ಮನುಷ್ಯನ ಆವಿಷ್ಕಾರಗಳು, ಸಂಶೋಧನೆಗಳು ಭೂಮಿಯನ್ನು ಮೀರಿ ಬಾಹ್ಯಾಕಾಶವನ್ನು (Space) ತಲುಪಿವೆ. ಈಗ ಭೂಮಿಯನ್ನೇ ಆಳಲು ಹೊರಟ ಡೇಟಾ ಸೆಂಟರ್ಗಳಂತಹ (Data Centres) ಎಐ ಇನ್ಫ್ರಾಸ್ಟ್ರಕ್ಚರ್ಗಳನ್ನು ನಿರ್ಮಿಸಲು ವಿಜ್ಞಾನಿಗಳು ಬಾಹ್ಯಾಕಾಶವನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಗೂಗಲ್ ಈಗ ಸನ್‌ಕ್ಯಾಚರ್ ಹೆಸರಿನ ಯೋಜನೆ ರೂಪಿಸಿದ್ದು ಬಾಹ್ಯಾಕಶದಲ್ಲಿ ಡೇಟಾ ಸೆಂಟರ್ ತೆರೆಯುವ ಪ್ರಯೋಗ ಆರಂಭಿಸಿದೆ.
ಏನಿದು ಗೂಗಲ್ ಸನ್‌ಕ್ಯಾಚರ್?
ಬಾಹ್ಯಾಕಾಶದಲ್ಲಿ ಉಪಗ್ರಹಗಳ ಮೂಲಕ ಸೌರಶಕ್ತಿ ಬಳಸಿ ಎಐ ಡೇಟಾ ಸೆಂಟರ್‌ಗಳನ್ನು ಸ್ಥಾಪಿಸಲು ಗೂಗಲ್ ಮುಂದಾಗಿದೆ. ಡೇಟಾ ಸೆಂಟರ್‌ಗಳಿಗೆ ಬೇಕಾದಷ್ಟು ಸೂರ್ಯನ ಶಕ್ತಿ ಮತ್ತು ತಂಪಾದ ವಾತಾವರಣ ಎರಡೂ ಅಲ್ಲಿ ಸಿಗುತ್ತದೆ. ಇದರಿಂದಾಗಿ ಗೂಗಲ್‌ನ ಸನ್‌ಕ್ಯಾಚರ್ ಯೋಜನೆಯನ್ನು ಆರಂಭಿಸಿದೆ. ಇದು ಯಶಸ್ವಿಯಾದರೆ ಬಹುತೇಕ ಡೇಟಾ ಸೆಂಟರ್‌ಗಳು ಬಾಹ್ಯಾಕಾಶದಲ್ಲಿ ನೆಲಸಲಿವೆ.
ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸಲು ಭೂಮಿಗಿಂತ ಚಂದ್ರ ಸೂಕ್ತ ಎಂದು ಇತ್ತೀಚೆಗೆ ವರದಿಯಾಗಿತ್ತು. ಚಂದ್ರನಲ್ಲಿ ಸೌರಶಕ್ತಿ ಸಿಗುತ್ತದೆ. ಅದರ ಗುರುತ್ವಾಕರ್ಷಣ ಶಕ್ತಿಯೂ ಕಡಿಮೆ ಇರುತ್ತದೆ. ಇದರಿಂದ ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸಲು ಚಂದ್ರ ಬಹಳ ಸೂಕ್ತ ಸ್ಥಳ ಎನ್ನಲಾಗಿದೆ. ಬ್ಲೂ ಒರಿಜಿನ್ (Blue Origin) ಸಂಸ್ಥೆಯು ಚಂದ್ರನ ಕಕ್ಷೆಯಲ್ಲಿ ಎಐ ಇನ್ಫ್ರಾಸ್ಟ್ರಕ್ಚರ್ ನಿರ್ಮಿಸಲು ನೆರವಾಗುವ ರಾಕೆಟ್ ಮತ್ತು ಲ್ಯಾಂಡರ್ಗಳನ್ನು ಅಭಿವೃದ್ಧಿಪಡಿಸುತ್ತಿದೆ. 2027 ರಲ್ಲಿ ಬಾಹ್ಯಾಕಾಶದಲ್ಲಿ ಭೂಮಿಯ ಇಮೇಜಿಂಗ್ ಕಂಪನಿಯಾದ ಪ್ಲಾನೆಟ್ ಲ್ಯಾಬ್ಸ್‌ನ ಸಹಭಾಗಿತ್ವದಲ್ಲಿ ಎರಡು ಉಪಗ್ರಹಗಳನ್ನು ಉಡಾಯಿಸಲು ಗೂಗಲ್ ಯೋಜಿಸಿದೆ.
ಬಾಹ್ಯಾಕಾಶದಲ್ಲೇ ಏಕೆ ಡೇಟಾ ಸೆಂಟರ್?
ಡೇಟಾ ಸೆಂಟರ್ಗಳಂತಹ ಎಐ ಇನ್ಫ್ರಾಸ್ಟ್ರಕ್ಚರ್ಗಳನ್ನು ನಿರ್ಮಿಸಲು ಅಗಾಧ ವಿದ್ಯುತ್ ಬೇಕು. ಅವು ಬಿಸಿಯಾಗದಂತೆ ತಡೆಯಲು ಅಪಾರ ಪ್ರಮಾಣದ ನೀರು ಅಥವಾ ತಂಪಾದ ವಾತಾವರಣ ಬೇಕು. ಇದೇ ಕಾರಣಕ್ಕೆ ಡೇಟಾ ಸೆಂಟರ್‌ಗಳನ್ನು ಸಮುದ್ರದಲ್ಲಿ ನಿರ್ಮಿಸಲಾಗುತ್ತದೆ.
ಈ ರೀತಿ ನಿರ್ಮಾಣಗೊಂಡ ಡೇಟಾ ಸೆಂಟರ್‌ಗಳಿಗೆ ಕಡಲ್ಗಳ್ಳರ ಅಪಾಯ ಎದುರಾಗುವ ಭಯವಿದೆ. ಅಲ್ಲದೇ ಚಂಡಮಾರುತಗಳು ಮತ್ತು ಭೂಕಂಪಗಳಂತಹ ನೈಸರ್ಗಿಕ ವಿಕೋಪದಿಂದ ಹಾನಿಯಾದರೆ ಸಮಸ್ಯೆ ಎದುರಾಗಲಿದೆ. ಇದೇ ಕಾರಣಕ್ಕೆ ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್ ತೆರೆಯಲು ಗೂಗಲ್ ಇನ್ನಿತರ ಸಂಸ್ಥೆಗಳು ಪ್ರಯತ್ನ ಮಾಡುತ್ತಿವೆ. ಮುಂದಿನ ದಿನಗಳಲ್ಲಿ ಭೂಮಿ ಮತ್ತು ಚಂದ್ರನ ಕಕ್ಷೆಗಳಲ್ಲಿ ಡೇಟಾ ಸೆಂಟರ್‌ಗಳು ನೆಲಸಲಿವೆ.
ಮುಂಬರುವ ದಿನಗಳಲ್ಲಿ ಎಐ ಇನ್ನೂ ಹೆಚ್ಚು ಬೆಳೆಯಲಿದೆ. ದೊಡ್ಡ ದೊಡ್ಡ ಡೇಟಾ ಸೆಂಟರ್‌ಗಳು ಸಾಕಷ್ಟು ಸಂಖ್ಯೆಯಲ್ಲಿ ಬೇಕಾಗುತ್ತವೆ. ಇದನ್ನು ನಿಭಾಯಿಸಲು ಭೂಮಿಯಲ್ಲಿರುವ ಸಂಪನ್ಮೂಲ ಸಾಕಾಗುವುದಿಲ್ಲ. ಭೂಮಿಯಲ್ಲಿ ಬೀಳುವ ಸೂರ್ಯನ ಬಿಸಿಲು ಕೂಡ ಸೀಮಿತವೇ ಇದೆ. ಈ ಕಾರಣಕ್ಕೆ ಗೂಗಲ್, ಎನ್ವಿಡಿಯಾ, ಅಮೇಜಾನ್ ಮೊದಲಾದ ಸಂಸ್ಥೆಗಳು ಬಾಹ್ಯಾಕಾಶದತ್ತ ಮುಖಮಾಡಿವೆ.
ಡೇಟಾ ಸೆಂಟರ್‌ಗೆ ಬೇಡಿಕೆಯಿರುವ ವಿದ್ಯುತ್ 2030ರ ವೇಳೆಗೆ 165% ವರೆಗೆ ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಇದು ಹವಾಮಾನ ಬಿಕ್ಕಟ್ಟನ್ನು ಇನ್ನಷ್ಟು ಹೆಚ್ಚಿಸಬಹುದು. ಈ ಕಾರಣಕ್ಕೆ ಬಾಹ್ಯಾಕಾಶದಲ್ಲಿ ಡೇಟಾ ಸೆಂಟರ್ ಸ್ಥಾಪನೆ ಅಗತ್ಯ ಎನಿಸಿದೆ.
ಸವಾಲುಗಳೇನು?
ಪೂರ್ಣ ಪ್ರಮಾಣದ ಡೇಟಾ ಕೇಂದ್ರವನ್ನು ಬಾಹ್ಯಾಕಾಶದಲ್ಲಿ ನಿರ್ಮಿಸುವುದು ಮತ್ತು ನಿರ್ವಹಿಸುವುದು ದುಬಾರಿಯಾಗಲಿದೆ. ದುರಸ್ತಿಯನ್ನು ಕಷ್ಟವಾಗಲಿದೆ. ಡೇಟಾ ಸೆಂಟರ್ ನಿರ್ವಹಿಸಲು ನೆಟ್‌ವರ್ಕ್ ತಜ್ಞರ ಅಗತ್ಯವಿರುತ್ತದೆ. ಇದಲ್ಲದೆ, ಭೂಮಿಯಿಂದ ದೂರದಲ್ಲಿ ನಿರ್ಮಾಣಗೊಳ್ಳುವುದರಿಂದ ವೇಗವು ವಿಳಂಬವಾಗುತ್ತದೆ.
ಆಸ್ಟ್ರೇಲಿಯಾದ ಕ್ರಿಸ್ಮಸ್ ದ್ವೀಪದಲ್ಲಿ ಅತ್ಯಾಧುನಿಕ AI ಡೇಟಾ ಸೆಂಟರ್
* ಗೂಗಲ್ ತನ್ನ ಜಾಗತಿಕ ಕೃತಕ ಬುದ್ಧಿಮತ್ತೆ (AI) ಸಾಮರ್ಥ್ಯ ವಲಯವನ್ನು ವಿಸ್ತರಿಸುವ ಉದ್ದೇಶದಿಂದ 2025ರಲ್ಲಿ ಆಸ್ಟ್ರೇಲಿಯಾದ ಕ್ರಿಸ್ಮಸ್ ದ್ವೀಪದಲ್ಲಿ ಅತ್ಯಾಧುನಿಕ AI ಡೇಟಾ ಸೆಂಟರ್ ನಿರ್ಮಿಸುವ ಯೋಜನೆ ಪ್ರಕಟಿಸಿದೆ. ಇಂಡೋ-ಪೆಸಿಫಿಕ್ ಪ್ರದೇಶದ ನಡುವಿನ ಪ್ರಮುಖ ಸ್ಥಳವಾಗಿರುವ ಕ್ರಿಸ್ಮಸ್ ದ್ವೀಪವು ಡಿಜಿಟಲ್ ಸಂಪರ್ಕ, ಹೆಚ್ಚಿನ ವೇಗದ ಡೇಟಾಸಂಚಾರ ಮತ್ತು ಕಡಿಮೆ ಲ್ಯಾಟೆನ್ಸಿ ಸೇವೆಗಳಿಗಾಗಿ ತಂತ್ರಜ್ಞಾನ ಕಂಪನಿಗಳಿಗೆ ಅತ್ಯುತ್ತಮ ಕೇಂದ್ರವಾಗಿ ಪರಿಗಣಿಸಲಾಗಿದೆ.
ಈ ಯೋಜನೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಡಿಜಿಟಲ್ ಮೂಲಸೌಕರ್ಯವನ್ನು ಬಲಪಡಿಸುವುದರೊಂದಿಗೆ, ಮುಂದಿನ ತಲೆಮಾರಿನ AI ಸೇವೆಗಳಿಗೆ ಅಗತ್ಯವಾದ ಶಕ್ತಿಶಾಲಿ ಕಂಪ್ಯೂಟಿಂಗ್ ಸಾಮರ್ಥ್ಯವನ್ನು ಒದಗಿಸುವ ಗುರಿ ಹೊಂದಿದೆ. ಈ ಡೇಟಾ ಸೆಂಟರ್‌ನ್ನು ಕ್ರಿಸ್ಮಸ್ ದ್ವೀಪದಲ್ಲಿ ಸ್ಥಾಪಿಸುವುದಕ್ಕೆ ಪ್ರಮುಖ ಕಾರಣಗಳಲ್ಲಿ ಭೌಗೋಳಿಕ ಸ್ಥಾನವೂ ಒಂದು. ಏಷ್ಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮಧ್ಯಸ್ಥಾನದಲ್ಲಿರುವ ಕ್ರಿಸ್ಮಸ್ ದ್ವೀಪವು ಡೇಟಾ ಸಂಚಾರಕ್ಕೆ ಸೂಕ್ತವಾಗಿದೆ. ಇದರಿಂದ ಭಾರತ, ಸಿಂಗಾಪುರ್, ಇಂಡೋನೇಶಿಯಾ ಮತ್ತು ಇತರೆ ಪೆಸಿಫಿಕ್ ದೇಶಗಳಿಗೆ AI ಆಧಾರಿತ ಸೇವೆಗಳು ವೇಗವಾಗಿ ಲಭ್ಯವಾಗಲಿವೆ.






