– ಮಾಜಿ ಗೆಳತಿಯ ಅಶ್ಲೀಲ ಫೋಟೋ ಅಪ್ಲೋಡ್
ಭುವನೇಶ್ವರ: ಮಾಜಿ ಗೆಳತಿಯ ಅಶ್ಲೀಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಕ್ಕಾಗಿ 27 ವರ್ಷದ ಯುವಕನನ್ನು ಪೊಲೀಸರು ಬಂಧಿಸಿರುವ ಘಟನೆ ಒಡಿಶಾದ ಜಾಜ್‍ಪುರ ಜಿಲ್ಲೆಯಲ್ಲಿ ನಡೆದಿದೆ.
ಆರೋಪಿ ಕಾಂತಿಗಾಡಿಯಾ-ಮಲಂದಾಪುರ ಗ್ರಾಮದ ನಿವಾಸಿಯಾಗಿದ್ದು, ಆತನನ್ನು ಶನಿವಾರ ಬಂಧಿಸಲಾಗಿದೆ. 23ರ ಯುವತಿ ಪ್ಯಾನಿಕೋಯಿಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ.
ಏನಿದು ಪ್ರಕರಣ?
ಆರೋಪಿ ಮತ್ತು ಯುವತಿ ಕಳೆದ ವರ್ಷ ಭೇಟಿಯಾಗಿದ್ದರು. ದಿನ ಕಳೆದಂತೆ ಇಬ್ಬರು ಸಂಬಂಧ ಹೊಂದಿದ್ದರು. ಈ ವೇಳೆ ಆರೋಪಿ ಯುವತಿಯ ಅಶ್ಲೀಲ ಫೋಟೋಗಳನ್ನು ತನ್ನ ಮೊಬೈಲ್ ಫೋನಿನಲ್ಲಿ ಕ್ಲಿಕ್ಕಿಸಿಕೊಂಡಿದ್ದನು. ಆಗ ಆರೋಪಿ ಯುವತಿಯ ಕುಟುಂಬಕ್ಕೆ ಸಾಲ ನೀಡಿದ್ದನು. ತಾನು ಕೊಟ್ಟಿದ್ದ ಹಣವನ್ನು ವಾಪಸ್ ಕೊಡುವಂತೆ ಜನವರಿಯಲ್ಲಿ ಯುವತಿಯ ಬಳಿ ಕೇಳಿಕೊಂಡಿದ್ದಾನೆ. ಹಣ ಕೇಳಿದ ತಕ್ಷಣ ಯುವತಿ ಆತನಿಂದ ದೂರವಾಗಿದ್ದಾಳೆ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದು ಬಂದಿದೆ.
ಅಷ್ಟೇ ಅಲ್ಲದೇ ಯುವತಿ ಇನ್ನೊಬ್ಬ ಪುರುಷನೊಂದಿಗೆ ಸಂಬಂಧವನ್ನು ಹೊಂದಿದ್ದಳು. ಇದರಿಂದ ಕೋಪಗೊಂಡ ಯುವಕ ಕಳೆದ ವಾರ ಯುವತಿಯ ಅಶ್ಲೀಲ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾನೆ. ಅಲ್ಲದೇ ತನ್ನ ಸಂಬಂಧಿಕರೊಂದಿಗೆ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾನೆ ಎಂದು ಇನ್ಸ್ ಪೆಕ್ಟರ್ ಅಜಯ್ ಕುಮಾರ್ ತಿಳಿಸಿದ್ದಾರೆ.
ಸದ್ಯಕ್ಕೆ ಆರೋಪಿಯ ವಿರುದ್ಧ ಐಪಿಸಿ ಸೆಕ್ಸನ್ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.