ಪ್ರೀತಿ ನಿರಾಕರಿಸಿದ್ದಕ್ಕೆ ಗುಪ್ತಾಂಗಕ್ಕೆ ಸ್ಕ್ರೂ ಡ್ರೈವರ್‌ನಿಂದ ಇರಿತ – ಐಸಿಯುನಲ್ಲಿದ್ದ ಯುವತಿ ಸಾವು

Public TV
2 Min Read
ckm lover murder collage copy

ಚಿಕ್ಕಮಗಳೂರು: ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಸ್ಕ್ರೂ ಡ್ರೈವರ್‌ನಿಂದ ಇರಿದು ಕೊಲೆಗೆ ಯತ್ನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಯುವತಿ ಮೃತಪಟ್ಟಿದ್ದಾಳೆ.

ಬಿಂದು(23) ಮೃತಪಟ್ಟ ಯುವತಿ. ಬಿಂದು ಎನ್.ಆರ್ ಪುರ ತಾಲೂಕಿನ ಬಾಸಾಪುರ ನಿವಾಸಿಯಾಗಿದ್ದು, ಆರೋಪಿ ಮಿಥುನ್ ಬಾಳೆಹೊನ್ನೂರಿನ ಗಡಿಗೇಶ್ವರದ ನಿವಾಸಿ. ಎನ್.ಆರ್ ಪುರ ತಾಲೂಕಿನ ದೀಪ್ತಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ಇಬ್ಬರು 10ನೇ ತರಗತಿ ನಂತರ ಸಂಪರ್ಕದಲ್ಲಿ ಇರಲಿಲ್ಲ. ಬಳಿಕ ಬಿಂದು ಫೇಸ್‍ಬುಕ್‍ನಲ್ಲಿ ಆರೋಪಿ ಮಿಥುನ್ ಜೊತೆ ಸ್ನೇಹ ಬೆಳೆಸಿಕೊಂಡಿದ್ದಳು. ಬಿಂದು ಯಾವಾಗಲೂ ಮಿಥುನ್‍ನನ್ನು ಕ್ಲೋಸ್ ಫ್ರೆಂಡ್ ಎಂದು ಹೇಳುತ್ತಿದ್ದಳು. ಮಿಥುನ್ ಯುವತಿಯನ್ನು ತುಂಬಾ ಪ್ರೀತಿಸುತ್ತಿದ್ದನು. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

ckm lover murder collage 1 copy

ನಡೆದಿದ್ದೇನು?
ಕಳೆದ 5 ದಿನದ ಹಿಂದೆ ಬಿಂದು ತನ್ನ ಫೇಸ್‍ಬುಕ್ ಗೆಳೆಯ ಮಿಥುನ್ ಜೊತೆ ಜಾಲಿ ರೇಡ್‍ಗೆ ಹೋಗಿದ್ದಾಳೆ. ಇಬ್ಬರು ಕಳಸ, ಹೊರನಾಡು ಹೋಗಿ ಹಿಂತಿರುಗಿ ಬರುವಾಗ ಕಗ್ಗನಹಳ್ಳದ ಬಳಿ ಭದ್ರಾ ನದಿ ದಂಡೆ ಮೇಲೆ ಕೂತು ಮಾತನಾಡುತ್ತಿದ್ದರು. ಈ ವೇಳೆ ಬಿಂದು ನನಗೆ ಬೆಂಗಳೂರು-ಮಂಗಳೂರಿನಲ್ಲಿ ಸ್ನೇಹಿತರು ಇದ್ದಾರೆ ಎಂದು ಹೇಳಿದ್ದಾಳೆ. ಬಳಿಕ ಮಾಜಿ ಪ್ರಿಯಕರನ ಹೆಸರು ಕೂಡ ಹೇಳಿದ್ದಾಳೆ. ಮಾಜಿ ಪ್ರಿಯಕರನ ಹೆಸರು ಹೇಳುತ್ತಿದ್ದಂತೆಯೇ ಆಕೆಯನ್ನು ಹುಚ್ಚನಂತೆ ಪ್ರೀತಿಸುತ್ತಿದ್ದ ಮಿಥುನ್ ಕೋಪ ನೆತ್ತಿಗೇರಿದೆ. ಈ ವೇಳೆ ಬೈಕಿನಲ್ಲಿದ್ದ ಸ್ಕ್ರೂ ಡ್ರೈವರ್‌ನಿಂದ ಮನಸ್ಸೋ ಇಚ್ಛೆ ಚುಚ್ಚಿ, ಎಸ್ಕೇಪ್ ಆಗಿದ್ದನು. ನಾಲ್ಕು ದಿನಗಳಿಂದ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಿಂದು ಈಗ ಮೃತಪಟ್ಟಿದ್ದಾಳೆ.

ckm lover murder collage 2 copy

ಆರೋಪಿ ಮಿಥುನ್, ಬಿಂದುವಿಗೆ ಒಂದು ಬಾರಿ ಚುಚ್ಚಿಲ್ಲ. ಆಕೆ ತನ್ನ ಮಾಜಿ ಪ್ರಿಯಕರನ ಹೆಸರು ಹೇಳುತ್ತಿದ್ದಂತೆ ಮಿಥುನ್ ಆಕೆಯನ್ನು ದಂಡೆಯಿಂದ ಭದ್ರಾ ನದಿಗೆ ನೂಕಿದ್ದಾನೆ. ಆಕೆ ಎದ್ದು ಬರುವಾಗ ಮನಸ್ಸೋ ಇಚ್ಛೆ ಕಲ್ಲು ಎಸೆದಿದ್ದಾನೆ. ಆಕೆ ಮೇಲೆ ಬಂದ ಕೂಡಲೇ ಕೈಯಲ್ಲಿದ್ದ ಸ್ಕ್ರೂ ಡ್ರೈವರ್‌ನಿಂದ ಕೆನ್ನೆ, ಕತ್ತು, ಪಕ್ಕೆಲುಬು ಸೇರಿದಂತೆ ದೇಹದ ಸೂಕ್ಷ್ಮ ಜಾಗಗಳಿಗೆ ಚುಚ್ಚಿ ಸ್ಥಳದಿಂದ ಪರಾರಿಯಾಗಿದ್ದನು. ಹಲ್ಲೆಯಿಂದ ಯುವತಿ ನರಳುತ್ತಾ ರಸ್ತೆಯಲ್ಲೇ ಬಿದ್ದಿದ್ದಳು. ಈ ವೇಳೆ ರಸ್ತೆಯಲ್ಲಿ ಹೋಗುತ್ತಿದ್ದವರು ನೋಡಿ ಆಕೆಯನ್ನು ಆಸ್ಪತ್ರೆ ಸೇರಿಸಿದ್ದರು.

ckm lover murder collage 3 copy

ಯುವತಿಯನ್ನು ಮೊದಲು ಚಿಕ್ಕಮಗಳೂರು ಹಾಗೂ ಹಾಸನದ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಬಿಂದು ಚಿಕಿತ್ಸೆಗೆ ಸರಿಯಾಗಿ ಸ್ಪಂದಿಸದ ಕಾರಣ ಆಕೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಯುವತಿಯ ತಲೆಗೆ ಹತ್ತು ಹೊಲಿಗೆ ಹಾಕಲಾಗಿತ್ತು. ಆದರೆ ಗುಪ್ತಾಂಗಕ್ಕೆ ಚುಚ್ಚಿದ್ದರಿಂದ ಊದಿಕೊಂಡು ಕಿವುಗಟ್ಟಿದ್ರಿಂದ ಬಿಂದು ಮೃತಪಟ್ಟಿದ್ದಾಳೆ. ಬಿಂದು ಮೇಲೆ ಹಲ್ಲೆ ಮಾಡಿ ನಾಪತ್ತೆಯಾಗಿದ್ದ ಮಿಥುನ್ ನೇರ ನ್ಯಾಯಾಲಯದಲ್ಲಿ ಶರಣಾಗಿ, ನ್ಯಾಯಾಂಗ ಬಂಧನದಲ್ಲಿದ್ದಾನೆ.

ckm lover murder collage 4 copy

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲು ಮಿಥುನ್ ಯುವತಿಯನ್ನು ಚಾಕುವಿನಿಂದ ಇರಿದಿದ್ದಾನೆ ಎಂದು ವರದಿಯಾಗಿತ್ತು. ಈಗ ಮಿಥುನ್ ಸ್ಕ್ರೂ ಡ್ರೈವರ್‌ನಿಂದ ಯುವತಿಗೆ ಇರಿದಿದ್ದಾನೆ ಎಂಬ ವಿಷಯ ತಿಳಿದು ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *