– ಆಸ್ಪತ್ರೆಗೆ ದಾಖಲಿಸದೆ ತರಗತಿ ಮುಂದುವರಿಸಿದ ಟೀಚರ್
– ದಾರಿ ಮಧ್ಯೆ ಪ್ರಾಣಬಿಟ್ಟ ಬಾಲಕಿ
ತಿರುವನಂತಪುರಂ: ಹಾವು ಕಡಿತದಿಂದ ಬಾಲಕಿ ಪ್ರಾಣಬಿಟ್ಟ ಘಟನೆ ಕೇರಳದ ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿಯಲ್ಲಿ ನಡೆದಿದೆ.
ಶೆಹೆಲಾ ಶರ್ಲಿನ್(10) ಮೃತಪಟ್ಟ ಬಾಲಕಿ. ಹಾವು ಕಚ್ಚಿದ ಒಂದು ಗಂಟೆ ನಂತರ ಶೆಹೆಲಾಳನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಅಲ್ಲದೆ ಶೆಹೆಲಾಳಿಗೆ ಹಾವು ಕಚ್ಚಿದರೂ ಆಕೆಯ ತಂದೆ ಬಂದು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಿ ಶಿಕ್ಷಕರು ತಮ್ಮ ಪಾಠವನ್ನು ಮುಂದುವರಿಸುತ್ತಿದ್ದರು. ಆದರೆ ಅಷ್ಟರಲ್ಲಿ ಶೆಹೆಲಾ ಕಾಲು ನೀಲಿ ಬಣ್ಣಕ್ಕೆ ತಿರುಗಿತ್ತು ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.
Advertisement
ನಾವು ಶಿಕ್ಷಕರ ಗಮನಕ್ಕೆ ತಂದರೂ ಅವರು ನಿರ್ಲಕ್ಷ್ಯ ವಹಿಸಿದರು. ಹಾವು ಕಡಿತದಿಂದ ಗಾಯವಾಗಿಲ್ಲ. ಬದಲಾಗಿ ಶೆಹೆಲಾ ಉಗುರಿನಿಂದ ಗಾಯ ಮಾಡಿಕೊಂಡಿದ್ದಾಳೆ ಎಂದು ಹೇಳಿ ಪಾಠ ಮುಂದುವರಿಸಿದ್ದರು ಎಂದು ವಿದ್ಯಾರ್ಥಿಗಳು ದೂರಿದ್ದಾರೆ.
Advertisement
Advertisement
ಮಾಧ್ಯಮದವರು ಬಾಲಕಿ ಕುಳಿತಿದ್ದ ಡೆಸ್ಕ್ ಕೆಳಗೆ ರಂಧ್ರದೊಂದಿಗೆ ತರಗತಿಯ ದೃಶ್ಯಗಳನ್ನು ಪ್ರಸಾರ ಮಾಡಿತ್ತು. ಮೂಲಗಳ ಪ್ರಕಾರ ಟೀಚರ್ ಅಮಾನತುಗೊಂಡಿದ್ದು ವಿಚಾರಣೆ ಬಾಕಿ ಇದೆ ಎಂದು ತಿಳಿದು ಬಂದಿದೆ.
Advertisement
ಬಾಲಕಿಯ ಸಂಬಂಧಿಕರಾದ ಶಾನವಾಜ್ ಈ ಬಗ್ಗೆ ಪ್ರತಿಕ್ರಿಯಿಸಿ, ಶೆಹೆಲಾಳನ್ನು ಮೊದಲು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಬಳಿಕ ಅಲ್ಲಿನ ವೈದ್ಯರು ಶೆಹೆನಾಳನ್ನು ಕೋಝಿಕೋಡ್ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಲು ತಿಳಿಸಿದ್ದರು. ಆದರೆ ಶೆಹೆಲಾಳ ಸ್ಥಿತಿ ಹದಗೆಟ್ಟಿದ್ದರಿಂದ ಆಕೆಯನ್ನು ಕೊಝಿಕೋಡ್ ಹೋಗುವ ಮಾರ್ಗದಲ್ಲಿರುವ ವೈತ್ರಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಆಕೆಯನ್ನು ಪರಿಶೀಲಿಸಿದ ವೈದ್ಯರು ಶೆಹೆಲಾ ಮೃತಪಟ್ಟಿದ್ದಾಳೆ ಎಂದು ತಿಳಿಸಿದರು ಎಂಬುದಾಗಿ ವಿವರಿಸಿದರು.
ಈ ಬಗ್ಗೆ ವಯನಾಡ್ ಜಿಲ್ಲಾಧಿಕಾರಿ ಅದೀಲಾ ಅಬ್ದುಲಾ ಮಾತನಾಡಿ, ಇದು ಅತ್ಯಂತ ದುರದೃಷ್ಟಕರವಾದ ಸಂಗತಿ. ಈ ಘಟನೆಗೆ ಕಾರಣರಾದವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಮಗುವಿನ ವೈದ್ಯಕೀಯ ನೆರವು ವಿಳಂಬವಾಗಿದೆ ಎಂಬ ಆರೋಪದ ಬಗ್ಗೆ ವರದಿ ಸಲ್ಲಿಸಲು ಶಿಕ್ಷಣ ಇಲಾಖೆಯ ಅಧಿಕಾರಿಯನ್ನು ಕೇಳಿದ್ದೇನೆ ಎಂದು ಹೇಳಿದ್ದಾರೆ. ಇತ್ತ ಕೇರಳ ಸಿಎಂ ಪಿಣರಾಯಿ ವಿಜಯನ್, ಈ ಘಟನೆಯನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ.
ಬಾಲಕಿ ಸಾವಿನಿಂದ ರೊಚ್ಚಿಗೆದ್ದ ಗ್ರಾಮಸ್ಥರು ಹಾಗೂ ಬಾಲಕಿಯ ಸಂಬಂಧಿಕರು ಶಾಲೆ ಕಚೇರಿಗೆ ಹೋಗಿ ಅಲ್ಲಿದ್ದ ಶಿಕ್ಷಕರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಶಾಲೆಗೆ ಪೊಲೀಸರು ಬಿಗಿಯಾದ ಭದ್ರತೆ ನೀಡಿದ್ದು ಗ್ರಾಮಸ್ಥರನ್ನು ತಡೆದಿದ್ದಾರೆ.