕ-ಪಕ್ಕದ ಅಧಿಕಾರಿಗಳು ಕಚೇರಿ ಬಿಟ್ಟು ಬೇರೆ ಕಚೇರಿಗೆ ಪರಾರಿಯಾಗುವಂತೆ ಮಾಹಿತಿ ನೀಡಿದ್ದಾರೆ. ಪಬ್ಲಿಕ್ ಟಿವಿ ಫಾಲೋ ಮಾಡುತ್ತಿರುವ ವಿಚಾರ ಗೊತ್ತಾಗುತ್ತಿದ್ದಂತೆ ಸೂರಿ ಪರಿಸರ ಭವನದಿಂದ ರಸ್ತೆಗಿಳಿದು ಚರ್ಚ್ ಸ್ಟ್ರೀಟ್ ರಸ್ತೆ ದಾಟಿ ಮುಂದೆ ಹೋಗಿದ್ದಾನೆ.

ಅಲ್ಲೇ ಪಕ್ಕದ ಮೋರಿ ಲೆಕ್ಕಿಸದೇ ಹಿಂದೆ ತಿರುಗದೇ ಬಡ ಬಡ ಅಂತ ವೇಗವಾಗಿ ನಡೆದುಕೊಂಡು ಹೋಗಿದ್ದಾನೆ. ಪಬ್ಲಿಕ್ ಟಿವಿ ಆತನನ್ನೇ ಹಿಂಬಾಲಿಸಿಕೊಂಡು ಹೋದಾಗ ಈ ಮಧ್ಯೆ ಕ್ಯಾಮೆರಾಮನ್ ಮೇಲೆ ಹಲ್ಲೆ ಮಾಡುವುದಕ್ಕೆ ಮುಂದಾಗಿದ್ದಾನೆ.

ಕೊನೆಗೆ ಲೋಗೋ ಹಿಡಿದು ಮಾತನಾಡಿಸಬೇಕು ಅನ್ನುವಷ್ಟರಲ್ಲಿ ಎದುರಿನಿಂದ ಜನ ಬಂದರೂ ಲೆಕ್ಕಿಸದೇ ಓಡುವುದಕ್ಕೆ ಶುರು ಮಾಡಿದ್ದಾನೆ. ಬಳಿಕ ಚರ್ಚ್ ಸ್ಟ್ರೀಟ್ ನಿಂದ ಎಂಜಿ ರೋಡ್‍ ಗೆ ಓಡಿ ಹೋಗಿದ್ದಾನೆ. ಅಲ್ಲಿಂದ ಎತ್ತರದ ಡಿವೈಡರ್ ಇದ್ದರೂ ಲೆಕ್ಕಿಸದೇ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದಾನೆ. ಅಲ್ಲಿ ಆತನನ್ನು ಮಾತನಾಡಿಸಿದಾಗ, ನೀವು ಗೂಂಡಾಗಳು ನನ್ನ ಹೊಡೆಯಲು ಜನ ಕರಕೊಂಡು ಬಂದಿದ್ದೀರಿ ಅದಕ್ಕೆ ಓಡಿ ಬಂದೆ ಅಂತ ಕಥೆ ಕಟ್ಟಿದ್ದಾನೆ.

ಬಳಿಕ ಈ ಹುದ್ದೆ ಹೇಗೆ ಸಿಕ್ತು? ಮೇಲಾಧಿಕಾರಿಗಳು ಪರಿಚಯ ಇದ್ದಾರಾ ಎಂದು ಕೇಳಿದಾಗ, ನನಗೆ ಯಾವ ಸಿದ್ದರಾಮಯ್ಯನೂ ಪರಿಚಯ ಇಲ್ಲ. ನಿಮ್ಮ ಮೇಲೆಯೇ ದೂರು ನೀಡ್ತೀನಿ ಅಂತ ಹೇಳಿ ವಾಪಸ್ ಹೋಗಿದ್ದಾನೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Click to comment

Leave a Reply

Your email address will not be published. Required fields are marked *