Bengaluru City
ಮ್ಯಾಟ್ರಿಮೋನಿಯಲ್ಲಿ ವರ ಹುಡುಕುವ ಯುವತಿಯರೇ ಈ ಸ್ಟೋರಿ ಓದಿ

ಬೆಂಗಳೂರು: ಪ್ರಸಿದ್ಧ ಮ್ಯಾಟ್ರಿಮೋನಿಯಲ್ಲಿ ವರನಿಗಾಗಿ ಹುಡುಕಾಡಿದ ಯುವತಿಗೆ ಹಣ ವಂಚಿಸಿರುವ ಘಟನೆ ಕೋರಮಂಗಲದಲ್ಲಿ ನಡೆದಿದೆ.
29ರ ವರ್ಷದ ಯುವತಿಗೆ ವಧುವರರ ಅನ್ವೇಷಣೆಯ ಮ್ಯಾಟ್ರಿಮೋನಿಯಲ್ಲಿ ಪರಿಚಿತನಾದ ಮುಹಮ್ಮದ್ ಅಬ್ದುಲ್ ಎಂಬಾತ ವಂಚನೆ ಮಾಡಿದ್ದಾರೆ.
ಪರಿಚಿತನಾದ ಅಬ್ದುಲ್ ತಾನು ಅಮೇರಿಕಾದ ನ್ಯೂಜೆರ್ಸಿಯಲ್ಲಿ ಉದ್ಯೋಗದಲ್ಲಿದ್ದು ಭಾರತಕ್ಕೆ ಬಂದು ಯುವತಿಯನ್ನ ಮದುವೆಯಾಗುವುದಾಗಿ ಹೇಳಿಕೊಂಡಿದ್ದ. ಆಗಸ್ಟ್ 13ರಂದು ಕರೆ ಮಾಡಿದ್ದ ಅಬ್ದುಲ್ ಯುವತಿಯ ವಿಳಾಸಕ್ಕೆ ಸಪ್ರ್ರೈಸ್ ಗಿಫ್ಟ್ ಕಳುಹಿಸುವುದಾಗಿ ಹೇಳಿದ್ದನು.
ಆತನ ಮಾತು ನಂಬಿದ್ದ ಯುವತಿಗೆ ವಾರದ ನಂತರ ಕೊರಿಯರ್ ಏಜೆನ್ಸಿಯವಳೆಂದು ಹೇಳಿಕೊಂಡಿದ್ದ ಯುವತಿಯೋರ್ವಳು ಕರೆ ಮಾಡಿ ತಮ್ಮ ವಿಳಾಸಕ್ಕೆ 18ಸಾವಿರ ಯುಎಸ್ ಡಾಲರ್ ಅಂದರೆ ಸುಮಾರು 11.64 ಲಕ್ಷ ಭಾರತೀಯ ರೂಪಾಯಿ ಕೊರಿಯರ್ ಮಾಡಲಾಗಿದೆ. ಆ ಗಿಫ್ಟ್ ಪಡೆಯಲು ಶೇಕಡ 18ರಷ್ಟು ಜಿ.ಎಸ್.ಟಿ ಪಾವತಿಸುವಂತೆ ಹೇಳಿದ್ದಳು.
ಅದರಂತೆ ಯುವತಿ 2.85 ಲಕ್ಷ ರೂಪಾಯಿ ಹಣವನ್ನ ಏಜೆನ್ಸಿ ಖಾತೆಗೆ ವರ್ಗಾಯಿಸಿದ್ದಾರೆ. ಬಳಿಕ ಪುನಃ 2.11 ಲಕ್ಷ ಬಾಕಿ ಮೊತ್ತ ಪಾವತಿಸುವಂತೆ ಹೇಳಿದ್ದಳು. ಇದರಿಂದ ಅನುಮಾನಗೊಂಡ ಯುವತಿ ಏಜೆನ್ಸಿ ಸಂಖ್ಯೆಗೆ ಮರು ಕರೆ ಮಾಡಿದಾಗ ಸ್ವಿಚ್ ಆಫ್ ಆಗಿತ್ತು. ಅತ್ತ ಅಬ್ದುಲ್ ಕೂಡಾ ಮ್ಯಾಟ್ರಿಮೋನಿಯಿಂದ ತನ್ನ ಅಕೌಂಟ್ ಡಿಲೀಟ್ ಮಾಡಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
ಇದೀಗ ತಾನು ಮೋಸ ಹೋಗಿರುವುದು ಅರಿತ ಯುವತಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾಳೆ.
