ಕಲಬುರಗಿ: ಮನೆಗೆ ಹಚ್ಚುವ ಪೇಂಟ್‍ನಲ್ಲಿ ಮಿಕ್ಸ್ ಮಾಡುವ ಥಿನ್ನರ್ ಅನ್ನು ಕುಡಿಯುವ ನೀರೆಂದು ತಿಳಿದು ಬಾಲಕಿಯೋರ್ವಳು ಕುಡಿದು ತೀವ್ರ ಅಸ್ವಸ್ಥಗೊಂಡಿರುವಂತಹ ಘಟನೆ ಜಿಲ್ಲೆಯ ಆಳಂದ ತಾಲೂಕಿನ ಲಿಂಗನವಾಡಿ ಗ್ರಾಮದಲ್ಲಿ ನಡೆದಿದೆ.
7 ವರ್ಷದ ಬಾಲಕಿ ಸೌಮ್ಯ ಅಸ್ವಸ್ಥಗೊಂಡು ಕಲಬುರಗಿಯ ಬಸವೇಶ್ಬರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೂರು ದಿನಗಳ ಹಿಂದೆ ಬಾಲಕಿ ತಂದೆ ರೇವಣಸಿದ್ದಪ್ಪರು ಮನೆಗೆ ಪೇಂಟಿಂಗ್ ಮಾಡಿಸಲು ನಗರಕ್ಕೆ ಬಂದು ಪೇಂಟ್, ಪೆಂಟ್ ಬ್ರಷ್, ಥಿನ್ನರ್ ಸೇರಿದಂತೆ ಇನ್ನಿತರ ಸಾಮಾಗ್ರಿಗಳನ್ನ ಮನೆಗೆ ತಂದಿದ್ದಾರೆ.
ಈ ವೇಳೆ ಮಗಳು ಸೌಮ್ಯ ಅಪ್ಪನ ಬಳಿ ಬಂದು ನನಗೇ ಏನು ತಿನ್ನಲು ತಂದಿದಿಯಾ ಅಂತಾ ಕೇಳಿದ್ದಾಳೆ. ಆಗ ಅಪ್ಪ ಮಗಳನ್ನ ನಾ ಏನೂ ತಂದಿಲ್ಲ ಅಂತಾ ಹೇಳಿ ಹೊರಗಡೆ ಹೋಗಿದ್ದಾರೆ. ಇದೇ ಸಂದರ್ಭದಲ್ಲಿ ಬಾಲಕಿಯು ಅಪ್ಪ ತಂದಿಟ್ಟಿದ್ದ ಬ್ಯಾಗ್ ತೆರೆದು ನೋಡಿದ್ದಾಳೆ. ಬ್ಯಾಗ್‍ನಲ್ಲಿದ್ದ ಥಿನ್ನರ್ ಬಾಟಲನ್ನು ಕುಡಿಯುವ ನೀರಿನ ಬಾಟಲ್ ಅಂತಾ ತಿಳಿದು ಗಳಗಳನೆ ಕುಡಿದಿದ್ದಾಳೆ.
ಪರಿಣಾಮ ಬಾಲಕಿಯ ಮುಖವೆಲ್ಲ ವಿಚಿತ್ರವಾಗಿ ಊದಿಕೊಂಡಿದೆ. ಸದ್ಯ ಬಾಲಕಿಯು ಗಂಭೀರವಾಗಿ ಅಸ್ವಸ್ಥಗೊಂಡಿದ್ದು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾಳೆ.