– ಹಾಗಾದರೆ ಸುಂದರ್ ಪಿಚೈ ಸಂಬಳ ಎಷ್ಟು?
ನವದೆಹಲಿ: ಇತ್ತೀಚೆಗಷ್ಟೇ ಗೂಗಲ್ ಮಾತೃ ಸಂಸ್ಥೆಗೆ ಸಿಇಒ ಆಗಿ ಆಯ್ಕೆಯಾಗಿರುವ ಗೂಗಲ್ ಸಿಇಒ ಸಹ ಆಗಿರುವ ಸುಂದರ್ ಪಿಚೈ ಅವರ ವೇತನದಲ್ಲಿ ಭಾರೀ ಹೆಚ್ಚಳವಾಗಿದ್ದು, ಕಂಪನಿ ವಿಶೇಷ ಪ್ಯಾಕೇಜ್ ಘೋಷಿಸಿದೆ.
ಈ ವಿಶೇಷ ವೇತನ ಪ್ಯಾಕೇಜ್ 2020ರಿಂದ ಅನ್ವಯವಾಗಲಿದ್ದು, ಪ್ರಸ್ತುತ ಸುಂದರ್ ಪಿಚೈ ಅವರಿಗಿರುವ ವಾರ್ಷಿಕ 14.22 ಕೋಟಿ ರೂ.(2 ಮಿಲಿಯನ್ ಡಾಲರ್) ಸಂಬಳವಲ್ಲದೆ, ಹೆಚ್ಚುವರಿಯಾಗಿ (ಸ್ಟಾಕ್ ಅವಾರ್ಡ್) 1,704 ಕೋಟಿ ರೂ.(240 ಮಿಲಿಯನ್ ಡಾಲರ್)ಗಳ ಪ್ಯಾಕೇಜ್‍ನ್ನು ಕಂಪನಿ ಘೋಷಿಸಿದೆ. ಇದರಲ್ಲಿ 640 ಕೋಟಿ ರೂ.(90 ಮಿಲಿಯನ್ ಡಾಲರ್)ಗಳು ಅಲ್ಫಾಬೆಟ್ ಕಂಪನಿಯ ಕಾರ್ಯಕ್ಷಮತೆಗೆ ಸಂಬಂಧಿಸಿದ್ದಾಗಿದೆ.
ಜನವರಿ 1ರಿಂದ ಸುಂದರ್ ಪಿಚೈ ಅವರ ಸಂಬಳ ಗಣನೀಯವಾಗಿ ಹೆಚ್ಚಳವಾಗಲಿದ್ದು, 24 ಕೋಟಿ ಡಾಲರ್ ನಲ್ಲಿ 12 ಕೋಟಿ ಡಾಲರ್ ಸ್ಟಾಕ್ ಅವಾರ್ಡ್ ತ್ರೈಮಾಸಿಕ ಕಂತಿಗಳಲ್ಲಿ ಸಿಗಲಿದೆ. ಉಳಿದಿದ್ದು ಪಿಚೈ ತಮಗೆ ನೀಡಿರುವ ಟಾರ್ಗೆಟ್ ಪೂರ್ಣಗೊಳಿಸಿದಾಗ ಸಿಗಲಿದೆ. ಗೂಗಲ್ ಮಾತೃ ಸಂಸ್ಥೆ ಆಲ್ಫಾಬೆಟ್ ಹಾಗೂ ಗೂಗಲ್ ಸಂಸ್ಥೆಯ ಸಿಇಒ ಆಗಿದ್ದರಿಂದ ಸಂಬಳ ಹೆಚ್ಚಳ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
2018ರಲ್ಲಿ ಸುಂದರ್ ಪಿಚೈ ಒಟ್ಟು 19 ಲಕ್ಷ ಡಾಲರ್ (135 ಕೋಟಿ ರೂ.) ಭತ್ಯೆ ಒಳಗೊಂಡಂತೆ ಸಂಬಳವನ್ನು ಪಡೆದುಕೊಂಡಿದ್ದರು. ಇದರಲ್ಲಿ 6.5 ಲಕ್ಷ ಡಾಲರ್ (4.6 ಕೋಟಿ ರೂ.) ಬೇಸಿಕ್ ಸ್ಯಾಲರಿ ಇತ್ತು. 2018ರಲ್ಲಿ ಸ್ಟಾಕ್ ಅವಾರ್ಡ್ ತೆಗೆದುಕೊಂಡಿರಲಿಲ್ಲ. ಸದ್ಯ ಸಿಗುತ್ತಿರುವ ಸಂಬಳವೇ ಹೆಚ್ಚಿದೆ, ಅದನ್ನು ತೆಗೆದುಕೊಂಡು ಏನು ಮಾಡಲಿ ಎಂದಿದ್ದರು. 1704 ಕೋಟಿ ರೂ. ಮೌಲ್ಯದ ಸ್ಟಾಕ್ ಅವಾರ್ಡ್ ಇದುವರೆಗಿನ ಹೆಚ್ಚಿನ ಮೊತ್ತದಾಗಿದೆ.
