ಮುಂಬೈ: ದೇಶದ ಜಿಡಿಪಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ದರ (Repo Rate) ಕಡಿತಗೊಳಿಸಿದೆ. 25 ಬೇಸಿಸ್ ಪಾಯಿಂಟ್ ಕಡಿತಗೊಳಿಸಿದ್ದು ರೆಪೋ ಬಡ್ಡಿ ದರ 5.50% ರಿಂದ 5.25% ಕ್ಕೆ ಇಳಿಕೆಯಾಗಿದೆ.
ಆರ್‌ಬಿಐನ ಹಣಕಾಸು ನೀತಿ ಸಮಿತಿಯು (MPC) ಸಭೆಯ ಬಳಿಕ 25 ಮೂಲಾಂಶದಷ್ಟು (ಬೇಸಿಸ್ ಪಾಯಿಂಟ್) ರೆಪೋ ದರ ಕಡಿಮೆ ಮಾಡಲು ನಿರ್ಧರಿಸಿರುವುದಾಗಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ (Sanjay Malhotra) ತಿಳಿಸಿದರು.
ಆರ್‌ಬಿಐ ನಿರ್ಧಾರದಿಂದ ಸಾಲ (Loan) ಮತ್ತು ಇಎಂಐಗಳ (EMI) ಬಡ್ಡಿ ದರವೂ ಇಳಿಕೆಯಾಗಲಿದೆ. ಜೊತೆಗೆ ಹೊಸ ಸಾಲಗಾರರಿಗೆ ಗೃಹ ಸಾಲಗಳು, ವಾಹನದ ಮೇಲಿನ ಸಾಲಗಳು ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ. ಆಟೊಮೊಬೈಲ್, ಕಾರ್ಪೊರೇಟ್ ಸಾಲಗಳ ಮೇಲಿನ ಮರುಪಾವತಿ ಕಂತುಗಳಲ್ಲಿಯೂ ಇಳಿಕೆಯಾಗುವ ನಿರೀಕ್ಷೆ ಇದೆ.
ರೆಪೋ ದರದಲ್ಲಿ 25 ಮೂಲಾಂಶ ಇಳಿಕೆ ಆಗಬಹುದೆಂದು ತಜ್ಞರು ನಿರೀಕ್ಷಿಸಿದ್ದರು. ಈ ವರ್ಷದ ಫೆಬ್ರವರಿಯಿಂದ ಆರ್‌ಬಿಐ ರೆಪೋ ದರದಲ್ಲಿ 125 ಮೂಲಾಂಶದಷ್ಟು ಕಡಿತ ಮಾಡಿದೆ. ಫೆಬ್ರವರಿಯಲ್ಲಿ 25, ಏಪ್ರಿಲ್‌ನಲ್ಲಿ 25, ಜೂನ್‌ನಲ್ಲಿ 50 ಬೇಸಿಸ್ ಪಾಯಿಂಟ್ ಕಡಿತಗೊಳಿಸಲಾಗಿತ್ತು. ಇದನ್ನೂ ಓದಿ: ಭಾರತವನ್ನು ಬೆಂಬಲಿಸಿ ಟ್ರಂಪ್ ಬೂಟಾಟಿಕೆಯನ್ನು ಬಯಲು ಮಾಡಿದ ಪುಟಿನ್
ರೆಪೋ ರೇಟ್ ಎಂದರೇನು?
ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ರೆಪೋ ರೇಟ್ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ. ಇದರಿಂದ ವಾಹನ ಸಾಲ, ಗೃಹ ಸಾಲ, ಇತ್ಯಾದಿ ಸಾಲಗಳ ಬಡ್ಡಿ ದರ ಏರುತ್ತದೆ.
ರಿವರ್ಸ್ ರೆಪೋ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್‌ಬಿಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್ ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ. ಇದನ್ನೂ ಓದಿ: ಟ್ರಂಪ್ ಸುಂಕ ಸಮರದ ಮಧ್ಯೆಯೂ ನಿರೀಕ್ಷೆಗೂ ಮೀರಿ ಜಿಡಿಪಿ ವೃದ್ಧಿ
8.5% ಬಡ್ಡಿದರದಲ್ಲಿ 15 ವರ್ಷಗಳ ಅವಧಿಗೆ 25 ಲಕ್ಷ ರೂ. ಸಾಲ
ಪ್ರಸ್ತುತ ಇಎಂಐ- 24,618 ರೂ.
8.25% ದರ ಕಡಿತದ ಬಳಿಕ ಇಎಂಐ – 24,254 ರೂ.
ಪ್ರಸ್ತುತ ಬಡ್ಡಿ- 19,31,328 ರೂ.
8.25% ದರ ಕಡಿತ ನಂತರ ಬಡ್ಡಿ – 18,65,632 ರೂ.
ಉಳಿತಾಯ – 65,696 ರೂ.

