ಮಂಡ್ಯ: ಸರ್ಕಾರದಿಂದ ನೀಡಲ್ಪಡುವ ಲಸಿಕೆ ಹಾಕಿಸಿದ ಬಳಿಕ ಇಬ್ಬರು ಮಕ್ಕಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಕ್ಕಳ ಕುಟುಂಬಗಳಿಗೆ ಒಟ್ಟು 3 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಘೋಷಿಸಿದೆ.
ಸರ್ಕಾರದಿಂದ 1 ಲಕ್ಷ, ಜೆಡಿಎಸ್ ಪಕ್ಷದಿಂದ 1ಲಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪರಿಂದ ತಲಾ 50ಸಾವಿರ ಹಾಗೂ ಮೂಡ ಅಧ್ಯಕ್ಷ ಮುನಾವರ್ ಖಾನ್‍ರಿಂದ ತಲಾ 50 ಸಾವಿರ ರೂ. ಪರಿಹಾರ ನೀಡುವುದಾಗಿ ತಿಳಿಸಿದ್ದು, ಹೀಗಾಗಿ ಒಟ್ಟು 3 ಲಕ್ಷ ರೂ. ಮೃತ ಮಕ್ಕಳ ಕುಟುಂಬಕ್ಕೆ ನೀಡುವುದಾಗಿ ಘೋಷಿಸಲಾಗಿದೆ. ಇದನ್ನೂ ಓದಿ: ಸರ್ಕಾರದಿಂದ ಗ್ರಾಮದ 9 ಮಕ್ಕಳಿಗೆ ಪೆಂಟಾವೇಲೆಂಟ್ ಇಂಜೆಕ್ಷನ್- ಇಬ್ಬರ ಸಾವು, 7 ಮಕ್ಕಳು ಅಸ್ವಸ್ಥ
ಮಂಡ್ಯ ತಾಲೂಕಿನ ಚಿಂದಗಿರಿದೊಡ್ಡಿ ಗ್ರಾಮದಲ್ಲಿ ಒಂದೂವರೆ ತಿಂಗಳ ಎರಡು ಮಕ್ಕಳು ಮೃತಪಟ್ಟಿದ್ದವು. ಸರ್ಕಾರದಿಂದ ನೀಡುವ ಲಸಿಕೆ ಹಾಕಿಸಿದ ನಂತರ ಮಕ್ಕಳು ಸಾವನ್ನಪ್ಪಿದ್ದು, ಅನುಮಾನಕ್ಕೆ ಕಾರಣವಾಗಿತ್ತು. ಆದ್ದರಿಂದ ಮಕ್ಕಳ ಸಾವಿನ ತನಿಖೆ ನಡೆಯುವಂತೆ ಮತ್ತು ಪರಿಹಾರ ನೀಡುವಂತೆ ತಡರಾತ್ರಿಯವರೆಗೂ ಪ್ರತಿಭಟನೆ ನಡೆದಿತ್ತು. ಈ ಪ್ರತಿಭಟನೆ ಮಂಡ್ಯ ಮಿಮ್ಸ್ ಆಸ್ಪತ್ರೆ ಮುಂಭಾಗ ನಡೆದಿತ್ತು. ಇದೀಗ ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣಹೊಂದಿರುವ ಮಕ್ಕಳ ಕುಟುಂಬದವರಿಗೆ ತಲಾ ಒಂದು ಲಕ್ಷ ಪರಿಹಾರವನ್ನು ಸರ್ಕಾರ ಘೋಷಣೆ ಮಾಡಿದೆ.
ಪ್ರಕರಣ ಸಂಬಂಧಿಸಿದಂತೆ ಸೂಕ್ತ ತನಿಖೆ ನಡೆಸಿ ಸತ್ಯ ಬಹಿರಂಗಪಡಿಸಲು ಜಿಲ್ಲಾಡಳಿತ, ಪೊಲೀಸ್ ಇಲಾಖೆಯಿಂದ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ತಿಳಿದುಬಂದಿದೆ.