ಭೋಪಾಲ್: ಚುನಾವಣೆಗಾಗಿ 75 ಲಕ್ಷ ರೂಪಾಯಿ ಕೊಡಿ, ಇಲ್ಲವಾದರೆ ತನ್ನ ಕಿಡ್ನಿಯನ್ನಾದರೂ ಮಾರಾಟ ಮಾಡಲು ಅನುಮತಿ ನೀಡಿ ಎಂದು ಮಧ್ಯಪ್ರದೇಶದ ಸಮಾಜವಾದಿ ಪಕ್ಷದ(ಎಸ್‍ಪಿ) ಮಾಜಿ ನಾಯಕ ಹಾಗೂ ಬಾಲಘಾಟ್ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯೊಬ್ಬರು ಕೇಂದ್ರ ಚುನಾವಣಾ ಆಯೋಗದ ಮುಂದೆ ವಿಚಿತ್ರ ಮನವಿಯೊಂದನ್ನು ಇಟ್ಟಿದ್ದಾರೆ.
ಪಕ್ಷೇತರ ಅಭ್ಯರ್ಥಿ ಕಿಶೋರ್ ಸಮ್ರಿತ್ ಅವರು ಜಿಲ್ಲಾ ಚುನಾವಣಾ ಅಧಿಕಾರಿ ದೀಪಕ್ ಆರ್ಯ ಅವರಿಗೆ ಈ ರೀತಿ ವಿಚಿತ್ರ ಕೋರಿಕೆ ಮುಂದಿಟ್ಟು ಪತ್ರ ಬರೆದಿದ್ದಾರೆ. ಚುನಾವಣಾ ವೆಚ್ಚಕ್ಕೆ 75 ಲಕ್ಷವನ್ನು ತಮಗೆ ಚುನಾವಣಾ ಆಯೋಗವೇ ನೀಡಲಿ ಅಥವಾ ಬ್ಯಾಂಕ್‍ನಿಂದ ಲೋನ್ ಕೊಡಿಸಲಿ. ಈ ಎರಡು ಕೆಲಸ ಅವರಿಂದ ಆಗದಿದ್ದರೆ ನನ್ನ ಕಿಡ್ನಿಯನ್ನಾದರೂ ಮಾರಾಟ ಮಾಡಲು ಅನುಮತಿ ನೀಡಲಿ ಎಂದು ಚುನಾವಣಾ ಆಯೋಗಕ್ಕೆ ಕೇಳಿಕೊಂಡಿದ್ದಾರೆ.
ಚುನಾವಣಾ ಆಯೋಗವು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ವೆಚ್ಚದ ಮಿತಿಯನ್ನು 75 ಲಕ್ಷ ರೂ.ಗಳಿಗೆ ನಿಗದಿಗೊಳಿಸಿದೆ. ಆದ್ರೆ ಅಷ್ಟು ಹಣ ತಮ್ಮ ಬಳಿ ಇಲ್ಲದ ಕಾರಣ ಕಿಶೋರ್ ಸಮ್ರಿತ್ ಈ ರೀತಿ ಮನವಿ ಮಾಡಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕಿಶೋರ್ ಸಮ್ರಿತ್ ಅವರು, ಚುನಾವಣಾ ಆಯೋಗ ಲೋಕಸಭಾ ಚುನಾವಣಾ ಪ್ರಚಾರಕ್ಕೆ ಕೇವಲ 15 ದಿನಗಳ ಅವಕಾಶವನ್ನು ನೀಡದೆ. ಇಷ್ಟು ಹಣವನ್ನು ಈ ಅವಧಿಯಲ್ಲಿ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ. ನನ್ನ ಬಳಿ ಅಷ್ಟೊಂದು ಹಣವಿಲ್ಲ. ನಾನು ಸಮಾಜದಲ್ಲಿರುವ ಬಡವರನ್ನು ಉದ್ಧಾರ ಮಾಡಬೇಕು ಆದ್ದರಿಂದ ಗೆಲವು ಸಾಧಿಸಬೇಕು. ನನ್ನ ವಿರುದ್ಧ ಸ್ಪರ್ಧಿಸಿದವರು ಭ್ರಷ್ಟಾಚಾರಿಗಳು. ಅವರು ಆ ಅನ್ಯಾಯದ ಹಣವನ್ನು ಚುನಾವಣಾ ಪ್ರಚಾರಕ್ಕೆ ಖರ್ಚು ಮಾಡುತ್ತಿದ್ದಾರೆ. ಆದ್ರೆ ನನಗೆ ಆ ರೀತಿ ಅನ್ಯಾಯವಾಗಿ ಹಣ ಸಂಗ್ರಹಿಸಲು ಆಗಲ್ಲ. ಆದ್ದರಿಂದ ಚುನಾವಣಾ ಆಯೋಗ ನನ್ನ ಮನವಿಯನ್ನು ಪರಿಗಣಿಸಬೇಕೆಂದು ಕೋರಿದ್ದಾರೆ.