ಇತ್ತೀಚೆಗಷ್ಟೇ ಭಾರತ ಮೂಲದ ಸುಂದರ್ ಪಿಚೈ ಜಾಗತಿಕ ಐಟಿ ದಿಗ್ಗಜ ಗೂಗಲ್ ಕಂಪನಿಯ ಮಾತೃ ಸಂಸ್ಥೆ ಅಲ್ಫಾಬೆಟ್ ಮುಖ್ಯಸ್ಥರಾಗಿ ನೇಮಕವಾಗಿದ್ದರು. ಗೂಗಲ್ ಸಹ ಸಂಸ್ಥಾಪಕರಾದ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಅಲ್ಫಾಬೆಟ್‍ನಿಂದ ಹೊರನಡೆದಿದ್ದು, ಆ ಸಂಸ್ಥೆಯನ್ನು ಇನ್ನು ಮುಂದೆ ಸುಂದರ್ ಪಿಚೈ ನೋಡಿಕೊಳ್ಳಲಿದ್ದಾರೆ. ಸರ್ಜಿ ಬ್ರಿನ್ ಮತ್ತು ಲ್ಯಾರಿ ಪೇಜ್ ಮಂಗಳವಾರ ಈ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಐದು ವರ್ಷಗಳ ಹಿಂದೆ 2005ರ ಅಕ್ಟೋಬರ್ 2 ರಂದು ಗೂಗಲ್, ಕ್ಯಾಲಿಕೋ, ಗೂಗಲ್ ಫೈಬರ್, ಡೀಪ್ ಮೈಂಡ್ ಸೇರಿದಂತೆ ಎಲ್ಲವನ್ನೂ ಒಗ್ಗೂಡಿಸಲು ಗೂಗಲ್ ಮಾತೃ ಸಂಸ್ಥೆ ಅಲ್ಫಾಬೆಟ್ ಸ್ಥಾಪಿಸಿ ಪೇಜ್ ಮತ್ತು ಬಿನ್ ಪ್ರಮುಖ ಸ್ಥಾನಗಳನ್ನು ಹೊಂದಿದ್ದರು.
ಕಂಪನಿಯ ಮುಖ್ಯಸ್ಥರನ್ನಾಗಿ ಸುಂದರ್ ಪಿಚೈ ಅವರನ್ನು ನೇಮಕ ಮಾಡುವುದಕ್ಕೂ ಮುನ್ನ ಲ್ಯಾರಿ ಪೇಜ್ ಮತ್ತು ಸರ್ಗೆ ಬಿನ್ ಈ ಕುರಿತು ಪತ್ರ ಬರೆದು, ಇನ್ನು ಮುಂದೆ ಗೂಗಲ್ ಮತ್ತು ಅಲ್ಫಾಬೆಟ್ ಕಂಪನಿಗೆ ಇಬ್ಬರು ಸಿಇಒಗಳು ಇರುವುದಿಲ್ಲ. ಎರಡೂ ಕಂಪನಿಯನ್ನು ಒಬ್ಬರೇ ನೋಡಿಕೊಳ್ಳಲಿದ್ದಾರೆ. ಸುಂದರ್ ನಮ್ಮ ಜೊತೆ 15 ವರ್ಷಗಳಿಂದ ಇದ್ದು, ಈತ ತಂತ್ರಜ್ಞಾನವನ್ನು ಪ್ರೀತಿಸುವ ವ್ಯಕ್ತಿಯಾಗಿದ್ದಾನೆ. ಆತನ ಮೇಲೆ ನಮಗೆ ಪೂರ್ಣ ನಂಬಿಕೆಯಿದೆ. ಈ ಸಂಸ್ಥೆಯನ್ನು ಮುನ್ನಡೆಸಲು ಸುಂದರ್ ಅವರಿಗಿಂತ ಸಮರ್ಥ ವ್ಯಕ್ತಿ ಬೇರೆ ಇಲ್ಲ. ತಂತ್ರಜ್ಞಾನ, ಉದ್ಯಮ, ಭವಿಷ್ಯದ ಯೋಜನೆ ಕುರಿತು ಅವರಿಗೆ ಸ್ಪಷ್ಟವಾದ ಜ್ಞಾನವಿದೆ ಎಂದು ಹೇಳಿ ಸುಂದರ್ ಅವರನ್ನು ಹೊಗಳಿದ್ದರು.
ಯಾರು ಸುಂದರ್ ಪಿಚೈ?
ಸುಂದರ್ ಪಿಚೈ ಭಾರತೀಯ ಮೂಲದ ಅಮೆರಿಕದ ಕಂಪ್ಯೂಟರ್ ಎಂಜಿನಿಯರ್. ಸುಂದರ್ ಇಲ್ಲಿಯವರಗೆ ಗೂಗಲ್ ಕ್ರೋಮ್, ಆಂಡ್ರಾಯ್ಡ್ ಅಪ್ಲಿಕೇಶನ್ ಮತ್ತು ಗೂಗಲ್ ಡ್ರೈವ್ ವಿಭಾಗದ ಮುಖ್ಯಸ್ಥರಾಗಿ ನಿಯೋಜನೆಗೊಂಡಿದ್ದರು. 2004ರಲ್ಲಿ ಗೂಗಲ್‍ಗೆ ಸೇರಿದ ಸುಂದರ್, ಖರಗ್‍ಪುರ್ ಐಐಟಿಯಿಂದ ಬಿ.ಟೆಕ್ ಪದವಿ, ಸ್ಟಾನ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಗಳಿಸಿದ್ದಾರೆ. ಮೈಕ್ರೋ ಸಾಫ್ಟ್ ಸಿಇಒ ಆಗಿ ಸತ್ಯ ನಾಡೆಲ್ಲಾ ನೇಮಕವಾದ ಬಳಿಕ ಆಗಸ್ಟ್ 10, 2015ರಂದು ಪಿಚೈ ಅವರನ್ನು ಗೂಗಲ್ ಸಿಇಒ ಆಗಿ ನೇಮಕಗೊಳಿಸಿತ್ತು. ಸುಂದರ್ ಗೂಗಲ್ ಸೇರಿದ್ದು 2004ರ ಏಪ್ರಿಲ್ 1ರಂದು. ಈ ದಿನವೇ ಗೂಗಲ್ ಜಿಮೇಲ್ ಸೇವೆಯನ್ನು ಆರಂಭಿಸಿತ್ತು.