ಬರ್ಲಿನ್: ಜರ್ಮನಿಯ ನರ್ಸ್‍ವೊಬ್ಬ ಬೋರ್ ಆಯ್ತೆಂದು ಮಾರಣಾಂತಿಕ ಔಷಧಿ ಬಳಸಿ 106 ರೋಗಿಗಳ ಸಾವಿಗೆ ಕಾರಣನಾಗಿದ್ದಾನೆಂದು ಗುರುವಾರದಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಈತ ಇನ್ನೂ ಹೆಚ್ಚಿನ ರೋಗಿಗಳನ್ನ ಹತ್ಯೆ ಮಾಡಿರಬಹುದು. ಇನ್ನೂ ಹಲವು ಶವಗಳ ಅಧ್ಯಯನ ಮಾಡಲಾಗ್ತಿದೆ ಎಂದು ಹೇಳಿದ್ದಾರೆ.
41 ವರ್ಷದ ನೀಲ್ಸ್ ಹೋಗೆಲ್ ವಿರುದ್ಧ 2015ರಲ್ಲಿ 2 ಕೊಲೆ ಹಾಗೂ 4 ಕೊಲೆ ಯತ್ನ ಪ್ರಕರಣಗಳ ಆರೋಪ ಸಾಬೀತಾಗಿತ್ತು. ಇಲ್ಲಿನ ಬ್ರೆಮೆನ್‍ನ ಡೆಲ್ಮೆನ್‍ಹೋರ್ಸ್ಟ್ ಆಸ್ಪತ್ರೆಯಲ್ಲಿ ಈತ ತೀವ್ರ ನಿಗಾ ಘಟಕದಲ್ಲಿನ ರೋಗಿಗಳನ್ನ ಕೊಲೆ ಮಾಡಿದ್ದ.
Advertisement
Advertisement
ಈ ಪ್ರಕರಣಗಳ ವಿಶ್ಲೇಷಣೆ ವೇಳೆ ಮತ್ತಷ್ಟು ಜನ ಕೊಲೆಯಾಗಿರುವ ಬಗ್ಗೆ ಸಾಕ್ಷಿಗಳು ಸಿಕ್ಕಿವೆ. ಆಗಸ್ಟ್ ನಲ್ಲಿ ಹೋಗೆಲ್ 90ಕ್ಕೂ ಹೆಚ್ಚು ಇತರೆ ರೋಗಿಗಳನ್ನ ಕೊಂದಿದ್ದಾನೆಂದು ಪೊಲೀಸರು ಹೇಳಿದ್ದಾರೆ. ಈತ 1999ರಿಂದ 2005ವರೆಗೆ 2 ಆಸ್ಪತ್ರೆಗಳಲ್ಲಿ ಕೆಲಸ ಮಾಡಿದ್ದು, ಗುರುವಾರದಂದು ಪೊಲೀಸರು ಈತನಿಂದಾದ ಇನ್ನೂ 16 ಸಾವಿನ ಬಗ್ಗೆ ಖಚಿತಪಡಿಸಿದ್ದಾರೆ. ಇನ್ನೂ 5 ಇತರೆ ಪ್ರಕರಣಗಳ ಬಗ್ಗೆ ಟಾಕ್ಸಿಕಾಲಜಿ ಅಧ್ಯಯನ ನಡೆಯುತ್ತಿದ್ದು, ಮತ್ತಷ್ಟು ಸಾವಿನ ಬಗ್ಗೆ ಬೆಳಕಿಗೆ ಬರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
Advertisement
Advertisement
ರೋಗಿಗಳಿಗೆ ಹೃದಯಾಘಾತ ಅಥವಾ ರಕ್ತಪರಿಚಲನೆಯ ಕುಸಿತ ಉಂಟಾಗಬಹುದಾದಂತಹ ಔಷಧಿ ಇಂಜೆಕ್ಟ್ ಮಾಡಿದ್ದನ್ನು ಹೋಗಲ್ ಒಪ್ಪಿಕೊಂಡಿದ್ದಾನೆ. ಈ ರೀತಿ ಮಾಡಿ ನಂತರ ಅವರನ್ನು ಬದುಕಿಸಲು ಪ್ರಯತ್ನ ಪಟ್ಟು, ಒಂದು ವೇಳೆ ಯಶಸ್ವಿಯಾದ್ರೆ ಜೀವ ಉಳಿಸಿದವನೆಂದು ಎಲ್ಲರ ಮುಂದೆ ಮಿಂಚಬಹುದು ಎನ್ನುವುದು ಈತನ ಆಲೋಚನೆಯಾಗಿತ್ತು. ಇನ್ನೂ ಕೆಲವೊಮ್ಮೆ ಈತ ಬೇಜಾರಿನಿಂದಾಗಿ ಈ ರೀತಿ ಮಾಡುತ್ತಿದ್ದ ಎಂದು ವರದಿಯಾಗಿದೆ.
ಜರ್ಮನಿಯ ಇತಿಹಾಸದಲ್ಲೇ ಇದೊಂದು ಅಪರೂಪದ ಪ್ರಕರಣ. ಹೋಗಲ್ ಒಂದೇ ಮಾದರಿಯಲ್ಲಿ ರೋಗಿಗಳನ್ನ ಕೊಲ್ಲುತ್ತಿದ್ದ. ಅದರಲ್ಲೂ ಸಾವಿನ ಅಂಚಿನಲ್ಲಿದ್ದ ರೋಗಿಗಳನ್ನೇ ಬಲಿಪಶುಗಳನ್ನಾಗಿಸಿಕೊಳ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈತನಿಗೆ ಎಲ್ಲಾ ಪ್ರಕರಣಗಳೂ ನೆನಪಿಲ್ಲ. ಆದ್ರೆ 30ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರೋಗಿಗಳು ಮತ್ತು ಆತನ ವರ್ತನೆ ಬಗ್ಗೆ ನೆನಪಿಸಿಕೊಳ್ಳುತ್ತಾನೆ ಎಂದು ಪ್ರಾಸಿಕ್ಯೂಟರ್ ಡೇನಿಯಲ್ ಹೇಳಿದ್ದಾರೆ.
2005ರ ಜೂನ್‍ನಲ್ಲಿ ಹೋಗೆಲ್ ಡೆಲ್ಮೆನ್‍ಹೋಸ್ರ್ಟ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಇಂಜೆಕ್ಟ್ ಮಾಡುತ್ತಿದ್ದುದನ್ನು ಮಹಿಳಾ ನರ್ಸ್‍ವೊಬ್ಬರ ನೋಡಿದ ನಂತರ ಈತನ ಕೃತ್ಯ ಬೆಳಕಿಗೆ ಬಂದಿತ್ತು. ಆ ರೋಗಿ ಬದುಕುಳಿದಿದ್ದು, 2008ರ ಜೂನ್‍ನಲ್ಲಿ ಹೋಗೆಲ್‍ನನ್ನು ಬಂಧಿಸಲಾಗಿತ್ತು. ಕೊಲೆ ಯತ್ನದ ಹಲವು ಪ್ರಕರಣಗಳಲ್ಲಿ ಈತನಿಗೆ ಏಳೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಈ ಬಗ್ಗೆ ಸುದ್ದಿಯಾದ ನಂತರ ಮಹಿಳೆಯೊಬ್ಬರು ತನ್ನ ತಾಯಿಯೂ ಈ ಕಿಲ್ಲರ್ ನರ್ಸ್‍ನ ಕೃತ್ಯಕ್ಕೆ ಬಲಿಯಾಗಿರಬಹುದು ಎಂಬ ಸಂಶಯದಿಂದ ಪೊಲೀಸರ ಮೊರೆ ಹೋಗಿದ್ದರು. ನಂತರ ಅಧಿಕಾರಿಗಳು ಹಲವು ರೋಗಿಗಳ ಶವಪರೀಕ್ಷೆ ನಡೆಸಿದ್ದು, ಐದು ಶವಗಳಲ್ಲಿ ವಿಷಕಾರಿ ಡ್ರಗ್ಸ್ ಅಂಶ ಪತ್ತೆಯಾಗಿತ್ತು.
2015ರಲ್ಲಿ ಹೋಗೆಲ್‍ಗೆ ಜೀವಾವಧಿ ಶಿಕ್ಷೆ ವಿಧಿಸಲಾಯ್ತು. ಈ ವೇಳೆ ಈತ ಮತ್ತಷ್ಟು ರೋಗಿಗಳನ್ನ ಕೊಲೆ ಮಾಡಿರಬಹುದು ಎಂಬುದು ಸ್ಪಷ್ಟವಾಗಿತ್ತು. ಹಲವು ಶವಗಳನ್ನ ಅದಾಗಲೇ ಅಂತ್ಯಕ್ರಿಯೆ ಮಾಡಲಾಗಿದ್ದರಿಂದ ಈತನಿಂದ ಕೊಲೆಯಾದವರ ನಿರ್ದಿಷ್ಟ ಸಂಖ್ಯೆಯ ಬಗ್ಗೆ ತಿಳಿಯಲು ಸಾಧ್ಯವಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದರು.