– ನಮ್ಮ ಮಿಸೈಲ್‌ಗಳ ದಾಳಿಗೆ ಪಾಕಿಸ್ತಾನ ಮಂಡಿಯೂರುವ ಸ್ಥಿತಿಗೆ ಬಂತು: ಪ್ರಧಾನಿ
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ (Operation Sindoor) ಕಾರ್ಯಾಚರಣೆಗೆ ಜಾಗತಿಕ ದೇಶಗಳ ಬೆಂಬಲ ಸಿಕ್ಕಿತು. ಆದರೆ, ನಮ್ಮ ವೀರ ಯೋಧರ ಪರಾಕ್ರಮಕ್ಕೆ ಕಾಂಗ್ರೆಸ್ ಬೆಂಬಲ ಸಿಗಲಿಲ್ಲ, ಇದು ನಮ್ಮ ದೌರ್ಭಾಗ್ಯ ಎಂದು ಪ್ರಧಾನಿ ಮೋದಿ (PM Modi) ಬೇಸರ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, 193 ದೇಶಗಳಲ್ಲಿ ಮೂರು ದೇಶಗಳು ಮಾತ್ರ ಪಾಕಿಸ್ತಾನದ ಪರವಾಗಿ ಮಾತನಾಡಿವೆ. ಬಾಕಿ ದೇಶಗಳು ಭಾರತದ ಬೆಂಬಲಕ್ಕೆ ಬಂದಿವೆ. ಜಾಗತಿಕ ದೇಶಗಳ ಬೆಂಬಲ ಸಿಕ್ತು. ಆದರೆ, ನಮ್ಮ ವೀರ ಯೋಧರ ಪರಾಕ್ರಮಕ್ಕೆ ಕಾಂಗ್ರೆಸ್ ಬೆಂಬಲ ಸಿಗಲಿಲ್ಲ, ಇದು ನಮ್ಮ ದೌರ್ಭಾಗ್ಯ ಎಂದು ಹೇಳಿದ್ದಾರೆ. ಇದನ್ನೂ ಓದಿ: ವಿಶ್ವದ ಯಾವ ನಾಯಕನೂ ಆಪರೇಷನ್ ಸಿಂಧೂರ ನಿಲ್ಲಿಸಲು ಹೇಳಲಿಲ್ಲ: ಟ್ರಂಪ್, ವಿಪಕ್ಷಗಳಿಗೆ ಮೋದಿ ತಿರುಗೇಟು
ಮೋದಿ ಎಲ್ಲಿ ಹೋದರು, ಎಲ್ಲಿದೆ 53 ಇಂಚು ಎದೆಗಾರಿಕೆ? ಹೀಗೆ ಸಾಕಷ್ಟು ತಮಾಷೆ ಮಾಡುತ್ತಿದ್ದರು. ಪೆಹಲ್ಗಾಮ್ ದಾಳಿಯಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿತ್ತು. ಸ್ವಾರ್ಥ ರಾಜಕೀಯಕ್ಕೆ ನನ್ನನ್ನು ಗುರಿಯಾಗಿಸಿಕೊಂಡಿದ್ದರು. ಇಂತಹ ಹೇಳಿಕೆ ದೇಶದ ಯೋಧರ ಮನೋಬಲ ಕುಗ್ಗಿಸುತ್ತಿತ್ತು. ಅವರಿಗೆ ಭಾರತದ ಸೇನೆ, ಶಕ್ತಿಯ ಮೇಲೆ ನಂಬಿಕೆ ಇಲ್ಲ. ಅದೇ ಕಾರಣಕ್ಕೆ ಆಪರೇಷನ್ ಸಿಂಧೂರ ಮೇಲೆ ಪ್ರಶ್ನೆ ಕೇಳಿದರು. ಇದನ್ನು ಮಾಡಿ ಮಾಧ್ಯಮದಲ್ಲಿ ಹೆಡ್‌ಲೈನ್ ಆಗಬಹುದು. ದೇಶದ ಜನರ ಹೃದಯದಲ್ಲಿ ಸ್ಥಳ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ಕೊಟ್ಟಿದ್ದಾರೆ.
ನಾಚಿಕೆ ಬಿಟ್ಟು ಪಾಕಿಸ್ತಾನ ಭಯೋತ್ಪಾದಕರ ಜೊತೆಗೆ ನಿಂತಿತು. ನಾವು ಹೊಸ ಅವಕಾಶವನ್ನು ನೋಡುತ್ತಿದ್ದೇವೆ. ಮೊದಲು ನಾವು ಕೇವಲ ಭಯೋತ್ಪಾದಕರನ್ನು ಗುರಿಯಾಗಿಸಿದ್ದೆವು. ಆದರೆ, ಪಾಕಿಸ್ತಾನದ ಬೆಂಬಲದ ಬಳಿಕ ವರ್ಷಗಳ ಕಾಲ ನೆನಪಿರುವಂಥ ಉತ್ತರ ನೀಡಿದೆವು. ನಮ್ಮ ಮಿಸೈಲ್‌ಗಳು ಪಾಕಿಸ್ತಾನ ತಲುಪಿದವು. ಪಾಕಿಸ್ತಾನ ಮಂಡಿಯೂರುವ ಸ್ಥಿತಿಗೆ ಬಂತು. ಬಳಿಕ ಪಾಕಿಸ್ತಾನ ಡಿಜಿಎಂಒ ಮೂಲಕ ಸಂಧಾನಕ್ಕೆ ಬಂತು. ಸಾಕು ಮಾಡಿ, ಈಗಾಗಲೇ ಸಾಕಷ್ಟು ಹೊಡೆದ್ದೀರಿ. ಇನ್ನು ಹೊಡೆದರೆ ತಡೆಯುವ ಶಕ್ತಿ ಇಲ್ಲ. ದಾಳಿ ನಿಲ್ಲಿಸಿ ಎಂದು ಡಿಜಿಎಂಓ ಮನವಿ ಮಾಡಿದರು. ನಮ್ಮ ಟಾರ್ಗೆಟ್ ಭಯೋತ್ಪಾದನೆ ಅಂತ ನಾವು ಮೊದಲೇ ಹೇಳಿದ್ದೆವು. ಪಾಕಿಸ್ತಾನ ಅವರ ಬೆಂಬಲಕ್ಕೆ ನಿಂತು ತಪ್ಪು ಮಾಡಿತು. ನಾವು ಹೇಳಿ ಹೊಡೆದಿದ್ದೇವೆ, ಆಮೇಲೆ ಮನವಿ ಮೇರೆಗೆ ದಾಳಿ ನಿಲ್ಲಿಸಿದೆವು ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಇಂದಿರಾಗಾಂಧಿಯ ಅರ್ಧದಷ್ಟು ಧೈರ್ಯ ಇದ್ರೆ ಟ್ರಂಪ್ ಸುಳ್ಳುಗಾರ ಎಂದು ಮೋದಿ ಹೇಳಲಿ: ರಾಹುಲ್ ಗಾಂಧಿ ಸವಾಲ್
9ನೇ ತಾರೀಕಿಗೆ ಅಮೆರಿಕ ಉಪಾಧ್ಯಕ್ಷರು, ನನ್ನ ಸಂಪರ್ಕಕ್ಕೆ ಯತ್ನಿಸಿದ್ದರು. ಆದರೆ ಒಂದು ಗಂಟೆ ಕಾಲ ಸಂಪರ್ಕ ಸಾಧ್ಯವಾಗಲಿಲ್ಲ. ಮತ್ತೆ ನಾನೇ ವಾಪಸ್ ವ್ಯಾನ್ಸ್‌ಗೆ ಕಾಲ್ ಮಾಡಿದೆ. ಪಾಕಿಸ್ತಾನ ದೊಡ್ಡ ದಾಳಿ ಮಾಡಲಿದೆ ಎಂದು ಅಮೆರಿಕ ಉಪಾಧ್ಯಕ್ಷ ಹೇಳಿದ್ರು. ದಾಳಿ ಮಾಡಿದ್ರೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಬುಲೆಟ್‌ಗೆ ಬಾಂಬ್ ಮೂಲಕ ಉತ್ತರ ಕೊಡ್ತೇವೆ ಎಂದು ವ್ಯಾನ್ಸ್‌ಗೆ ಹೇಳಿದ್ದೆ ಎಂದು ಮೋದಿ ನೆನಪಿಸಿಕೊಂಡಿದ್ದಾರೆ.