ಬೆಂಗಳೂರು: ತುಮಕೂರು ರಸ್ತೆಯ ಗೊರಗುಂಟೆಪಾಳ್ಯದ ಮೇಲ್ಸೇತುವೆಗೆ ಸಿದ್ದಗಂಗಾ ಮಠದ ದಿ.ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡಲಾಗಿದೆ.
ಇಂದು ಗೊರಗುಂಟೆ ಪಾಳ್ಯದ ಮೇಲ್ಸೇತುವೆ ಬಳಿ ನಡೆದ ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಮಹಾಲಿಂಗ ಸ್ವಾಮೀಜಿಯವರೇ ಮೇಲ್ಸೇತುವೆಗೆ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ನಾಮಕರಣ ಮಾಡಿದರು. ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ ಹಾಗೂ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಉಪಸ್ಥಿತರಿದ್ದರು.
ಈ ಹಿಂದಯೇ ಬಜೆಟ್‍ನಲ್ಲಿ ಗೊರಗುಂಟೆಪಾಳ್ಯದ ಮೇಲ್ಸೇತುವೆಗೆ ಶ್ರೀ ಶಿವಕುಮಾರ ಸ್ವಾಮೀಜಿ ಹೆಸರನ್ನು ನಾಮಕರಣ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಇದೀಗ ಕಾರ್ಯಕ್ರಮ ನಡೆಸಿ ಶ್ರೀ ಶಿವಕುಮಾರ ಸ್ವಾಮೀಜಿಗಳ ಹೆಸರನ್ನು ಇಡಲಾಯಿತು. ಈ ಮೇಲ್ಸೇತುವೆ ಬೆಂಗಳೂರು ತುಮಕೂರು ಮಾರ್ಗ ಎನ್‍ಎಚ್-4ನಲ್ಲಿದ್ದು, ಗೊರಗುಂಟೆಪಾಳ್ಯದಿಂದ ನೆಲಮಂಗಲದ ಪಾರ್ಲೆ ಕಾರ್ಖಾನೆಯವರೆಗೆ ಇದೆ.
ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀ ಸಿದ್ಧಮಹಾಲಿಂಗ ಸ್ವಾಮೀಜಿ ಮಾತನಾಡಿ, ಪರಮ ಪೂಜ್ಯರ ಹೆಸರನ್ನು ಮೇಲ್ಸೇತುವೆಗೆ ನಾಮಕರಣ ಮಾಡಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಮೇಲ್ಸೇತುವೆ ಮತ್ತು ತುಮಕೂರು ರಸ್ತೆಗೆ ಪೂಜ್ಯರ ಹೆಸರನ್ನು ಇಟ್ಟು ಅಭಿಮಾನವನ್ನು ಮೆರೆದಿದ್ದಾರೆ. ಮಳೆ ಮಧ್ಯೆಯೂ ನಾಮಕರಣ ಕಾರ್ಯಕ್ರಮ ನೆರವೇರಿದೆ. ಮಳೆ ಬಂದಿರುವುದು ಶುಭ ಸೂಚಕ. ಈ ಮೇಲ್ಸೇತುವೆಗೆ ಪೂಜ್ಯರ ಹೆಸರನ್ನು ನಾಮಕರಣ ಮಾಡಲು ಶ್ರಮಿಸಿದ ಸರ್ಕಾರಕ್ಕೆ, ಮೇಯರ್ ಗಂಗಾಬಿಕೆ ಮಲ್ಲಿಕಾರ್ಜುನ ಅವರಿಗೆ ಮತ್ತು ಬಿಬಿಎಂಪಿ ಸದಸ್ಯರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.