ಉಡುಪಿ: ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಅನ್ನೋದು ಪ್ರಸಿದ್ಧ ಹಾಡೊಂದರ ಸಾಲುಗಳು. ಇಲ್ಲೊಬ್ಬರು ದೇವರನ್ನು ಹುಡುಕುತ್ತಾ ದೆಹಲಿಯಿಂದ ಬಂದಿದ್ದಾಳೆ. ಉಡುಪಿಗೆ ಬಂದು ಶ್ರೀಕೃಷ್ಣ ನನ್ನ ಗಂಡ ಎಂದಿದ್ದಾಳೆ.
ನನ್ನ ಸ್ವಾಮಿಯನ್ನು ಹುಡುಕಿಕೊಂಡು ಇಲ್ಲಿಯವರೆಗೆ ಬಂದಿದ್ದೇನೆ. ನನ್ನ ಬಳಿ ತುಂಬಾ ಫೋಟೋಗಳಿವೆ. ಇವರೆಲ್ಲರೂ ನನ್ನ ಸ್ವಾಮಿಯವರು ಅಂತ ಹೇಳುತ್ತಾ ಉಡುಪಿ ನಗರದಲ್ಲೆಲ್ಲಾ ಈ ಮಹಿಳೆ ಓಡಾಡಿದ್ದಾಳೆ. ಕೃಷ್ಣ ಎಲ್ಲಿ..? ಕೃಷ್ಣ ನನ್ನ ಗಂಡ ಅಂತ ಅಡ್ರೆಸ್ ಕೇಳಿದ್ದಾಳೆ. ಹೀಗಾಗಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಬಂದು ವಿಚಾರಣೆ ಮಾಡಿದಾಗ, ನಾನು ದೇವರ ಪ್ರಿಯತಮೆ ಅಂತ ಹೇಳಿದ್ದಾಳೆ. ಹೆಸರೇನು? ಎಲ್ಲಿಯವಳು? ಎಂದಿದ್ದಕ್ಕೆ ಪಾನ್ ಕಾರ್ಡ್ ಕೊಡುತ್ತಾಳೆ. ಅದರಲ್ಲಿ ನಮೂದಿಸಿದಂತೆ ಈಕೆ ರಿಂಕೂ ದೇವಿ. ಮೂಲತಃ ದೆಹಲಿಯವಳು. ರಾಮ್ ಸುರಿತ್ ಸಿಂಗ್ ಅವರ ಪತ್ನಿ. ನಾನು ದೇವರ ಮಡದಿ. ನನ್ನನ್ನು ದೇವರು ದೂರ ಮಾಡಿ ಇಲ್ಲಿಗೆ ಬಂದಿದ್ದಾರೆ ಎಂದು ಹೇಳಿದ್ದಾಳೆ.
ಮಾಧ್ಯಮಗಳೆದುರು ಕೂಡಾ ರಿಂಕೂಳದ್ದು ಇದೇ ದೂರು. ನಾನು ದೇವರನ್ನು, ನನ್ನ ಸ್ವಾಮಿಯನ್ನು ಹುಡುಕುತ್ತಾ ಹೊರಟಿದ್ದೇನೆ ಎನ್ನುತ್ತಾಳೆ. ಬಳಿಕ ಉಡುಪಿಯ ಬೈಲೂರಿನಲ್ಲಿರುವ ವೃದ್ಧಾಶ್ರಮಕ್ಕೆ ಈಕೆಯನ್ನು ಕರೆದುಕೊಂಡು ಹೋಗಲಾಗಿದೆ.
ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ವಿಶು ಶೆಟ್ಟಿ, ತಾರಾನಾಥ ಮೇಸ್ತ ಅವರು ಕೇರಳದ ಮಹಿಳಾ ಆಶ್ರಮವನ್ನು ಸಂಪರ್ಕಿಸಿ ಪರಿಸ್ಥಿತಿ ವಿವರಿಸಿದ್ದಾರೆ. ಆಶ್ರಮದ ಆಡಳಿತ ಮಂಡಳಿಯವರು ಮಹಿಳೆಯನ್ನು ಕರೆದುಕೊಂಡು ಬರುವಂತೆ ಹೇಳಿದ್ದಾರೆ. ಸದ್ಯ ದೆಹಲಿಯಿಂದ ಕೃಷ್ಣನನ್ನು ಹುಡುಕಿಕೊಂಡು ಬಂದ ರಿಂಕೂ ದೇವರ ನಾಡು ಕೇರಳವನ್ನು ಸೇರಿದ್ದಾಳೆ.
ಪೊಲೀಸರ ಸಹಾಯದಿಂದ ಮಂಜೇಶ್ವರಕ್ಕೆ ಕರೆದುಕೊಂಡು ಹೋಗಿ ಬಿಟ್ಟಿದ್ದೇವೆ. ರಸ್ತೆಯಲ್ಲಿ ಓಡಾಡುವ ಮಹಿಳೆಗೆ ಸಾರ್ವಜನಿಕರಿಂದ ಸಮಸ್ಯೆಯಾಗಬಹುದು. ದುರುಪಯೋಗ ಆಗುವ ಸಾಧ್ಯತೆಯೂ ಇದೆ. ಮಹಿಳೆ ಮಾನಸಿಕವಾಗಿ ನೊಂದವಳಂತೆ ಕಾಣುತ್ತಾಳೆ. ದೇವರ ನಂಬಿಕೆಯ ಬಗ್ಗೆ ಬಹಳವಾಗಿ ಆಳಕ್ಕೆ ಹೋಗುತ್ತಾಳೆ. ದೇವರ ಬಗ್ಗೆ ಮಾತ್ರ ಮಾತನಾಡುತ್ತಾಳೆ. ಮನನೊಂದು ದೈವತ್ವದ ಕಡೆ ವಾಲಿರುವ ಸಾಧ್ಯತೆಯೂ ಇದೆ. ರಿಂಕೂ ದೇವಿಗೆ ಮಾನಸಿಕ ತಜ್ಞರಿಂದ ಚಿಕಿತ್ಸೆ ಕೊಡಿಸಿದರೆ ಒಳ್ಳೆಯದು ಅಂತ ವಿಶು ಶೆಟ್ಟಿ ಹೇಳಿದ್ದಾರೆ.