ಬೆಂಗಳೂರು: ಕಾರ್ ಅಪಘಾತಕ್ಕೀಡಾಗಿ ಕೈ ಮೂಳೆ ಮುರಿದು ವಿಶ್ರಾಂತಿ ಪಡೆಯುತ್ತಿರೋ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಇದೀಗ ಗ್ರಾವೆಲ್ ಫೆಸ್ಟ್ 2018 ಕಾರ್ ರೇಸ್‍ನಲ್ಲಿ ಭಾಗವಹಿಸಲು ಲೈಸನ್ಸ್ ಪಡೆದುಕೊಂಡಿದ್ದಾರೆ.
ದಸರಾ ಮಹೋತ್ಸವ ಪ್ರಯುಕ್ತ ಅಕ್ಟೋಬರ್ 6 ಹಾಗೂ 7 ರಂದು ಲಲಿತ್ ಮಹಲ್‍ನ ಹೆಲಿಪ್ಯಾಡ್ ಮೈದಾನದಲ್ಲಿ ಕಾರ್ ರೇಸ್ ನಡೆಯಲಿದೆ. ಈ ರೇಸ್‍ನಲ್ಲಿ ಭಾಗವಹಿಸಲು ದರ್ಶನ್ ಎಲ್ಲ ತಯಾರಿ ನಡೆಸಿಕೊಂಡಿದ್ದರು. ಆದರೆ ಈ ಮಧ್ಯೆ ದರ್ಶನ್ ಅವರಿಗೆ ಅಪಘಾತವಾಯಿತು.
ದರ್ಶನ್ ಅವರ ಕಾರ್ ರೇಸ್ ಲೈಸನ್ಸ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರು ಅಪಘಾತಕ್ಕೀಡಾದ ನಂತರ ವೈದ್ಯರು ಅವರಿಗೆ ವಿಶ್ರಾಂತಿ ಪಡೆಯಲು ಹೇಳಿದ್ದರು. ಆದರೆ ಈಗ ದರ್ಶನ್ ಅವರಿಗೆ ಕಾರ್ ರೇಸ್ ಲೈಸನ್ಸ್ ಸಿಕ್ಕಿರುವುದು ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. ಕಾರ್ ಅಪಘಾತದಲ್ಲಿ ಬಲಗೈ ಪೆಟ್ಟು ಮಾಡಿಕೊಂಡಿರುವ ದರ್ಶನ್ ಅವರು ಈ ಕಾರ್ ರೇಸ್‍ನಲ್ಲಿ ಭಾಗವಹಿಸುತ್ತಾರಾ ಎಂಬುದು ಅಧಿಕೃತವಾಗಿ ತಿಳಿದುಬಂದಿಲ್ಲ.
ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ದರ್ಶನ್ ಅವರು ನೇರವಾಗಿ ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿಗೆ ಪೂಜೆ ಸಲ್ಲಿಸಿದ್ದರು. ಇದೀಗ ಮತ್ತೆ ಮಂಗಳವಾರ ತಮ್ಮ ಪತ್ನಿ ವಿಜಯಲಕ್ಷ್ಮೀ ಅವರೊಂದಿಗೆ ಜೊತೆ ದೇವಸ್ಥಾನಕ್ಕೆ ತೆರಳಿ ದೇವಿಯ ಆಶೀರ್ವಾದ ಪಡೆದಿದ್ದಾರೆ.
ಚಾಮುಂಡಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ದರ್ಶನ್ ದಂಪತಿ ಬಳಿಕ ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತ್ ಅವರ ನಿವಾಸಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕುಟುಂಬಸ್ಥರ ಜೊತೆ ಕುಶಲೋಪರಿ ವಿಚಾರಿಸಿದರು. ಕೆಲ ಸ್ನೇಹಿತರು ಕೂಡ ದರ್ಶನ್ ಗೆ ಸಾಥ್ ನೀಡಿದ್ದರು.
ಶನಿವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದ ದರ್ಶನ್ ಅವರ ಬಲಗೈ ಮೂಳೆ ಮುರಿದಿದ್ದು, ಪ್ಲೇಟ್ ಅಳವಡಿಸಲಾಗಿದೆ. ಆಸ್ಪತ್ರೆಯಿಂದ ಹೊರ ಬಂದ ಬಳಿಕ ಮಾತನಾಡಿದ್ದ ದರ್ಶನ್ ಆಸ್ಪತ್ರೆಯಲ್ಲಿ ವೈದ್ಯರು ಉತ್ತಮ ಚಿಕಿತ್ಸೆ ನೀಡಿದ್ದಾರೆ. ನಾನು ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಬೇಕಾಗಿಲ್ಲ. ಒಂದು ತಿಂಗಳ ವಿಶ್ರಾಂತಿ ಬಳಿಕ ಮತ್ತೆ ಜಿಮ್ ಮಾಡುತ್ತೇನೆ ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv