– ಕನ್ನಡದಲ್ಲೇ ಭಾಷಣ ಆರಂಭಿಸಿದ ಆಂಧ್ರ ಡಿಸಿಎಂ
– ಮದುವೆ, ಹೋಟೆಲ್, ಸಿನಿಮಾಗೆ ನಾವು ಖರ್ಚು ಮಾಡ್ತೀವಿ.. ಗೋವುಗಳನ್ನು ಯಾಕೆ ರಕ್ಷಿಸಬಾರದು: ಪವನ್
ಉಡುಪಿ: ಜೆನ್ ಝೀ ಯುವಜನರು ಭಗವದ್ಗೀತೆಯನ್ನು ಜೊತೆಗಿರಿಸಿಕೊಳ್ಳಿ. ಗೀತೆ ಸಂಕಷ್ಟದಲ್ಲಿ ನಿಮಗೆ ಸಾಂತ್ವನ ನೀಡುತ್ತದೆ ಎಂದು ಆಂಧ್ರಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಕರೆ ನೀಡಿದರು.
ಉಡುಪಿಯಲ್ಲಿ ಗೀತೋತ್ಸವ ಸಮಾರೋಪದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದರು. ಕೃಷ್ಣ ಸನ್ನಿಧಿಗೆ ಶಿರ ಸಾಷ್ಟಾಂಗ ನಮಸ್ಕಾರ. ಕನ್ನಡ ನಾಡಿನ ಜನತೆಗೆ ನಮಸ್ಕಾರ. ಮೆಕಾಲೆಯ ಇಂಗ್ಲಿಷ್‌ನಲ್ಲಿ ಮಾತನಾಡುತ್ತೇನೆ. ಸನಾತನ ಧರ್ಮವನ್ನು ನಾಶ ಮಾಡುತ್ತದೆ ಎಂದು ಮೆಕಾಲೆ ಹೇಳಿದ್ದ. ಸನಾತನ ಧರ್ಮದ ಶಕ್ತಿಯ ಮುಂದೆ ಅದು ಸಾಧ್ಯವಾಗಿಲ್ಲ. ವೇದ ಮತ್ತು ಗೀತೆಯಿಂದ ನಮ್ಮ ಸಂಸ್ಕೃತಿ ಉಳಿಸಿಕೊಂಡೆವು. ಸ್ವಾಮಿಗಳು ಆಹ್ವಾನ ನೀಡಿರುವುದು ಅಚ್ಚರಿ ಮೂಡಿದೆ. ನನಗೆ ಕರ್ಮ ಯೋಗದಲ್ಲಿ ನಂಬಿಕೆ ಇದೆ. ಫಲಗಳ ನಿರೀಕ್ಷೆ ನನಗೆ ಇಲ್ಲ ಎಂದರು.
ನಮ್ಮ ನಾಗರಿಕತೆಯ ನಾಡಿ ಮಿಡಿತ ಭಗವದ್ಗೀತೆ. ಮೋದಿ-ಪುಟಿನ್‌ಗೆ ರಷ್ಯನ್ ಭಗವದ್ಗೀತೆಯನ್ನು ಕೊಡುಗೆ ನೀಡಿದರು. ಇದು ಒಂದು ಸಕಾಲಿಕ ಉಡುಗೊರೆ. ಯುದ್ಧಕಾಲದಲ್ಲಿ ಪಾಠ ಹೇಳುವ ಉಡುಗೊರೆ. ಯಾವತ್ತಿಗಿಂತಲೂ ಭಗವದ್ಗೀತೆ ಈಗ ಹೆಚ್ಚು ಸಕಾಲಿಕ. ಗೋರಕ್ಷಣೆ ಧರ್ಮದ ಒಂದು ಭಾಗ. ಭಾರತೀಯ ಸಂಪ್ರದಾಯದ ಒಂದು ಭಾಗ ಎಂದು ತಿಳಿಸಿದರು.
60 ಗೋವುಗಳ ಗೋಶಾಲೆ ನಾನು ನಡೆಸುತ್ತೇನೆ. ನಾನು ನನ್ನ ಇಲಾಖೆಯಿಂದ ಗೋಕುಲ ಎಂಬ ಯೋಜನೆ ತಂದಿದ್ದೇನೆ. ಸಮುದಾಯ ಗೋಶಾಲೆಯ ಕಲ್ಪನೆ ಹೊಂದಿದ್ದೇನೆ. ಹಿಂದೂಗಳು ತಮ್ಮ ಪರಿಸರದ ಗೋವುಗಳನ್ನು ರಕ್ಷಣೆ ಮಾಡಬೇಕು. ಕುಟುಂಬ ಒಂದು ಗೋವನ್ನು ರಕ್ಷಣೆ ಮಾಡಬೇಕು. ಇನ್ನೊಂದು ಧರ್ಮವನ್ನು ದೂರುವುದರ ಬದಲು ಪ್ರತಿ ಕುಟುಂಬ ಒಂದು ಗೋವನ್ನು ರಕ್ಷಣೆ ಮಾಡಬೇಕು. ಮದುವೆ, ಹೋಟೆಲ್, ಸಿನಿಮಾಗೆ ನಾವು ಖರ್ಚು ಮಾಡುತ್ತೇವೆ. ನಾವ್ಯಾಕೆ ಗೋವುಗಳ ರಕ್ಷಣೆ ಮಾಡಬಾರದು ಎಂದು ಪ್ರಶ್ನಿಸಿದರು.
ನಾನು ವಿಧ್ವಾಂಸರ ಕುಟುಂಬದಿಂದ ಬಂದವನಲ್ಲ, ಭಕ್ತರ ಕುಟುಂಬದಿಂದ ಬಂದವನು. ಹನುಮ ಭಕ್ತರ ಕುಟುಂಬ ನಮ್ಮದು. ಹರೇ ರಾಮ ಹರೇ ಕೃಷ್ಣ ಎಂದು ನಮಗೆ ತಂದೆ ಕಳಿಸಿದರು. ತಾರಕ ಮಂತ್ರ ನನ್ನ ಜೀವನದಲ್ಲಿ ಪವಾಡ ಮಾಡಿದೆ. ಹರೇ ರಾಮ ಹರೇ ರಾಮ ಹರೇ ಕೃಷ್ಣ ಹರೇ ಕೃಷ್ಣ ಹರೇ ಹರೇ ಎಂದು ಹೇಳುತ್ತಾ ಬಂದ ಕುಟುಂಬ. ಮಾನಸಿಕವಾಗಿ ಕುಗ್ಗಿದಾಗಲೆಲ್ಲ ಈ ಮಂತ್ರ ನನ್ನನ್ನು ಮೇಲಕ್ಕೆ ಎತ್ತಿದೆ. ಉಡುಪಿ ವೈಕುಂಠವಾಗಿದೆ. ಆಧ್ಯಾತ್ಮದ ಸೆಳೆತ ಇಲ್ಲಿ ನಾನು ಕಂಡಿದ್ದೇನೆ. ಇದು ಅಧ್ಯಾತ್ಮದ ಪವರ್ ಹೌಸ್. ಮಧ್ವಾಚಾರ್ಯರಿಂದ ಉಡುಪಿಯ ಕೀರ್ತಿ ಹೆಚ್ಚಿದೆ. ಹನುಮ ಭೀಮರ ಅವತಾರ ಆಚಾರ್ಯ ಮಧ್ವರು. 800 ವರ್ಷಗಳ ಇತಿಹಾಸ ಹಾಗೂ ದ್ವೈತ ಮತ ಪ್ರಪಂಚಕ್ಕೆ ಪ್ರೇರಣೆ ನೀಡಿದೆ. ವಿದೇಶಗಳಲ್ಲಿ ಪುತ್ತಿಗೆ ಶ್ರೀಗಳ ಹಿಂದೂ ಧರ್ಮ ಪ್ರಚಾರ ಗಮನಾರ್ಹವಾಗಿದೆ. ಒಂದು ಕೋಟಿ ಜನರಿಂದ ಬರೆಸುತ್ತಿದ್ದಾರೆ. ಗೀತೆ ಬರೆಯುತ್ತಿರುವ ಒಂದು ಕೋಟಿ ಜನರಿಗೆ ಅಭಿನಂದನೆಗಳು ಎಂದು ತಿಳಿಸಿದರು.
ನಾನು ಕೂಡ ಭಗವದ್ಗೀತೆ ಬರೆಯುತ್ತೇನೆ. ಕನಕದಾಸರ ಭಕ್ತಿ ನನಗೆ ಕುತೂಹಲ ಮೂಡಿಸಿದೆ. ಕನಕನ ಕಿಂಡಿ ಕೇವಲ ಕಿಂಡಿಯಲ್ಲ. ಹಣ, ಜಾತಿಗಿಂತ ಭಕ್ತಿ ಮೇಲು ಎಂದು ತೋರಿಸಿದೆ. ಮಾನವೀಯತೆಯ ಅತ್ಯುನ್ನತ ಪ್ರಣಾಳಿಕೆ ಭಗವದ್ಗೀತೆ. ಕೈಬರಹದ ಸಂವಿಧಾನದಲ್ಲಿ, ಭಗವದ್ಗೀತೆಯ ಬರಹ ಇದೆ. ಧರ್ಮ ಮತ್ತು ಸಂವಿಧಾನ ಬೇರೆಯಲ್ಲ. ಶಾಂತಿಯುತ ಸಮಾಜದ ನಿರ್ಮಾಣ ಎರಡರ ಉದ್ದೇಶ ಒಂದೆ. ಅದು ಮೂಢನಂಬಿಕೆಯಲ್ಲ, ಭಗವದ್ಗೀತೆ ಒಂದು ವಿಜ್ಞಾನ. ಭಗವದ್ಗೀತೆ ಈ ಪ್ರಪಂಚವನ್ನು ಸನ್ಮಾರ್ಗದಲ್ಲಿ ರೂಪಿಸಿದೆ. ಸಾವಿನ ಜೊತೆ ಹೋರಾಡಿಕೊಂಡು ಬೆಳೆದವ ಕೃಷ್ಣ. ಹುಟ್ಟಿನ ಮೊದಲೇ ಸಾವಿನ ಜೊತೆ ಸೆಣಸಾಡಿದವ ಕೃಷ್ಣ. ಕೃಷ್ಣನ ಜೀವನೋತ್ಸವ ಭಗವದ್ಗೀತೆಯ ಸಾರಾಂಶ. ಕೃಷ್ಣದೇವರು ನನ್ನ ಬದುಕಿನ ಪ್ರೇರಣೆ ಎಂದರು.
ನನಗೆ ಭಗವದ್ಗೀತೆಯ ಶ್ಲೋಕಗಳು ಗೊತ್ತಿಲ್ಲದಿರಬಹುದು. ಆದರೆ, ಅದರ ಸ್ಪಿರಿಟ್ ಗೊತ್ತು. ಭಗವದ್ಗೀತೆಯಿಂದ ನಾನು ಶಕ್ತಿ ಪಡೆದಿದ್ದೇನೆ. ನಿಷ್ಕಾಮ ಕರ್ಮ ಭಗವದ್ಗೀತೆಯಿಂದ ನಾನು ಕಲಿಸಿದ್ದೇನೆ. ಚುನಾವಣೆಯ ಸೋಲು ಗೆಲುವು ನನಗೆ ಬಾಧಿಸುವುದಿಲ್ಲ. ಸತ್ಯದ ಬಲದಲ್ಲಿ ನನ್ನ ಹೋರಾಟ ನಡೆಸುತ್ತೇನೆ. ಮೌನ ಯಾವುದಕ್ಕೂ ಪರಿಹಾರ ಅಲ್ಲ ಎಂದು ತಿಳಿಸಿದರು.

