– 15 ದಿನ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ
– ವಿಷ ಕೊಟ್ಟು ರಸ್ತೆಗೆ ಎಸೆದ ಕಾಮುಕ
ರಾಂಚಿ: ವ್ಯಕ್ತಿಯೊಬ್ಬ ನಾದಿನಿಯನ್ನು ತನ್ನ 15 ಮಂದಿ ಸ್ನೇಹಿತರ ಜೊತೆ ಸೇರಿಕೊಂಡು ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಅಲ್ಲದೇ ಸಂತ್ರಸ್ತೆಗೆ ವಿಷ ಕೊಟ್ಟು ಕೊಲೆ ಮಾಡಿರುವ ಅಮಾನವೀಯ ಘಟನೆ ಜಾರ್ಖಂಡ್‍ನಲ್ಲಿ ನಡೆದಿದೆ.
ಜಾರ್ಖಂಡ್‍ನ ಚಾನ್ಹೋ ಪೊಲೀಸ್ ಠಾಣಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸ್ವಂತ ನಾದಿನಿಯನ್ನು ಮನೆಯಲ್ಲಿ 15 ದಿನಗಳ ಕಾಲ ಕೂಡಿ ಹಾಕಿಕೊಂಡು 15 ಮಂದಿ ಸ್ನೇಹಿತರೊಂದಿಗೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ನಂತರ ಆಕೆಗೆ ವಿಷ ಕೊಟ್ಟು ರಸ್ತೆಗೆ ಎಸೆದಿದ್ದಾನೆ. ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಸಂತ್ರಸ್ತೆಯನ್ನು ರಕ್ಷಿಸಿ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಂತ್ರಸ್ತೆ ಮೃತಪಟ್ಟಿದ್ದಾಳೆ.
ಸಂತ್ರಸ್ತೆ ಕುಟುಂಬದವರು ಈ ಕುರಿತು ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಅಳಿಯ ಮತ್ತು ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಏನೋ ನೆಪ ಹೇಳಿ ಮನೆಯಿಂದ ಆಕೆಯನ್ನು ಹೊರಗಡೆ ಕರೆಸಿಕೊಂಡು ಅಪಹರಿಸಿದ್ದಾರೆ ಎಂದು ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
ಸಂತ್ರಸ್ತೆ ನಾಪತ್ತೆಯಾದಗಿನಿಂದ ಕುಟುಂಬದವರಿಗೆ ಆಕೆಯ ಬಗ್ಗೆ ತಿಳಿದಿರಲಿಲ್ಲ. ಬಾವನೇ ಆಕೆಯನ್ನು ಅಪಹರಿಸಿ ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು 15 ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ನಂತರ ವಿಷ ಕೊಟ್ಟು ರಸ್ತೆಗೆ ಎಸೆದಿದ್ದಾನೆ. ಗುರುವಾರ ಸಂಜೆ ಸಂತ್ರಸ್ತೆ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಕ್ಷಣ ಆಕೆಯನ್ನು ಸ್ಥಳೀಯರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧಕಾರ್ಯ ಮಾಡುತ್ತಿದ್ದಾರೆ.