– 105 ನಕಲಿ ಖಾತೆ ಓಪನ್ ಮಾಡಿಸಿ ಪಂಗನಾಮ
ರಾಯಚೂರು: ಜಿಲ್ಲೆಯ ಬ್ಯಾಂಕ್‌ವೊಂದರಲ್ಲಿ 105 ನಕಲಿ ಖಾತೆ ಓಪನ್ ಮಾಡಿಸಿ, ಬ್ಯಾಂಕ್ ಮ್ಯಾನೇಜರ್‌ನಿಂದ 10.97 ಕೋಟಿ ವಂಚಿಸಿ, ಗೋಲ್ಡೋನ್ ಗೋಲ್ಮಾಲ್ ನಡೆದಿರುವುದು ಬೆಳಕಿಗೆ ಬಂದಿದೆ. ಈ ಘಟನೆ ಜಿಲ್ಲೆಯ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ (Bank of Maharashtra) ನಡೆದಿದೆ.
ಹೌದು, ಬೇಲಿಯೇ ಎದ್ದು ಹೊಲ ಮೇಯ್ದ ಹಾಗೇ ಜಿಲ್ಲೆಯಲ್ಲಿ ಬ್ಯಾಂಕ್ ಹಾಗೂ ಗ್ರಾಹಕರ ಹಿತ ಕಾಪಾಡಬೇಕಾದ ಬ್ಯಾಂಕ್ ಮ್ಯಾನೇಜರ್ ಕೋಟ್ಯಂತರ ರೂಪಾಯಿ ಗೋಲ್ಮಾಲ್ ಮಾಡಿ ಪರಾರಿಯಾಗಿದ್ದಾನೆ. ಬ್ಯಾಂಕ್ ಆಫ್ ಮಹಾರಾಷ್ಟ್ರದ ಮ್ಯಾನೇಜರ್ ಗ್ರಾಹಕರ ಹೆಸರಲ್ಲಿ ನಕಲಿ ಖಾತೆಗಳನ್ನ (Fake Bank Accounts) ತೆಗೆದು, ಬಂಗಾರ ಅಡವಿಟ್ಟು ಗೋಲ್ಡೋನ್ ಹೆಸರಲ್ಲಿ ಕೋಟ್ಯಂತರ ರೂ. ವಂಚನೆ ಮಾಡಿರುವುದು ಹಿರಿಯ ಅಧಿಕಾರಿಗಳ ಬ್ಯಾಂಕ್ ಆಡಿಟ್ ವೇಳೆ ಸುಮಾರು 10.97 ಕೋಟಿ ರೂ. ಗೋಲ್ಮಾಲ್ ಮಾಡಿರುವುದು ಬಯಲಾಗಿದೆ.ಇದನ್ನೂ ಓದಿ:ಬೇವು – ಬೆಲ್ಲ ಸಿಹಿ, ಕಹಿಯ ಸಮಾನ ಹಂಚಿಕೆ ಬಾಳಿಗೊಂದು ಸವಿ ಪಾಠ
ಆಂಧ್ರಪ್ರದೇಶ (Andhra Pradesh)ಪ್ರಕಾಶಂ ಜಿಲ್ಲೆ ಮೂಲದ ಕೆ.ನರೇಂದ್ರ ರೆಡ್ಡಿ ವಂಚಿಸಿ ಪರಾರಿಯಾಗಿರುವ ಮ್ಯಾನೇಜರ್. ಗ್ರಾಹಕರ ದಾಖಲೆಗಳನ್ನು ಪಡೆದು ಗೋಲ್ಡೋನ್ ಹೆಸರಿನಲ್ಲಿ ಖಾತೆ ತೆಗೆದು ಬ್ಯಾಂಕ್ ಹಾಗೂ ಗ್ರಾಹಕರಿಗೆ ವಂಚನೆ ಮಾಡಿದ್ದಾನೆ. ಬ್ಯಾಂಕ್‌ಗೆ ಬಂದು ಮೂರು ವರ್ಷದಲ್ಲಿ 105 ನಕಲಿ ಖಾತೆ ಓಪನ್ ಮಾಡಿದ್ದ ಮ್ಯಾನೇಜರ್ ಗೋಲ್ಡೋನ್ (Gold Loan) ತೆಗೆದುಕೊಂಡು ಎಸ್ಕೇಪ್ ಆಗಿದ್ದಾರೆ.
ಬ್ಯಾಂಕ್‌ನ ಹಣವನ್ನು 29 ನಕಲಿ ಖಾತೆಗಳಿಗೆ ಗೋಲ್ಡೋನ್ ಹೆಸರಿನಲ್ಲಿ ವರ್ಗಾವಣೆ ಮಾಡಿದ್ದಲ್ಲದೆ, 8 ಜನ ಸಂಬಂಧಿಕರ ಹೆಸರಿನ ಖಾತೆಗಳಿಗೂ ಹಣ ವರ್ಗಾವಣೆ ಮಾಡಿದ್ದಾನೆ. ಹಿಂದೆ ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದ ಬ್ಯಾಂಕ್‌ನ ಸಹೋದ್ಯೋಗಿ ಹೆಸರಿಗೆ 88 ಲಕ್ಷ ರೂ. ವರ್ಗಾವಣೆ ಮಾಡಿದ್ದಾನೆ. ಆಡಿಟ್ ವೇಳೆ ಕೆ.ನರೇಂದ್ರ ರೆಡ್ಡಿಯ ಬಣ್ಣ ಬಯಲಾಗಿದ್ದು, ಆಡಿಟ್ ಆರಂಭವಾಗುತ್ತಿದ್ದಂತೆಯೇ ಪರಾರಿಯಾಗಿದ್ದಾನೆ.
ಬ್ಯಾಂಕ್ ಆಫ್ ಮಹಾರಾಷ್ಟ್ರದ ರಿಜಿನಲ್ ಮ್ಯಾನೇಜರ್ ಸುಚೇತ್ ಡಿಸೋಜಾ ರಾಯಚೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಮ್ಯಾನೇಜರ್ ಕೆ.ನರೇಂದ್ರ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸದ್ಯ ಪೊಲೀಸರು. ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.ಇದನ್ನೂ ಓದಿ:ರಾಜ್ಯ ಹವಾಮಾನ ವರದಿ 29-03-2025