ಕೋಲಾರ: ಶಾಲೆಗೆ ಹೋಗುವಂತೆ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೆಜಿಎಫ್‍ನ ಎಸ್‍ಟಿ ಬ್ಲಾಕ್‍ನಲ್ಲಿ ನಡೆದಿದೆ.
ನ್ಯಾನ್ಸಿ (12) ಆತ್ಮಹತ್ಯೆಗೆ ಶರಣಾದ ಬಾಲಕಿ. ಅಮೂಲ್ ದಾಸ್ ಎಂಬುವರ ಪುತ್ರಿಯಾಗಿದ್ದು, 7 ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು. ಪೋಷಕರು ಪ್ರತಿದಿನ ಸರಿಯಾಗಿ ಶಾಲೆಗೆ ಹೋಗುವಂತೆ ಬುದ್ಧಿವಾದ ಹೇಳಿದ್ದಾರೆ. ಇದರಿಂದ ಮನನೊಂದು ಬಾಲಕಿ ನೇಣಿಗೆ ಶರಣಾಗಿದ್ದಾಳೆ.
ನ್ಯಾನ್ಸಿಗೆ ಶಾಲೆಗೆ ಹೋಗುವುದು, ಓದುವುದು ಇಷ್ಟ ಇರಲಿಲ್ಲ. ಆದರೂ ಮನೆಯವರು ಬಲವಂತ ಮಾಡಿ ಕಳಿಸುತ್ತಿದ್ದರು. ಪ್ರತಿದಿನ ಇದೇ ರೀತಿ ನ್ಯಾನ್ಸಿ ಮಾಡುತ್ತಿದ್ದಳು. ಇಂದು ಕೂಡ ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡಿದ್ದಾಳೆ. ಪೋಷಕರು ಬೈದು ಶಾಲೆಗೆ ಹೋಗು ಎಂದು ಹೇಳಿ ಮನೆಯಿಂದ ಹೊರ ಹೋಗಿದ್ದಾರೆ. ಆದರೆ ನ್ಯಾನ್ಸಿ ಬೆಳಿಗ್ಗೆ ಸುಮಾರು 8 ಗಂಟೆಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಸಂಬಂಧ ಕೆಜಿಎಫ್ ನ ಚಾಂಪಿಯನ್ ರೀಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.