ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಹಲವು ವರ್ಷಗಳಿಂದ ಪ್ರಸಾರವಾಗುತ್ತಿದ್ದ ‘ಪುಟ್ಟಗೌರಿ ಮದುವೆ’ ಧಾರಾವಾಹಿ ಕೊನೆಗೂ ಮುಕ್ತಾಯವಾಗುತ್ತಿದೆ.
ಎಲ್ಲರ ಪ್ರೀತಿ- ಆಶೀರ್ವಾದದಿಂದ ಪುಟ್ಟಗೌರಿ 1800 ಎಪಿಸೋಡ್ ಮುಗಿಸಿ ಯಶಸ್ವಿ ಪ್ರದರ್ಶನವಾಗ್ತಿದೆ. ಆದರೆ ಪುಟ್ಟಗೌರಿ ತಂಡಕ್ಕೆ ಸೀರಿಯಲ್ ಸ್ಟಾಪ್ ಮಾಡುವ ಯೋಚನೆ ಬಂದಿದೆ. ಹಾಗಾಗಿ ಭರದಿಂದ ಚಿತ್ರೀಕರಣ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಸುದ್ದಿ ಕೇಳಿ ಕೆಲವರ ಮನಸ್ಸಿಗೆ ಖುಷಿಯಾಗಿದೆ. ಆದರೆ ಮಹಿಳೆಯರಿಗೆ ಇದು ಒಂದು ದುಃಖದ ವಿಷಯ ಎಂದು ಹೇಳಬಹುದು. ಧಾರಾವಾಹಿ ನಿರ್ದೇಶಕರು ಹಾಗೂ ನಿರ್ಮಾಪಕರ ಆದೇಶದಂತೆ ಪುಟ್ಟಗೌರಿಗೆ ಶೀಘ್ರದಲ್ಲೇ ಶುಭಂ ಕಾರ್ಡ್ ಬೀಳಲಿದೆ. ಮತ್ತೊಂದು ಖುಷಿಯ ವಿಚಾರ ಏನೆಂದರೆ ಪುಟ್ಟಗೌರಿ ಬದಲಿಗೆ ಮಂಗಳಗೌರಿ ಸೀರಿಯಲ್ ಶುರು ಮಾಡಲಾಗುತ್ತಿದೆ. ಸದ್ಯಕ್ಕೆ ಮಂಗಳಗೌರಿಯ ಸುದ್ದಿ ಇನ್ನೂ ಅಧಿಕೃತವಾಗಿಲ್ಲ.
ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ಗೌರಿ ಪಾತ್ರಧಾರಿ ರಂಜಿತಾ ಸಾಕಷ್ಟು ಟ್ರೋಲ್ ಆಗಿದ್ದರು. ಬೆಟ್ಟದ ಮೇಲಿಂದ ಬಿದ್ದರೂ ಗೌರಿ ಸಾಯಲ್ಲ. ಬುಸ್‍ಬುಸ್ ನಾಗಪ್ಪ ಗೌರಿ ಮುಂದೆ ಫುಲ್ ಸೈಲೆಂಟ್. ಇನ್ನೂ ಅಬ್ಬರಿಸಿ ಬೊಬ್ಬಿರಿಯುವ ಹುಲಿ ಕೂಡ ಗೌರಮ್ಮನ ಮುಂದೆ ಕಮಕ್-ಕಿಮಕ್ ಅನ್ನಲ್ಲ. ನರಭಕ್ಷಕರು ಕೈಗೆ ಸಿಲುಕಿಕೊಳ್ಳುವ ಗೌರಿ ಕೊನೆಗೆ ರಾಕ್ಷಸರಿಂದ ದೈವಶಕ್ತಿಯಿಂದ ಪಾರಾಗುತ್ತಾಳೆ. ಅಷ್ಟೇ ಅಲ್ಲದೇ ಗೌರಿಯ ಸಾಹಸಕ್ಕೆ ಟಾಲಿವುಡ್ ಲೆಜೆಂಡ್ ಬಾಲಯ್ಯ ಈಕೆಗೆ ಶಹಬ್ಬಾಸ್ ಹೇಳಿರುವ ರೀತಿಯಲ್ಲಿ ಜನರು ಮೀಮ್ಸ್ ಜೊತೆ ಜೋಡಿಸಿ ಗೌರಿಯನ್ನು ಟ್ರೋಲ್ ಮಾಡಿದ್ದರು.
ಖಾಸಗಿ ಚಾನೆಲ್‍ನಿಂದ ಪುಟ್ಟಗೌರಿ ಮದುವೆ ಹಾಗೂ ಸೋಶಿಯಲ್ ಮೀಡಿಯಾದಿಂದ ಪುಟ್ಟಗೌರಿಗೆ ಸಾಕಷ್ಟು ಹೆಸರು ಬಂತು. ಪುಟ್ಟಗೌರಿ ಎನಿಸಿಕೊಳ್ಳುತ್ತಿದ್ದ ಗೌರಿಗೆ ಜಂಗಲ್‍ಗೌರಿ ಎನ್ನುವ ಹೆಸರು ಕೂಡ ಬಂತು. ಇದೆಲ್ಲದರ ನಡುವೆ ಪುಟ್ಟಗೌರಿ ಮುಗಿದರೆ ಸಾಕು, ರಬ್ಬರ್ ತರಹ ಕಥೇನಾ ಎಳಿತಿದ್ದಾರೆ ಎಂದು ಹೇಳುತ್ತಿದ್ದವರಿಗೆ ಈಗ ಸಂತೋಷದ ಸುದ್ದಿ ಸಿಕ್ಕಿದೆ. ಸದ್ಯ ಕೊನೆಗೂ ಪುಟ್ಟಗೌರಿ ಮದುವೆ ಧಾರಾವಾಹಿಗೆ ಶುಭಂ ಹೇಳುವಂತಹ ಟೈಮ್ ಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv