ಪಣಜಿ: ತನ್ನ ತಂದೆಯ ಕ್ಷೇತ್ರ ಪಣಜಿಯಲ್ಲಿ ಸ್ಪರ್ಧಿಸಲು ಟಿಕೆಟ್ ನಿರಾಕರಿಸಿದ್ದಕ್ಕೆ ಗೋವಾ ಮಾಜಿ ಸಿಎಂ ಮನೋಹರ್ ಪರಿಕ್ಕರ್ ಪುತ್ರ ಉತ್ಪಲ್ ಪರಿಕ್ಕರ್, ಬಿಜೆಪಿ ತೊರೆದಿದ್ದಾರೆ. ಅಲ್ಲದೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.
ಕಳೆದ ಹಾಗೂ ಈ ಚುನಾವಣೆ ಸಮಯದಲ್ಲಿ ಪಕ್ಷಕ್ಕೆ ಮನವರಿಕೆ ಮಾಡಲು ಪ್ರಯತ್ನಿಸಿದೆ. ಎಷ್ಟೇ ಪ್ರಯತ್ನಿಸಿದರೂ ಪಣಜಿ ಕ್ಷೇತ್ರದ ಉಮೇದುವಾರಿಕೆಯನ್ನು ಪಡೆಯಲು ನನಗೆ ಸಾಧ್ಯವಾಗಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಪಕ್ಷಕ್ಕೆ ಅವಕಾಶವಾದಿಯಾಗಿ ಬಂದವರಿಗೆ ಟಿಕೆಟ್ ನೀಡಲಾಗಿದೆ. ಅದಕ್ಕಾಗಿಯೇ ನಾನು ಪಕ್ಷದಿಂದ ಹೊರಬರುವ ನಿರ್ಧಾರ ಮಾಡಿದ್ದೇನೆ. ಪಣಜಿ ಜನರು ನನ್ನ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತಾರೆ ಎಂದು ಪರಿಕ್ಕರ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಪರಿಕ್ಕರ್ ಪುತ್ರನನ್ನು ಎಎಪಿಗೆ ಆಹ್ವಾನಿಸಿದ ಕೇಜ್ರಿವಾಲ್
ಮೂರು ಬಾರಿ ಗೋವಾ ಮುಖ್ಯಮಂತ್ರಿಯಾಗಿದ್ದ ಹಾಗೂ ಕಡಲತೀರದ ರಾಜ್ಯದಲ್ಲಿ ಬಿಜೆಪಿಯ ಪ್ರಮುಖ ನಾಯಕರಾಗಿದ್ದ ಮನೋಹರ್ ಪರಿಕ್ಕರ್ ಅವರು 2019ರಲ್ಲಿ ನಿಧನರಾದರು. ತಮ್ಮ ವರ್ಚಸ್ಸು ಹಾಗೂ ಜನಪ್ರಿಯತೆಯಿಂದಾಗಿ 25 ವರ್ಷಗಳ ಕಾಲ ಪಣಜಿ ಕ್ಷೇತ್ರದಲ್ಲಿ ರಾಜಕೀಯ ಪ್ರಾಬಲ್ಯ ಹೊಂದಿದ್ದರು.
ತಂದೆಯಂತೆಯೇ ಮಗ ಉತ್ಪಲ್ ಪರಿಕ್ಕರ್ ಕೂಡ ಪಣಜಿ ಕ್ಷೇತ್ರದಿಂದಲೇ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅವರಿಗೆ ಪಣಜಿ ಕ್ಷೇತ್ರದಲ್ಲಿ ಟಿಕೆಟ್ ನೀಡಲು ಬಿಜೆಪಿ ನಿರಾಕರಿಸಿದೆ. ಇದನ್ನೂ ಓದಿ: ಸಿಎಂ ಅಭ್ಯರ್ಥಿಯಾಗಿ ನನ್ನ ಮುಖವನ್ನು ನೋಡಬಹುದು ಅಲ್ಲವೇ: ಪ್ರಿಯಾಂಕಾ ಗಾಂಧಿ