Connect with us

Bengaluru City

ಧಾರಾವಾಹಿ ಶೂಟಿಂಗ್‍ಗೆ ಅನುಮತಿ ನೀಡಿ ಸರ್ಕಾರದ ಮಹತ್ವದ ನಿರ್ಧಾರ

Published

on

ಬೆಂಗಳೂರು: ಲಾಕ್‍ಡೌನ್ ನಿಂದಾಗಿ ಸ್ಥಗಿತಗೊಂಡಿರುವ ಧಾರಾವಾಹಿ ಶೂಟಿಂಗ್‍ಗಳಿಗೆ ಸರ್ಕಾರ ಅನುಮತಿ ನೀಡಿ ಮಹತ್ವದ ನಿರ್ಧಾರ ಪ್ರಕಟಿಸಿದೆ.

ಆರು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಧಾರಾವಾಹಿ ಶೂಟಿಂಗ್ ಮೇಲೆ ಅವಲಂಬಿತರಾಗಿದ್ದಾರೆ. ಪರಿಣಾಮ ಸರ್ಕಾರ ನಿಯಮಗಳ ಅನ್ವಯ ಮನೆಯ ಒಳಗೆ ನಡೆಯುವ ಶೂಟಿಂಗ್‍ಗಳಿಗೆ ಮಾತ್ರ ಅವಕಾಶ ನೀಡಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಮಾಹಿತಿ ನೀಡಿದ್ದಾರೆ.

ಕೊರೊನಾ ಸಂಬಂಧ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಶೂಟಿಂಗ್ ಮಾಡಲು ಅನುಮತಿ ನೀಡಲಾಗಿದೆ. ಆದರೆ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಇಲ್ಲ. ಅಲ್ಲದೇ ಸಿನಿಮಾ ಹಾಗೂ ರಿಯಾಲಿಟಿ ಶೋಗಳ ಶೂಟಿಂಗ್‍ಗೆ ಅನುಮತಿ ನೀಡಿಲ್ಲ. ಮನೆಯ ಒಳಭಾಗದಲ್ಲಿ ನಡೆಸಲಾಗುವ ಧಾರಾವಾಹಿ ಶೂಟಿಂಗ್‍ಗೆ ಮಾತ್ರ ಅನುಮತಿ ನೀಡಲಾಗಿದೆ.

ಈ ಕುರಿತು ನಿನ್ನೆಯೇ ಮಾಹಿತಿ ನೀಡಿದ್ದ ಸಚಿವ ಆರ್. ಅಶೋಕ್ ಅವರು, ಸಿನಿಮಾ, ಧಾರಾವಾಹಿ ಶೂಟಿಂಗ್ ಯಾವಾಗ ಮಾಡಬಹುದು ಎಂದು ಸಿಎಂ ಜೊತೆ ಚರ್ಚೆ ಮಾಡಿ ಅಂತಿಮ ಪಡಿಸುವುದಾಗಿ ಹೇಳಿದ್ದರು. ಅಲ್ಲದೇ ಶೂಟಿಂಗ್ ವೇಳೆ ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ಸೂಚನೆ ನೀಡಲಾಗುವುದು ಎಂದಿದ್ದರು.

ಇತ್ತ ಮೇ 11ರಿಂದ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಚಿತ್ರೀಕರಣಕ್ಕೆ ಅನುವು ಮಾಡಿಕೊಂಡುವಂತೆ ಟೆಲಿವಿಷನ್ ಅಸೋಸಿಯೇಷನ್ ಅಧ್ಯಕ್ಷ ಎಸ್.ವಿ.ಶಿವಕುಮಾರ್ ಭಾನುವಾರ ಸಿಎಂ ಬಳಿ ಮನವಿ ಮಾಡಿಕೊಂಡಿದ್ದರು. ಕೊರೊನಾದಿಂದ ಮಾರ್ಚ್ 19ರಿಂದ ಕಿರುತೆರೆಯ ಶೂಟಿಂಗ್‍ಗೆ ಬ್ರೇಕ್ ಹಾಕಿತ್ತು. ಹೀಗಾಗಿ ಮತ್ತೆ ರಾಜ್ಯ ಸರ್ಕಾರದ ವತಿಯಿಂದ ಶೂಟಿಂಗ್ ಪ್ರಾರಂಭಿಸಲು ಅನುಮತಿ ಕೊಡಿ ಎಂದು ಎಸ್.ವಿ.ಶಿವಕುಮಾರ್ ಸಿಎಂ ಯಡಿಯೂರಪ್ಪ ಮುಂದೆ ಬೇಡಿಕೆ ಇಟ್ಟಿದ್ದರು. ಅಲ್ಲದೇ ಮೇ 4 ರಿಂದ ರಾಜ್ಯದಲ್ಲಿ ಗ್ರೀನ್ ಮತ್ತು ಆರೆಂಜ್ ಝೋನ್‍ಗಳಲ್ಲಿ ಲಾಕ್‍ಡೌನ್ ಸಡಿಲಿಕೆಯಾಗಿದೆ. ಇದೇ ನಿಟ್ಟಿನಲ್ಲಿ ನಮ್ಮ ಕ್ಷೇತ್ರಕ್ಕೂ ಸಡಿಲಿಕೆ ಮಾಡಬೇಕು. ಧಾರಾವಾಹಿ ಮತ್ತು ರಿಯಾಲಿಟಿ ಶೋಗಳ ಚಿತ್ರೀಕರಣಕ್ಕೆ ಅನುಮತಿ ನೀಡಿದರೆ ಒಳ್ಳೆಯದಾಗುತ್ತದೆ. ಅಂದಾಜು 120 ಧಾರಾವಾಹಿಗಳ ಶೂಟಿಂಗ್ ನಡೆಯುತ್ತಿದ್ದು, 20 ಸಾವಿರ ಕಲಾವಿದರು, ತಂತ್ರಜ್ಞರು ಇದರ ಮೇಲೆ ಅವಲಂಬಿತರಾಗಿದ್ದಾರೆ. ಹೀಗಾಗಿ ನಮ್ಮ ಕ್ಷೇತ್ರಕ್ಕೆ ಅನುಮತಿ ಅವಶ್ಯಕತೆ ಇದೆ ಎಂದು ಮನವಿ ಮಾಡಿದ್ದರು.

Click to comment

Leave a Reply

Your email address will not be published. Required fields are marked *

www.publictv.in