ಚಿಕ್ಕಬಳ್ಳಾಪುರ: ರಾಜ್ಯಸರ್ಕಾರ (Government Of Karnataka) ಕಲ್ಲಿನ ಉತ್ಪನ್ನಗಳ ಮೇಲಿನ ರಾಜಧನ ಹೆಚ್ಚಳ ಮಾಡಿ ಆದೇಶ ಮಾಡಿದೆ. ಇದನ್ನೇ ನೆಪ ಮಾಡಿಕೊಂಡ ಕ್ರಷರ್ ಮಾಲೀಕರು ಏಕಾಏಕಿ ಕಲ್ಲಿನ ಉತ್ಪನ್ನಗಳ ಬೆಲೆ ಏರಿಕೆ ಮಾಡಿದ್ದಾರೆ. ಇದರಿಂದ ರೊಚ್ಚಿಗೆದ್ದ ಟಿಪ್ಪರ್ ಮಾಲೀಕರು ಕಲ್ಲಿನ ಉತ್ಪನ್ನಗಳ ಮಾರಾಟಗಾರರು ನೂರಾರು ಟಿಪ್ಪರ್ ಗಳನ್ನ ಕ್ರಷರ್‌ಗಳ ರಸ್ತೆಗೆ ಅಡ್ಡ ಹಾಕಿ ಭಾರೀ ಮುಷ್ಕರ ( Tipper Owner Strike) ನಡೆಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಮುಷ್ಕರ ಯಾಕೆ..?
ಮನೆ, ರಸ್ತೆ, ಅಪಾರ್ಟ್‍ಮೆಂಟ್ ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ಟೋಕೆ ಎಂ ಸ್ಯಾಂಡ್, ಜಲ್ಲಿ ಕಲ್ಲು ಸೇರಿ ಕಲ್ಲಿನ ಉತ್ಪನ್ನಗಳು ಬೇಕೇಬೇಕು. ಅದ್ರಲ್ಲೂ ರಾಜಧಾನಿ ಬೆಂಗಳೂರಿಗೆ ಸರಬರಾಜು ಆಗೋ ಬಹುತೇಕ ಎಂ ಸ್ಯಾಂಡ್ ಬರೋದೇ ಚಿಕ್ಕಬಳ್ಳಾಪುರದಿಂದ. ಆದ್ರೆ ಈಗ ಚಿಕ್ಕಬಳ್ಳಾಪುರದ (Chikkaballapura) ಯಲಗಲಹಳ್ಳಿ ಕ್ರಷರ್ ಝೋನ್ ಬಳಿ ಎಂ ಸ್ಯಾಂಡ್ ಹಾಗೂ ಜಲ್ಲಿಕಲ್ಲಿನ ಬೆಲೆ ಧಿಢೀರ್ ಅಂತ ಏರಿಕೆ ಮಾಡಲಾಗಿದೆ.
ಹೌದು. ರಾಜ್ಯ ಸರ್ಕಾರ ಇಷ್ಟು ದಿನ 1 ಟನ್ ಎಂ ಸ್ಯಾಂಡ್ ಹಾಗೂ ಜಲ್ಲಿಕಲ್ಲಿಗೆ 70 ರೂಪಾಯಿ ರಾಜಧನ ಇದ್ದು ಈಗ 80 ರೂಪಾಯಿ ಮಾಡಿದೆ. ಅಂದ್ರೆ ಪ್ರತಿ ಟನ್ ಗೆ 10 ರೂಪಾಯಿ ಹೆಚ್ಚಳ ಮಾಡಿ ಆದೇಶ ಮಾಡಿದೆ. ಹೀಗಾಗಿ ಕ್ರಷರ್ ಮಾಲೀಕರು ಇಷ್ಟು ದಿನ 380 ರೂ.ನಿಂದ 450 ರೂ.ವರೆಗೂ ಮಾರಾಟ ಮಾಡ್ತಿದ್ದ ಎಂ ಸ್ಯಾಂಡ್ (M Sand) ಹಾಗೂ ಜಲ್ಲಿ ಕಲ್ಲಿನ ಬೆಲೆಯನ್ನ 450 ರಿಂದ 550 ರೂಪಾಯಿಯವರೆಗೂ ಏರಿಕೆ ಮಾಡಿದೆ. ಇದ್ರಿಂದ ರೋಸಿ ಹೋದ ಟಿಪ್ಪರ್ ಮಾಲೀಕರು ಧಿಡೀರ್ ಅಂತ ನೂರಾರು ಟಿಪ್ಪರ್ ಲಾರಿಗಳನ್ನ ಬಂದ್ ಮಾಡಿ ಮುಷ್ಕರ ನಡೆಸಿದ್ದಾರೆ.
ಅಂದಹಾಗೆ ಚಿಕ್ಕಬಳ್ಳಾಪುರ ತಾಲೂಕಿನ ಯಲಗಲಹಳ್ಳಿ ಕ್ರಷರ್ ಝೋನ್ ನಲ್ಲೇ 40ಕ್ಕೂ ಹೆಚ್ಚು ಕ್ರಷರ್ ಗಳಿವೆ, ಇವುಗಳನ್ನೇ ನಂಬಿಕೊಂಡು 1,500 ಕ್ಕೂ ಹೆಚ್ಚು ಟಿಪ್ಪರ್ ಮಾಲೀಕರು ಕಲ್ಲಿನ ಉತ್ಪನ್ನಗಳನ್ನ ಸಾಗಾಟ ಮಾರಾಟ ಮಾಡಿಕೊಂಡು ಜೀವನ ರೂಪಿಸಿಕೊಂಡಿದ್ದಾರೆ. ಆದ್ರೆ ಈಗ ಏಕಾಏಕಿ ಟನ್ ಮೇಲೆ ಸರಾಸರಿ 100 ರೂಪಾಯಿ ಏರಿಕೆ ಮಾಡಿರೋದು ಟಿಪ್ಪರ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನೂ ಮುಷ್ಕರದ ವೇಳೆ ಚಾಲಕರಿಗೆ ಸಮಸ್ಯೆ ಆದಾಗ ಟಿಪ್ಪರ್ ಮಾಲೀಕರು ಸ್ಪಂದಿಸಲ್ಲ. ಮುಷ್ಕರ ನಿರತ ಚಾಲಕರಿಗೆ ತಿಂಡಿ ಊಟ ಸಹ ನೀಡಿಲ್ಲ ಅಂತ ಚಾಲಕರು ಟಿಪ್ಪರ್ ಮಾಲೀಕರ ಮೇಲೆಯೇ ಮುಗಿಬಿದ್ದ ಕಾರಣ ಟಿಪ್ಪರ್ ಮಾಲೀಕರು ಹಾಗೂ ಚಾಲಕರ ನಡುವೆಯೇ ತಳ್ಳಾಟ ನೂಕಾಟ ನಡೆದು ವಾಗ್ವಾದವೂ ನಡೆಯಿತು. ರಾಜ್ಯ ಸರ್ಕಾರ 10 ರೂಪಾಯಿ ರಾಜಧನ ಏರಿಕೆ ಮಾಡಿದ್ರೆ ಕ್ರಷರ್ ಮಾಲೀಕರು ಸರಾಸರಿ 100 ರೂಪಾಯಿ ಏರಿಕೆ ಮಾಡಿದ್ದು ಇದು ಟಿಪ್ಪರ್ ಮಾಲೀಕರ ಆಕ್ರೋಶಕ್ಕೆ ಕಾರಣವಾಗಿದೆ.