ಹೈದರಾಬಾದ್: ಶಾಲೆಯ ಮುಖ್ಯ ಶಿಕ್ಷಕನೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿ, ಮನೆಗೆಲಸ ಮಾಡಲು ಒತ್ತಾಯಿಸಿರುವ ಘಟನೆ ಹೈದರಾಬಾದಿನಲ್ಲಿ ನಡೆದಿದೆ.
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಬಟಸಿಂಗರಂನ ಜಾನೆಟ್ ಜಾರ್ಜ್ ಸ್ಮಾರಕ ವಸತಿ ಶಾಲೆಯ ಮುಖ್ಯ ಶಿಕ್ಷಕ ಕೆ.ಪ್ರಸಾದ್ ರಾವ್(51) ಹಾಗೂ ಇದೇ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಈತನ ಪತ್ನಿ ಕೆ.ಶರಧಿ ಅವರನ್ನು ಹೈದರಾಬಾದ್‍ನ ಎಸ್‍ಇಇ ತಂಡದೊಂದಿಗೆ ಪೊಲೀಸರು ಬಂಧಿಸಿದ್ದಾರೆ.
ಮಕ್ಕಳ ಸಹಾಯವಾಣಿ ಮೂಲಕ ಸಂತ್ರಸ್ತೆ ದೂರು ದಾಖಲಿಸಲಾಗಿದ್ದು, 15 ವರ್ಷದ ಬಾಲಕಿ 2015ರಲ್ಲಿ ಶಾಲೆಗೆ ದಾಖಲಾಗಿದ್ದಳು. ನಂತರ ಶಾಲೆಯ ವಸತಿ ನಿಲಯದಲ್ಲೇ ವಾಸವಿದ್ದಳು. ಬಾಲಕಿ ಮಲಗಿದ್ದಾಗ, ಹಾಸ್ಟೆಲ್ ವಾರ್ಡನ್ ಪ್ರಸಾದ್ ಬಾಲಕಿಯ ಕೋಣೆಗೆ ಆಗಮಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ವಿವರಿಸಿದ್ದಾಳೆ.
ಈ ಕುರಿತು ಪೊಲೀಸರು ಮಾಹಿತಿ ನೀಡಿ, ಆತ ಬಾಲಕಿ ಮೇಲೆ ಪದೇ ಪದೆ ಅತ್ಯಾಚಾರ ಎಸಗುತ್ತಿದ್ದ, ಅಲ್ಲದೆ ಅವಳಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ವರದಿಯಾಗಿದೆ.
ಪ್ರಸಾದ್ ಪತ್ನಿ ಶರಧಿ ಕೂಡ ಬಾಲಕಿಗೆ ಕಿರುಕುಳ ನೀಡಿ ದಂಪತಿಯ ಮನೆಯಲ್ಲಿ ಮನೆ ಕೆಲಸ ಮಾಡುವಂತೆ ಒತ್ತಾಯಿಸಿದ್ದರು. ಬಾಲಕಿ ಕೆಲಸ ಮಾಡಲು ನಿರಾಕರಿಸಿದಾಗ ಆಕೆಯನ್ನು ಥಳಿಸಲಾಗಿದೆ. ಮುಖ್ಯ ಶಿಕ್ಷಕ ಈ ಬಾಲಕಿಗೆ ಮಾತ್ರವಲ್ಲ ಹಾಸ್ಟೆಲ್‍ನಲ್ಲಿರುವ ಇತರ ಹುಡುಗಿಯರನ್ನೂ ನಿಂದಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಕಿರುಕುಳ ಸಹಿಸಲಾಗದೆ, ಸಂತ್ರಸ್ತೆ ಜೂನ್ ತಿಂಗಳಲ್ಲಿ ಶಾಲೆಯನ್ನು ತೊರೆದಿದ್ದಾಳೆ. ಶುಕ್ರವಾರ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿದ್ದಾಳೆ. ನಂತರ ಪೊಲೀಸರು ಹಾಗೂ ಎಸ್‍ಇಇ ತಂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ದಂಪತಿ ವಿರುದ್ಧ ಅತ್ಯಾಚಾರ ಆರೋಪಕ್ಕೆ ಸಂಬಂಧಿಸಿದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.