ಉಡುಪಿ: ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಟವಾಡುತ್ತಿದ್ದ 6 ವರ್ಷದ ಬಾಲಕಿಯೊಬ್ಬಳನ್ನು ಮಹಿಳೆಯೋರ್ವಳು ಅಪಹರಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ.
ಮೂಲತಃ ಕುಂದಾಪುರದ ಉಪ್ಪುಂದ ನಿವಾಸಿ ಗೀತಾ(42) ಬಾಲಕಿಯನ್ನು ಕದ್ದು ಸಿಕ್ಕಿಬಿದ್ದ ಕಳ್ಳಿ. ಪೊಲೀಸರು ಈಗ ಈಕೆಯನ್ನು ಬಂಧಿಸಿದ್ದಾರೆ.
ಉಡುಪಿ ನಗರದ ಕಿನ್ನಿಮೂಲ್ಕಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಾಳೆ. ಈಕೆಯ ಗಂಡನ ಚಿಕಿತ್ಸೆಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕಳೆದ 20 ನಗಳಿಂದ ಇದ್ದು ಗಂಡ ಡಿಸ್ಜಾರ್ಜ್ ಆದರೂ ವಾರ್ಡ್ ನಲ್ಲಿ ಅಡ್ಡಾಡುತ್ತಿದ್ದಳು ಎನ್ನಲಾಗಿದೆ.
ಆರೋಪಿ ಸಿಕ್ಕಿಬಿದ್ದಿದ್ದು ಹೇಗೆ?
ಕಳ್ಳಿ ಗೀತಾ ಆಸ್ಪತ್ರೆ ವಾರ್ಡ್ ನಲ್ಲಿ ದಾಖಲಾಗಿದ್ದ ಹುನಗುಂದ ತಾಲೂಕಿನ ಕೂಲಿಕಾರ್ಮಿಕ ಮುತ್ತಪ್ಪ ಮತ್ತವರ ಪತ್ನಿ ಆಸ್ಮಾ ಜೊತೆಗಿದ್ದ ಸಂದರ್ಭ 6 ವರ್ಷದ ಬಾಲಕಿ ಹೊರಗಡೆ ಆಟವಾಡುತ್ತಿದ್ದಳು. ಇದನ್ನು ಗಮನಿಸಿದ ಆರೋಪಿ ಗೀತಾ ಆಕೆಗೆ ಚಾಕ್ಲೇಟ್ ತೋರಿಸಿ ಕರೆದು ಬಾಲಕಿಯನ್ನು ಕಿನ್ನಿಮೂಲ್ಕಿಯ ಮನೆಗೆ ಕರೆದುಕೊಂಡು ಹೋಗಿದ್ದಾಳೆ. ಮನೆಯಲ್ಲಿ ಬಾಲಕಿ ಅತ್ತಾಗ ಕೆನ್ನೆಗೆ ಹೊಡೆದಿದ್ದಾಳೆ. ಆಕೆಯ ಅಳು ಹೆಚ್ಚಾದಾಗ ಸ್ಥಳೀಯರಿಗೆ ಅನುಮಾನ ಬರುತ್ತದೆ ಎಂಬ ಭಯದಲ್ಲಿ ಸಂಜೆ ಮತ್ತೆ ಬಾಲಕಿಯನ್ನು ಆಸ್ಪತ್ರೆಯ ಬಳಿ ಬಿಡಲು ಬಂದಿದ್ದಾಳೆ.
ಈ ವೇಳೆ ಇತ್ತ ಬಾಲಕಿ ನಾಪತ್ತೆಯಾಗಿದೆಯೆಂದು ಆಕೆಯ ಹೆತ್ತವರು ಆಸ್ಪತ್ರೆ ಸಿಬ್ಬಂದಿಗಳು ಸಿಸಿ ಕ್ಯಾಮರಾ ಚೆಕ್ ಮಾಡುತ್ತಿದ್ದರು. ಇದೇ ಸಂದರ್ಭ ಆರೋಪಿ ಗೀತಾ ಬಾಲಕಿಯನ್ನು ಬಿಡಲು ಆಸ್ಪತ್ರೆಗೆ ಬಂದಿದ್ದು, ಬಂದ ಕಳ್ಳಿಯನ್ನು ಹಿಡಿದು ಮಹಿಳಾ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.