ವಾಷಿಂಗ್ಟನ್: ಚಲಿಸುತ್ತಿದ್ದ ಕಾರಿನ ಬಾಗಿಲನ್ನು ದರೋಡೆಕೋರನೊಬ್ಬ ಓಪನ್ ಮಾಡಿ ಬಾಲಕಿ ರಸ್ತೆಗೆ ಬೀಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮೆರಿಕದ ಇಲ್ಲಿನಾಯ್ಸ್‍ನ ಅರೋರಾ ಪಟ್ಟಣದಲ್ಲಿ ಈ ಘಟನೆ ನಡೆದಿದ್ದು, ದರೋಡೆಕೋರ ಡೋರ್ ತೆರೆದು ಮತ್ತೊಂದು ಕಾರಿನ ಮೇಲೆ ಹತ್ತಿ ಪರಾರಿಯಾಗಿದ್ದಾನೆ.
ಏನಿದು ಘಟನೆ?
ಗ್ಯಾಸ್ ತುಂಬಿಸಿದ ಬಳಿಕ ತಂದೆ ಕಾರನ್ನು ಚಾಲನೆ ಮಾಡಿದ್ದಾರೆ. ಈ ವೇಳೆ ಅಲ್ಲಿದ್ದ ದರೋಡೆಕೋರ ಹಿಂದಿನ ಡೋರನ್ನು ಓಪನ್ ಮಾಡಿದ್ದಾನೆ. ಓಪನ್ ಮಾಡಿದ ಪರಿಣಾಮ ಹಿಂದಿನ ಸೀಟಿನಲ್ಲಿ ಕುಳಿತಿದ್ದ 11 ವರ್ಷದ ಮಗಳು ರಸ್ತೆಗೆ ಬಿದ್ದಿದ್ದಾಳೆ. ದರೋಡೆಕೋರ ಡೋರ್ ಓಪನ್ ಮಾಡಿದ ತಕ್ಷಣ ಅಲ್ಲೆ ನಿಂತಿದ್ದ ಇನ್ನೊಂದು ಕಾರಿನ ಬಾನೆಟ್ ಮೇಲೆ ಹತ್ತಿದ್ದಾನೆ. ದರೋಡೆಕೋರ ಕುಳಿತ ಕೂಡಲೇ ಆ ಕಾರು ವೇಗವಾಗಿ ಹೋಗಿದೆ.
ಅದೃಷ್ಟವಶಾತ್ ಕೆಳಗೆ ಬಿದ್ದ ಮಗಳಿಗೆ ಯಾವುದೇ ಗಂಭೀರ ಗಾಯವಾಗಿಲ್ಲ. ಬಿದ್ದ ವಿಚಾರ ಗೊತ್ತಾಗಿ ನಂತರ ತಂದೆ ಬಂದು ಮಗಳನ್ನು ಅಪ್ಪಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಈ ಘಟನೆ ನಡೆದ ಒಂದು ಗಂಟೆಯ ಒಳಗಡೆ ಪೊಲೀಸರು ಶಂಕಿತ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.