ದಾವಣಗೆರೆ: ಬೇರೆ ಸಮುದಾಯಕ್ಕೆ ಸಿಕ್ಕ ಸ್ಥಾನಮಾನ ನಮಗೆ ಸಿಕ್ಕಿಲ್ಲ. ವಾಲ್ಮೀಕಿ ಸಮುದಾಯಕ್ಕೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕು ಎಂದು ಪ್ರಸನ್ನಾನಂದ ಪುರಿ ರಾಜನಹಳ್ಳಿ ವಾಲ್ಮೀಕಿ ಶ್ರೀ ಆಗ್ರಹಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಮ್ಮ ಸಮುದಾಯಕ್ಕೆ ಸೂಕ್ತ ರಾಜಕೀಯ ಸ್ಥಾನಮಾನ ಸಿಕ್ಕಿಲ್ಲ. ಬೇರೆ ಸಮುದಾಯಕ್ಕೆ ಸಿಕ್ಕ ಸ್ಥಾನಮಾನ ನಮಗೆ ಸಿಕ್ಕಿಲ್ಲ. ಬಿಜೆಪಿಯಲ್ಲಿ ವಾಲ್ಮೀಕಿ ಸಮುದಾಯದ 9 ಮಂದಿ ಶಾಸಕರಿದ್ದಾರೆ. ಹೀಗಾಗಿ ಮೂರು ಮಂದಿಯನ್ನಾದರೂ ಸಚಿವರಾಗಿ ಮಾಡಬೇಕು. ಆರೋಗ್ಯ ಸಚಿವ ಶ್ರೀರಾಮುಲು ಸೇರಿದಂತೆ ನಮ್ಮ ಸಮುದಾಯದ ಯಾರಿಗಾದರೂ ಒಬ್ಬರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು. ಒಂದು ವೇಳೆ ಬಿಜೆಪಿ ಹೈಕಮಾಂಡ್ ನಮ್ಮ ಆಗ್ರಹಕ್ಕೆ ಬೆಲೆ ಕೊಟ್ಟು, ಸಚಿವ ಸ್ಥಾನ ನೀಡದಿದ್ದರೆ ಉಪಚುನಾವಣೆಯಲ್ಲಿ ಬಿಜೆಪಿಗೆ ತಕ್ಕಪಾಠ ಕಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
Advertisement
Advertisement
ಈಗಾಗಲೇ ಆಗಸ್ಟ್ 23ರಂದು ನಾವು ಪತ್ರಿಕಾಗೋಷ್ಠಿ ನಡೆಸಿದ್ದೇವೆ. ಕರ್ನಾಟಕದಲ್ಲಿ 4ನೇ ಅತೀ ದೊಡ್ಡ ಜನಾಂಗವಾಗಿರುವ ವಾಲ್ಮೀಕಿ ಜನಾಂಗಕ್ಕೆ ರಾಜಕೀಯ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದೆವು. ಈ ಬಗ್ಗೆ ಸಿಎಂ ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೂ ಒತ್ತಾಯಿಸಿದ್ದೇವೆ. ಈ ಪಕ್ಷಕ್ಕೆ, ಸಮುದಾಯಕ್ಕಾಗಿ ಯಾರು ದುಡಿದಿಲ್ಲವೋ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಾರೆ. ನಮ್ಮ ಸಮುದಾಯಕ್ಕಾಗಿ ಶ್ರಮಿಸಿದವರಿಗೆ ಸಚಿವ ಸ್ಥಾನ, ಉಪಮುಖ್ಯಮಂತ್ರಿ ಸ್ಥಾನ ಸಿಗುತ್ತೆ ಎಂಬ ಭರವಸೆಯಲ್ಲಿ ಶೇ.70 ಮಂದಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಹೀಗಾಗಿ ಸಚಿವ ಸಂಪುಟ ಪುನರಾಚನೆ ಆದಾಗಲಾದರೂ ನಮ್ಮ ನಾಯಕರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಸಿಎಂ ಅವರಿಗೆ ಒತ್ತಾಯಿಸುತ್ತಿದ್ದೇವೆ ಎಂದು ಶ್ರೀಗಳು ಹೇಳಿದರು.
Advertisement
ಹಿರಿಯ ನಾಯಕನನ್ನು ಗುರುತಿಸಿ ಅದರ ಪ್ರಕಾರ ಬಿಜೆಪಿ ಸಚಿವ ಸ್ಥಾನ ಕೊಡಲಿ, ಅದು ಪಕ್ಷದ ನಿರ್ಧಾರ ಎಂದರು. ಬಳಿಕ ಹಿಂದಿನ ಸರ್ಕಾರದಲ್ಲಿ ನಾನು ವಾಲ್ಮೀಕಿ ಸಮುದಾಯಕ್ಕೆ ಇರುವ ಮೀಸಲಾತಿಯನ್ನು ಹೆಚ್ಚು ಮಾಡಿ ಎಂದು ಆಗ್ರಹಿಸಿದ್ದೆವು. ಅದಕ್ಕೆ ಸರ್ಕಾರ ಸ್ಪಂದಿಸಿ, ಈಗಾಗಲೇ ಏಕ ಸದಸ್ಯ ಆಯೋಗವನ್ನು ರಚಿಸಿದೆ. ನಾವು ಎರಡು ತಿಂಗಳ ಗಡುವು ನೀಡಿದ್ದೇವು. ಅದು ಮುಗಿಯುತ್ತಾ ಬಂದಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸದಿದ್ದರೆ ನಾವು ಮತ್ತೆ ಹೋರಾಟ ಮಾಡುತ್ತೇವೆ ಸಂವಿಧಾನಾತ್ಮಕವಾಗಿ ನ್ಯಾಯ ಪಡೆಯಲು ಮುಂದಾಗುತ್ತೇವೆ ಎಂದು ತಿಳಿಸಿದರು.
Advertisement
ನಾವು ನೋಡುತ್ತಿದ್ದೇವೆ, ಆಡಳಿತಕ್ಕೆ ಬಂದಿರುವ ಬಹುತೇಕ ಸರ್ಕಾರಗಳು ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿವೆ. ಮತ್ತೆ ನಮ್ಮ ಕಿವಿ ಮೇಲೆ ಹೂವು ಇಡಲು ಬಂದರೆ ನಾವು ಕೇಳಲ್ಲ. ಹೋರಾಟದ ಮೂಲಕ ಪ್ರಾಮಾಣಿಕವಾಗಿ ನಮ್ಮ ಹಕ್ಕನ್ನು ಪಡೆದುಕೊಳ್ಳಲು ನಾವು ಪ್ರಯತ್ನಿಸುತ್ತೇವೆ. ಯಾವ ಸಮುದಾಯದವರು ಹೆಚ್ಚಾಗಿ ಇರುತ್ತಾರೋ ಅವರಿಗೆ ಹೆಚ್ಚಿನ ಮಂತ್ರಿ ಸ್ಥಾನ ಸಿಗುತ್ತೆ. ಬಸವಣ್ಣ ಅವರ ಸಿದ್ದಾಂತ ಬರೀ ಬಾಯಿಯಲ್ಲಿ ಮಾತ್ರ. ಸಾಮಾಜಿಕ ನ್ಯಾಯ ಎಲ್ಲಿದೆ? ನಾನು ಕೇವಲ ನಮ್ಮ ಸಮುದಾಯಕ್ಕೆ ಮಾತ್ರವಲ್ಲಿ ಎಲ್ಲಾ ಸಮುದಾಯದ ವತಿಯಿಂದ ಕೇಳುತ್ತಿದ್ದೇವೆ. ಎಲ್ಲಾ ಸಮುದಾಯದಲ್ಲಿ ಅವಕಾಶ ವಂಚಿತ ನಾಯಕರಿದ್ದಾರೆ ಅವರಿಗೂ ರಾಜಕೀಯ ಸ್ಥಾನಮಾನ ಸಿಗಬೇಕು. ಎಲ್ಲರಿಗೂ ಸರಿಯಾಗಿ ನ್ಯಾಯ ಸಿಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.