ಬೆಂಗಳೂರು: ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ರಾಜೀನಾಮೆ ನೀಡಬೇಕು ಎಂಬ ವಿಚಾರ ಕುರಿತು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಬ್ಯಾಟ್ ಬೀಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಎಫ್‍ಐಆರ್ ಹಾಕಿದಾಕ್ಷಣ ಜಾರ್ಜ್ ರಾಜೀನಾಮೆ ನೀಡುವ ಅವಶ್ಯಕತೆ ಇಲ್ಲ. ಸಿಬಿಐ ತನಿಖೆ ಆರಂಭಿಸಿ ಯಾವುದಾದರೂ ಸಾಕ್ಷ್ಯ ದೊರಕಿದರೆ ಆಗ ರಾಜೀನಾಮೆ ಕೊಡಬೇಕಾಗತ್ತದೆ ಎಂದು ಹೇಳಿದರು.
Advertisement
ಪ್ರಸ್ತುತ ಜಾರ್ಜ್ ಅವರು ರಾಜೀನಾಮೆ ಕೊಡಬೇಕು ಎಂದು ನಾನು ಹೇಳುವುದಿಲ್ಲ. ಗಣಪತಿಯವರ ಆತ್ಮಹತ್ಯೆ ಪ್ರಕರಣ ಸಂಬಂಧ ಹಾಗೂ ರಾಜ್ಯ ಸರ್ಕಾರ ಪ್ರಕರಣದ ಸಾಕ್ಷ್ಯ ನಾಶ ಮಾಡಿದೆ ಎಂದು ಆರೋಪಿಸಿ ಅವರ ಕುಟುಂಬದವರು ಸುಪ್ರೀಂ ಮೊರೆ ಹೋಗಿದ್ದರು. ಆ ಕಾರಣಕ್ಕೆ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ವಹಿಸಿದೆ. ಇದು ಕೇಂದ್ರ ಅಥವಾ ರಾಜ್ಯ ಸರ್ಕಾರ ಸಿಬಿಐಗೆ ವಹಿಸಿದ ಪ್ರಕರಣ ಅಲ್ಲ. ಯಾವುದೇ ಪ್ರಕರಣ ಇದ್ದರೂ ಎಫ್‍ಐಆರ್ ಹಾಕೋದು ಸಹಜ ಎಂದು ತಿಳಿಸಿದರು.
Advertisement
ಇಂದಿನ ರಾಜಕಾರಣದಲ್ಲಿ ಪ್ರಾಮಾಣಿಕತೆ ಉಳಿದಿಲ್ಲ. ರಾಗ ದ್ವೇಷ ಇಲ್ಲದೆ ಕೆಲಸ ಮಾಡುವ ಭಾವನೆ ಕುಸಿತವಾಗಿದೆ. ಸಿಬಿಐ ನಿಷ್ಪಕ್ಷಪಾತ ತನಿಖೆ ನಡೆಸಲಿ. ಸಿಐಡಿ ತನಿಖೆ ವೇಳೆ ಸಾಕ್ಷ್ಯ ನಾಶಪಡಿಸಿದೆ ಎಂಬ ಆರೋಪ ಇದೆ. ಪೆನ್ ಡ್ರೈವ್, ಡಾಕ್ಯುಮೆಂಟ್ ನಾಶ ಪಡಿಸಿದ್ದೇ ನಿಜ ಆಗಿದ್ದರೆ ಸಿಬಿಐಗೆ ಮಾಹಿತಿ ಸಿಗುತ್ತಾ? ಸಾಕ್ಷ್ಯ ನಾಶ ನಿಜವೇ ಆಗಿದ್ದರೆ ಸಿಬಿಐ ನಿಂದ ಸತ್ಯಾಂಶ ಹೊರ ತರಲು ಸಾಧ್ಯವಾಗದೆ ಇರಬಹುದು ಎಂದು ಎಚ್‍ಡಿಕೆ ಹೇಳಿದರು.
Advertisement
ಜಂತಕಲ್ ಮೈನಿಂಗ್ ವಿಚಾರದಲ್ಲಿ ನನ್ನ ಮೇಲೂ ಎಸ್‍ಐಟಿ ಎಫ್‍ಐಆರ್ ದಾಖಲಿಸಿದೆ. ಆದರೆ ರಾಜ್ಯ ಸರ್ಕಾರ ನಮಗೆ ಸಂಬಂಧ ಇಲ್ಲ ಎನ್ನುತ್ತಿದೆ. ಇತ್ತೀಚೆಗೆ ಎಫ್‍ಐಆರ್ ಹಾಕೋದು ಕಾಮನ್, ತೆಗೆಸೋದು ಕಾಮನ್. ಬಿ ರಿಪೋರ್ಟ್ ಹಾಕಿಸೋದು ಸಹಜವಾಗಿದೆ. ಆದಾಗ್ಯೂ ಸುಪ್ರೀಂ ಮುಂದೆ ಎಸ್‍ಐಟಿ ಮೂಲಕ ಯಾಕೆ ಅರ್ಜಿ ಹಾಕಿಸಿದ್ರು ಅಂಥ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್‍ಡಿಕೆ ಚಾಟಿ ಬೀಸಿದರು.