ಲಕ್ನೋ: ಸಂಬಂಧಿಕನೊಬ್ಬ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಉತ್ತರ ಪ್ರದೇಶದ ಬರಾಬಂಕಿಯಲ್ಲಿ ನಡೆದಿದೆ.
ಈ ಘಟನೆ ಶನಿವಾರ ನಡೆದಿದ್ದು, 26 ವರ್ಷದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಬಾಲಕಿಯ ಸಂಬಂಧಿಕನಾಗಿದ್ದು, ಚಾಲಕನಾಗಿ ಕೆಲಸ ಮಾಡುತ್ತಿದ್ದನು. ಶನಿವಾರ ಆರೋಪಿ ಚಾಲಕ ಬಾಲಕಿಯ ಕುಟುಂಬದವರನ್ನು ಭೇಟಿ ಮಾಡಲು ಮನೆಗೆ ಬಂದಿದ್ದಾನೆ.
ಈ ವೇಳೆ ಬಾಲಕಿ ಮನೆಯ ಹಿಂದೆ ಆಟವಾಡುತ್ತಿದ್ದಳು. ಆಗ ಆರೋಪಿ ಹೋಗಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ಕೃತ್ಯ ಎಸಗಿದ ನಂತರ ಆರೋಪಿ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಸ್ಥಳೀಯರು ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವ ಮೊದಲು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅರವಿಂದ್ ಚತುರ್ವೇದಿ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಆದರೆ ಆರೋಪಿಯ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದನು. ಹೀಗಾಗಿ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇತ್ತ ಬಾಲಕಿಯ ಕುಟುಂಬದವರು ನೀಡಿದ ದೂರಿದ ಆಧಾರದ ಮೇರೆಗೆ ಆರೋಪಿ ವಿರುದ್ಧ ಪೋಕ್ಸೋ ಕಾಯ್ಡೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.