ಬೆಂಗಳೂರು: ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ. ಅಂತಹದ್ದೊಂದು ಹೊಸ ಯೋಜನೆ ಜಾರಿಗೆ ತರುತ್ತೇನೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ಉತ್ತರ ಹಳ್ಳಿಯಲ್ಲಿ ಸಮಾಜ ಸಂಪರ್ಕ ವೇದಿಕೆ ನಿರ್ಮಾಣ ಮಾಡಿರೋ ವಿದ್ಯಾರ್ಥಿ ನಿಲಯ ಉದ್ಘಾಟನೆ ಕಾರ್ಯಕ್ರಮ ವೇಳೆ ಮಾತನಾಡಿದ ಅವರು, ಮೊಬೈಲ್ ಬ್ಯಾಂಕಿಂಗ್ ಯೋಜನೆ ಜಾರಿಗೆ ತರುತ್ತೇನೆ. ಅದರಿಂದ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡಲಾಗುತ್ತಿದೆ. ದಿನದ ಮಟ್ಟಿಗೆ ಸಾಲ ನೀಡೋ ಯೋಜನೆ ಜಾರಿ ತರುತ್ತೇನೆ. ಬೆಳಗ್ಗೆ ಸಾಲ ಪಡೆಯಿರಿ ಸಂಜೆ ತೀರಿಸಿ ಹೊಸ ಯೋಜನೆ ಜಾರಿಗೆ ತರುತ್ತೇನೆ. ಇದಕ್ಕೆ ಯಾವುದೇ ರೀತಿಯ ಬಡ್ಡಿ ಹಾಕುವುದಿಲ್ಲ ಎಂದು ಹೇಳಿದರು.
ಕೆಲವೇ ದಿನಗಳಲ್ಲಿ ಹಲವು ಬದಲಾವಣೆ ಮಾಡಲಿದ್ದೇನೆ. ಸಹಕಾರ ನೀಡಿ ಅಂತ ಕುಮಾರಸ್ವಾಮಿ ಮನವಿ ಮಾಡಿಕೊಂಡರು. ನನ್ನ ವಿರುದ್ಧ ಹಲವು ಟೀಕೆಗಳು ಬರುತ್ತಿದೆ. ಯಾವುದಕ್ಕೂ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಕೆಲಸ ನಾನು ಮಾಡುತ್ತೇನೆ ಎಂದು ತಿಳಿಸಿದರು.
ಜೈಲು ಶಿಕ್ಷೆ:
ರೈತರು ಲೇವಾದೇವಿದಾರರ ಹತ್ತಿರ ಸಾಲ ಪಡೆದುಕೊಂಡಿದ್ರೆ, ಅವರ ಜೀವನವೆಲ್ಲಾ ಬಡ್ಡಿ ಕಟ್ಟೋದರಲ್ಲಿ ಅಂತ್ಯವಾಗುತ್ತಿದೆ. ರಾಜ್ಯದಲ್ಲಿ ಬಡ್ಡಿ ಕಟ್ಟುವ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗಲು ಇದು ಮುಖ್ಯ ಕಾರಣವಾಗಿದೆ. ವರ್ಷಕ್ಕೆ 1 ಲಕ್ಷ 20 ಸಾವಿರಕ್ಕಿಂತಲೂ ಕಡಿಮೆ ವರಮಾನ ಹೊಂದಿರುವ ರೈತರಿಗೆ ಲೇವಾದೇವಿವಾರರು ಸಾಲ ಹಿಂದಿರುಗಿ ಕೊಡುವಂತೆ ಒತ್ತಾಯ ಮಾಡುವಂತಿಲ್ಲ. ಒಂದು ವೇಳೆ ರೈತರಿಗೆ ಒತ್ತಡ ಹಾಕಿದರೆ, ಆತನನ್ನು ಒಂದು ವರ್ಷ ಜೈಲು ಶಿಕ್ಷೆ ವಿಧಿಸುವಂತಹ ಕಾನೂನು ಜಾರಿಗೆ ತರಲು ನಿರ್ಧರಿಸಲಾಗಿದೆ.
ಈ ನಿರ್ಧಾರದಿಂದ ಸಾಲ ನೀಡಿದ ಕೆಲವರಿಗೆ ತೊಂದರೆ ಆಗಬಹುದು. ಆದರೆ ರೈತರು ತಾವು ಪಡೆದ ಹಣಕ್ಕಿಂತ ಹೆಚ್ಚಾಗಿ ಬಡ್ಡಿ ಕಟ್ಟಿರುವ ಉದಾಹರಣೆಗಳು ನಮ್ಮ ಮುಂದಿವೆ. ಆದರೂ ಶೇ. 80 ರಷ್ಟು ಅಸಲು ಹಣವನ್ನು ರೈತ ಬಾಂಧವರು ಪಾವತಿಸಿದ್ದಾರೆ. ಕುಮಾರಣ್ಣನ ಕೈಯಲ್ಲಿ ಏನೂ ಆಗಲ್ಲ ಅಂತಾ ಕೆಲವರು ಹೇಳುತ್ತಿದ್ದಾರೆ. ಇನ್ನು ಮೂರ್ನಾಲ್ಕು ತಿಂಗಳು ಕಾದು ನೋಡಿ ಎಂದು ಇದೇ ವೇಳೆ ತಿಳಿಸಿದ್ರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv