ಟ್ರೋಫಿ ಮಾರಿ ಪಿಎಂ ಪರಿಹಾರ ನಿಧಿಗೆ 4.30 ಲಕ್ಷ ನೀಡಿದ ಗಾಲ್ಫರ್ ಅರ್ಜುನ್

Public TV
2 Min Read
ARJUN A

– ಕಷ್ಟಪಟ್ಟು ಗೆದ್ದಿದ್ದ 102 ಟ್ರೋಫಿಗಳ ಮಾರಾಟ
– ದೇಶಕ್ಕೆ ಅಗತ್ಯವಿದ್ದಾಗ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ

ನವದೆಹಲಿ: ಕೊರೊನಾ ವೈರಸ್ ವಿರುದ್ಧ ಹೋರಾಡಲು ಈಗಾಗಲೇ ಅನೇಕ ಕ್ರಿಡಾಪಟುಗಳು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಇದೀಗ ಭಾರತದ ಗಾಲ್ಫರ್ ಅರ್ಜುನ್ ಭಾಟಿ ತಾವು ಗೆದ್ದ ಟ್ರೋಫಿಗಳನ್ನು ಮಾರಾಟ ಮಾಡಿ ಪಿಎಂ ಕೇರ್ಸ್ ನಿಧಿಗೆ ಹಣ ನೀಡಿದ್ದಾರೆ.

15 ವರ್ಷದ ಯುವ ಭಾರತೀಯ ಗಾಲ್ಫ್ ಆಟಗಾರ ಅರ್ಜುನ್ ಭಾಟಿ ತಾನು ಕಷ್ಟಪಟ್ಟು ಗೆದ್ದಿದ್ದ ಟ್ರೋಫಿಗಳನ್ನು ಮಾರಾಟ ಮಾಡಿ ಪಿಎಂ ಪರಿಹಾರ ನಿಧಿಗೆ ಬರೋಬ್ಬರಿ 4.30 ಲಕ್ಷ ರೂಪಾಯಿಯನ್ನು ದೇಣಿಗೆಯಾಗಿ ನೀಡಿದ್ದಾರೆ. 3 ವಿಶ್ವ ಗಾಲ್ಫ್ ಚಾಂಪಿಯನ್‍ಶಿಪ್ ಪ್ರಶಸ್ತಿಗಳು ಮತ್ತು ರಾಷ್ಟ್ರೀಯ ಚಾಂಪಿಯನ್‍ಶಿಪ್ ಪ್ರಶಸ್ತಿಗಳು ಸೇರಿದಂತೆ ಎಲ್ಲ ಟ್ರೋಫಿಗಳನ್ನು ಮಾರಾಟ ಮಾಡಿದ್ದಾರೆ.

Modi 1

ಗ್ರೇಟರ್ ನೋಯ್ಡಾ ಮೂಲದ ಭಾಟಿ ತನ್ನ ಟ್ರೋಫಿಗಳನ್ನು ಸಂಬಂಧಿಕರು ಮತ್ತು ಪೋಷಕರ ಸ್ನೇಹಿತರಿಗೆ ಮಾರಿರುವುದನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿದ್ದಾರೆ. “ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ದೇಶಕ್ಕೆ ಈಗ ಕಠಿಣ ಪರಿಸ್ಥಿತಿ ಎದುರಾಗಿದೆ. ಹೀಗಾಗಿ ನೀವೆಲ್ಲರೂ ದೇಶಕ್ಕೆ ಸಹಾಯ ಮಾಡಲು ಮುಂದೆ ಬರಬೇಕು. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಕೊಡುಗೆ ನೀಡಿ” ಎಂದು ಮನವಿ ಮಾಡಿಕೊಂಡಿದ್ದಾರೆ.

“ಕಳೆದ 8 ವರ್ಷಗಳಲ್ಲಿ ನಾನು 102 ಟ್ರೋಫಿಗಳನ್ನು ಗೆದ್ದಿದ್ದೇನೆ. ನಾನು ಪಿಎಂ ಕೇರ್ಸ್ ನಿಧಿಗೆ 4 ಲಕ್ಷ ಮತ್ತು 30 ಸಾವಿರ ರೂ. ಕೊಡುಗೆ ನೀಡಿದ್ದೇನೆ. ಪ್ರತಿಯೊಬ್ಬರೂ ಈ ಸಮಯವನ್ನು ಬಳಸಿಕೊಳ್ಳಬೇಕು. ಹೀಗಾಗಿ ನೀವು ಸಹಾಯ ಮಾಡುವ ಮೂಲಕ ಮಾದರಿಯಾಗಬೇಕು” ಎಂದು ಹೇಳಿದರು.

ARJUNA 1
ಕೋವಿಡ್ -19 ವಿರುದ್ಧದ ಭಾರತದ ಹೋರಾಟದಲ್ಲಿ ನನ್ನ ಕೈಲಾದಷ್ಟು ಕೆಲಸ ಮಾಡಲು ನಾನು ಬಯಸಿದ್ದೆ. ಆದರೆ ನನಗೆ ಸ್ವಂತ ಸಂಪಾದನೆಯಿಲ್ಲದ ಕಾರಣ ನನ್ನ ಟ್ರೋಫಿಗಳನ್ನು ಮಾರಾಟ ಮಾಡಲು ನಿರ್ಧರಿಸಿದೆ. ಟ್ರೋಫಿಗಳನ್ನು ಮುಂದಿನ ದಿನವೂ ಗೆಲ್ಲಬಹುದು. ಆದರೆ ನನ್ನ ದೇಶಕ್ಕೆ ಅಗತ್ಯವಿರುವಾಗ ನಾನು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ. ಮಾರಕ ಕಾಯಿಲೆಯ ವಿರುದ್ಧ ಹೋರಾಡಲು ಹಣದ ಅಗತ್ಯವಿದೆ ಎಂದು ಮನವಿ ಮಾಡಿಕೊಂಡರು.

ನನ್ನ ಸಂಬಂಧಿಕರು ಮತ್ತು ನನ್ನ ಪೋಷಕರ ಸ್ನೇಹಿತರು ಟ್ರೋಫಿಗಳನ್ನು ಖರೀದಿಸಿದ್ದಾರೆ. ಟ್ರೋಫಿಗಳು ಇನ್ನೂ ನನ್ನ ಮನೆಯಲ್ಲಿವೆ. ಲಾಕ್‍ಡೌನ್ ಮುಗಿದ ನಂತರ ಅವುಗಳನ್ನು ಅವರವರ ಮನೆಗೆ ತಲುಪಿಸುತ್ತೇನೆ ಎಂದು ಭಾಟಿಯ ಹೇಳಿದರು.

ಸೂಪರ್ ಸ್ಟಾರ್ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮೇರಿ ಕೋಮ್ ಮತ್ತು ಸಾನಿಯಾ ಮಿರ್ಜಾ ಸೇರಿದಂತೆ ಅನೇಕ ಕ್ರೀಡಾಪಟುಗಳು ಕೊರೊನಾ ವೈರಸ್ ವಿರುದ್ಧ ಹೋರಾಡಲು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *