Connect with us

Chikkamagaluru

ಪ್ರೀತಿ ನಿರಾಕರಿಸಿದ ಯುವತಿಗೆ ಭಗ್ನ ಪ್ರೇಮಿಯಿಂದ ಚಾಕು ಇರಿತ

Published

on

ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಯುವತಿಗೆ ಚಾಕು ಇರಿದು, ಕೊಲೆಗೆ ಯತ್ನಿಸಿದ ಅಮಾನವೀಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬಾಳೆಹೊನ್ನೂರು ಸಮೀಪದ ಗಂಡಿಗೇಶ್ವರ ನಿವಾಸಿ ಮಿಥುನ್ ಯುವತಿಗೆ ಚಾಕು ಇರಿದ ಪಾಗಲ್ ಪ್ರೇಮಿ. ಘಟನೆಯಲ್ಲಿ ಯುವತಿ ಗಂಭೀರವಾಗಿ ಗಾಯಗೊಂಡಿದ್ದು, ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ. ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ಮಹಲ್ಗೋಡಿನಲ್ಲಿ ಬುಧವಾರ ಘಟನೆ ನಡೆದಿದೆ. ಇದನ್ನೂ ಓದಿ: ಪ್ರೇಯಸಿಗೆ ಚಾಕು ಇರಿದ – ತಾನೂ ಇರಿದ್ಕೊಂಡು, ಆಕೆಯ ಮೇಲೆಯೇ ಬಿದ್ದ

ಮಿಥುನ್ ತನ್ನನ್ನು ಪ್ರೀತಿಸುವಂತೆ ಖಾಂಡ್ಯದ ಯುವತಿಯನ್ನು ಪೀಡಿಸುತ್ತಿದ್ದ. ಆದರೆ ಯುವಕನ ಪ್ರೀತಿಯನ್ನು ಯುವತಿ ನಿರಾಕರಿಸಿದ್ದಾಳೆ. ಸಿಕ್ಕಾಗೆಲ್ಲಾ ಪ್ರೀತಿಸುವಂತೆ ಮಿಥುನ್ ಯುವತಿಗೆ ಒತ್ತಾಯಿಸುತ್ತಿದ್ದ. ಅಷ್ಟೇ ಅಲ್ಲದೆ ಬೆದರಿಕೆ ಕೂಡ ಹಾಕಿದ್ದ. ಮಿಥುನ್ ವರ್ತನೆಯಿಂದ ಬೇಸತ್ತ ಯುವತಿ ಆತನ ಪ್ರೀತಿಯನ್ನು ನಿರಾಕರಿಸುತ್ತಾ ಬಂದಿದ್ದಳು. ಇದರಿಂದ ಮನನೊಂದು ಯುವಕ ಮಹಲ್ಗೋಡು ಬಳಿ ಯುವತಿಯ ಹೊಟ್ಟೆ, ಬೆನ್ನು ಹಾಗೂ ಕುತ್ತಿಗೆಗೆ ಚಾಕು ಇರಿದು ನಾಪತ್ತೆಯಾಗಿದ್ದಾನೆ.

ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಯುವತಿಯನ್ನು ಬಾಳೆಹೊನ್ನೂರು ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಯೂ ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಹಾಸನಕ್ಕೆ ರವಾನಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಯುವತಿಯು ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾಳೆ.

ತಲೆಮರೆಸಿಕೊಂಡಿರುವ ಪಾಗಲ್ ಪ್ರೇಮಿ ಮಿಥುನ್ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.