ಚೆನ್ನೈ: ಯುವಕನೊಬ್ಬ ಫೋಟೋವನ್ನು ಅಶ್ಲೀಲವಾಗಿ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಕ್ಕೆ ಮನನೊಂದು ಯುವತಿ ಮತ್ತು ಆಕೆಯನ್ನು ಮದುವೆಯಾಗಬೇಕಿದ್ದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ನಡೆದಿದೆ.
ರಾಧಿಕಾ(22) ಮತ್ತು ವಿಘ್ನೇಶ್ (22) ಆತ್ಮಹತ್ಯೆ ಮಾಡಿಕೊಂಡ ಜೋಡಿ. ಆರೋಪಿ ಪ್ರೇಮ್ ಕುಮಾರ್ ರಾಧಿಕಾಳ ಫೋಟೋವನ್ನು ಅಶ್ಲೀಲವಾಗಿ ಕಾಣುವಂತೆ ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದನು. ಫೋಟೋಗಳು ವೈರಲ್ ಆದ ಬಳಿಕ ರಾಧಿಕಾ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಇತ್ತ ಯುವತಿಯ ಸಾವಿನ ನಂತರ ಆಕೆಯನ್ನು ಮದುವೆಯಾಗಬೇಕಿದ್ದ ವಿಘ್ನೇಶ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸದ್ಯಕ್ಕೆ ಯುವಕ ಪ್ರೇಮ್‍ಕುಮಾರ್ ಪೊಲೀಸರಿಗೆ ಶರಣಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಿಬ್ಬರನ್ನು ಬಂಧಿಸಲಾಗಿದೆ.
ಇಬ್ಬರ ಮೃತದೇಹದ ಮರಣೋತ್ತರ ಪರೀಕ್ಷೆ ಸಂಪೂರ್ಣವಾದ ಬಳಿಕ ಅವರ ದೇಹಗಳನ್ನು ತೆಗೆದುಕೊಳ್ಳಲು ಕುಟುಂಬದವರು ನಿರಾಕರಿಸಿದರು. ಅಷ್ಟೇ ಅಲ್ಲದೇ ಇಬ್ಬರು ಕುಟುಂಬದವರು ಕುರ್ವನ್ ಕುಪ್ಪಂನಲ್ಲಿ ಪ್ರತಿಭಟನೆ ಮಾಡಿದ್ದರು. ಈ ಪ್ರಕರಣದ ಹಿಂದಿನ ಉದ್ದೇಶ ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ. ಜೋಡಿಯ ಸಾವಿನ ನಂತರ ಸ್ಥಳದಲ್ಲಿ ಎರಡು ಜಾತಿಗಳಿಗೆ ಸಂಬಂಧಪಟ್ಟ ಗಲಾಟೆ ನಡೆದಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಮೃತ ರಾಧಿಕಾ ಕಡಲೂರಿನಲ್ಲಿ ಬಿಸಿಎ ವ್ಯಾಸಂಗ ಮಾಡುತ್ತಿದ್ದಳು. ವಿಘ್ನೇಶ್ ಆನ್‍ಲೈನ್ ಅಂಗಡಿಗಾಗಿ ಡೆಲಿವರಿ ಎಕ್ಷಿಕ್ಯೂಟೀವ್ ಆಗಿ ಕೆಲಸ ಮಾಡುತ್ತಿದ್ದನು. ವಿಘ್ನೇಶ್ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ ರಾಧಿಕಾ ಫೋಟೋಗಳನ್ನು ಪ್ರೇಮ್‍ಕುಮಾರ್ ಮಾರ್ಫ್ ಮಾಡಿ ವೈರಲ್ ಮಾಡಿದ್ದಾನೆ ಎಂದು ವರದಿಯಾಗಿದೆ.
ಒಂದು ತಿ0ಗಳ ಹಿಂದೆ ಪ್ರೇಮ್ ಕುಮಾರ್ ಮದುವೆಯಾಗುವ ಉದ್ದೇಶದಿಂದ ಅಪ್ರಾಪ್ತೆಯನ್ನು ಅಪಹರಿಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರೇಮ್ ಕುಮಾರ್ ವಿರುದ್ಧ ಮೃತ ವಿಘ್ನೇಶ್ ಸಾಕ್ಷಿ ಹೇಳಿದ್ದರು. ಬಲವಾದ ಸಾಕ್ಷಿ ಹಿನ್ನೆಲೆಯಲ್ಲಿ ಪ್ರೇಮ್‍ಕುಮಾರ್ ಜೈಲಿಗೆ ಹೋಗಿದ್ದನು. ಇತ್ತೀಚೆಗೆ ಬೇಲ್ ಪಡೆದುಕೊಂಡು ಪ್ರೇಮ್ ಕುಮಾರ್ ಹೊರ ಬಂದಿದ್ದನು ಎಂದು ವರದಿಯಾಗಿದೆ.
ಇದರಿಂದ ಕೋಪಗೊಂಡಿದ್ದ ಪ್ರೇಮ್‍ಕುಮಾರ್ ರಾಧಿಕಾ ಫೋಟೋಗಳನ್ನು ವೈರಲ್ ಮಾಡಿದ್ದಾನೆ. ಬಳಿಕ ರಾಧಿಕಾ ಮತ್ತು ಪ್ರೇಮ್‍ಕುಮಾರ್ ಕುಟುಂಬಗಳು ಮಾತನಾಡಿ ಮಾರ್ಫ್ ಫೋಟೋಗಳನ್ನು ಡಿಲೀಟ್ ಮಾಡಲಾಗಿತ್ತು. ಆದರೂ ರಾಧಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ ಈ ಬಗ್ಗೆ ಪ್ರಶ್ನಿಸಲು ಹೋದಾಗ ವಿಘ್ನೇಶ್‍ನನ್ನು ಪ್ರೇಮಕುಮಾರ್ ಮತ್ತು ಆತನ ಸಹಚರರು ಕೊಲೆ ಮಾಡಿದ್ದಾರೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ನಾವು ಕೊಲೆ ಆರೋಪದ ಕುರಿತು ತನಿಖೆ ಆರಂಭಿಸಲಿಲ್ಲ. ಅವರು ದೂರು ನೀಡಿದಂತೆ ಫೋಟೋಗಳ ಮಾರ್ಫ್ ಮಾಡಿದ್ದಕ್ಕಾಗಿ ಎಫ್‍ಐಆರ್ ಸಲ್ಲಿಸಿದ್ದೇವೆ. ಜೊತೆಗೆ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮತ್ತು ಐಟಿ ಕಾಯಿದೆಯಡಿಯಲ್ಲಿ ಪ್ರೇಮ್‍ಕುಮಾರ್ ವಿರುದ್ಧ ಕೇಸ್ ದಾಖಲಾಗಿದೆ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ.