Connect with us

ಮಂಗಳೂರಿನ ಶ್ರೀರಾಮ ವಿದ್ಯಾ ಕೇಂದ್ರದ ಶಿಕ್ಷಣ ಪದ್ಧತಿ ಅತೀವ ಸಂತಸ ತಂದಿದೆ: ನಟ ಗಣೇಶ್

ಮಂಗಳೂರಿನ ಶ್ರೀರಾಮ ವಿದ್ಯಾ ಕೇಂದ್ರದ ಶಿಕ್ಷಣ ಪದ್ಧತಿ ಅತೀವ ಸಂತಸ ತಂದಿದೆ: ನಟ ಗಣೇಶ್

ಮಂಗಳೂರು: ಮಾನವೀಯ ಮೌಲ್ಯಗಳನ್ನು ಹಾಗೂ ದೇಶೀಯ ಸಂಸ್ಕೃತಿಯನ್ನೊಳಗೊಂಡ ಶ್ರೀರಾಮ ವಿದ್ಯಾ ಕೇಂದ್ರದ ಶಿಕ್ಷಣ ಪದ್ಧತಿ ನನಗೆ ಅತೀವ ಸಂತೋಷ ತಂದಿದೆ. ಶಿಸ್ತು, ಆಚಾರ, ವಿಚಾರ, ಸಂಸ್ಕೃತಿ, ನಮ್ಮತನ, ಜೀವನ ಪದ್ಧತಿಗೆ ಒತ್ತು ನೀಡುತ್ತಿರುವುದು ಇತರ ವಿದ್ಯಾ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಚಲನಚಿತ್ರ ನಟ ಗೋಲ್ಡನ್ ಸ್ಟಾರ್ ಗಣೇಶ್ ಹೇಳಿದರು.

ಬಂಟ್ವಾಳದ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಗಣೇಶ್, ಇಲ್ಲಿನ ವಿದ್ಯಾ ಸಂಸ್ಥೆ ಮನುಷ್ಯನನ್ನು ಕೇವಲ ಆಧುನಿಕ ತಂತ್ರಜ್ಞಾನದಲ್ಲಿ ತಯಾರಿಸದೆ ಜೀವನ ಮೌಲ್ಯವನ್ನು ಮೈಗೂಡಿಸಿಕೊಂಡು ಸುಸಂಸ್ಕೃತ ವ್ಯಕ್ತಿಯನ್ನಾಗಿ ರೂಪಿಸುತ್ತಿದೆ. ವಿದ್ಯಾರ್ಥಿಗಳು ಧನಾತ್ಮಕ ಚಿಂತನೆಗಳೊಂದಿಗೆ ಉತ್ತಮ ವಿಚಾರಗಳನ್ನು ಮುಂದಿಟ್ಟುಕೊಂಡು ವಿದ್ಯಾರ್ಜನೆ ಮಾಡಿದರೆ ಉತ್ತಮ ಜೀವನ ರೂಪಿಸಲು ಸಾಧ್ಯವಾಗಲಿದೆ ಎಂದರು.

ರಾಜ್ಯ ಅಲ್ಪ ಸಂಖ್ಯಾತ ಮೋರ್ಚದ ಉಪಾಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ, ಕರಾವಳಿ ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ, ಸಮಾಧಾನ, ತೃಪ್ತಿ ನೀಡುವ ಏಕೈಕ ವಿದ್ಯಾ ಕೇಂದ್ರವೆಂದರೆ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರವಾಗಿದೆ. ಇದು ವಿಶೇಷ ಶಕ್ತಿಯುಳ್ಳ ಕೇಂದ್ರವಾಗಿದೆ. ಕಲ್ಪಣೆಗೂ ಮೀರಿದ ಸಂಸ್ಕಾರದ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗೆ ನಾವು ಧನ್ಯರಾಗಿದ್ದೇವೆ ಎಂದರು.

ವೇದಿಕೆಯಲ್ಲಿ ವಿವೇಕಾನಂದ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ, ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸಂಚಾಲಕ ಡಾ| ಕಲ್ಲಡ್ಕ ಪ್ರಭಾಕರ್ ಭಟ್, ಸಂಚಾಲಕ ವಸಂತ ಮಾಧವ, ಡಾ| ಕಮಲ ಪಿ.ಭಟ್, ಅಶ್ರಫ್ ಉಚ್ಚಿಲ್ ಮತ್ತಿತರರು ಉಪಸ್ಥಿತರಿದ್ದರು. ಪ್ರಾಂಶುಪಾಲ ಕೃಷ್ಣ ಪ್ರಸಾದ್ ಸ್ವಾಗತಿಸಿ ವಂದಿಸಿದರು.

Advertisement
Advertisement