ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಸ್ತಿ ವಿವರಗಳ ಬಗ್ಗೆ ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚಿಸುತ್ತಿರುವವರಿಗೆ ಬಿಸಿ ಮುಟ್ಟಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಬೃಹತ್ ಕಾರ್ಯಾಚರಣೆಗೆ ಸಜ್ಜಾಗಿದೆ. ನಗರದಲ್ಲಿರುವ ಪ್ರತಿಯೊಬ್ಬರ ಹೆಸರಿನಲ್ಲಿ ಎಷ್ಟು ಆಸ್ತಿಯಿದೆ ಮತ್ತು ಎಷ್ಟು ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂಬುದನ್ನು ನಿಖರವಾಗಿ ಪತ್ತೆಹಚ್ಚಲು ಸಮಗ್ರ ಆಸ್ತಿ ಸರ್ವೆ ನಡೆಸಲು ಪ್ರಾಧಿಕಾರ ತೀರ್ಮಾನಿಸಿದೆ.
ನಗರ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ವಂಚನೆಗೆ ಕಡಿವಾಣ ಹಾಕುವುದು ಮತ್ತು ಖಾತಾ ದಾಖಲೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ನಗರದ ಎಲ್ಲಾ ಆಸ್ತಿಗಳ ಸಮೀಕ್ಷೆ ನಡೆಸಿ, ಜಿಪಿಎಸ್ (GPS) ಟ್ಯಾಗಿಂಗ್ ಅಳವಡಿಸಲು ಸಿದ್ಧತೆಗಳು ನಡೆದಿವೆ. ಈ ಬೃಹತ್ ಆಸ್ತಿ ಸರ್ವೆ ಕಾರ್ಯಾಚರಣೆಯು ಬೆಂಗಳೂರಿನ ಐದೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಏಕಕಾಲದಲ್ಲಿ ನಡೆಯಲಿದೆ.
ಮಾಲ್‌ಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಬಹುಮಹಡಿ ವಸತಿ ಸಮುಚ್ಚಯಗಳ ಮಾಲೀಕರು ಕಟ್ಟಡದ ನೈಜ ವಿಸ್ತೀರ್ಣವನ್ನು ಕಡಿಮೆ ತೋರಿಸಿ ತೆರಿಗೆ ವಂಚಿಸುತ್ತಿರುವುದು ವ್ಯಾಪಕವಾಗಿದ್ದು, ಇದನ್ನು ಪತ್ತೆಹಚ್ಚಲು ಸರ್ವೆ ನೆರವಾಗಲಿದೆ. ಇದನ್ನೂ ಓದಿ: ರಾಜ್ಯದ 101 ತಾಲೂಕುಗಳಲ್ಲಿ ಬರ; ಸರ್ಕಾರ ಅಧಿಕೃತ ಘೋಷಣೆ – 1 ಲಕ್ಷದವರೆಗೆ ಸಾಲ ಮನ್ನಾಕ್ಕೆ ಬಿಜೆಪಿ ಆಗ್ರಹ
ಸಮೀಕ್ಷೆಯ ಮೂಲಕ ಪ್ರತಿಯೊಂದು ಆಸ್ತಿಯನ್ನು ಡಿಜಿಟಲ್ ಇ-ಖಾತಾ ವ್ಯವಸ್ಥೆಗೆ ಒಳಪಡಿಸಿ ಜಿಪಿಎಸ್ ಲೊಕೇಶನ್‌ನೊಂದಿಗೆ ಲಿಂಕ್ ಮಾಡಲಾಗುತ್ತದೆ. ಯಾವುದೇ ಅಧಿಕೃತ ದಾಖಲೆಗಳಿಲ್ಲದೆ ನಗರದಲ್ಲಿ ತಲೆಯೆತ್ತಿರುವ ಅನಧಿಕೃತ ಆಸ್ತಿಗಳನ್ನು ಈ ಕಾರ್ಯಾಚರಣೆ ಮೂಲಕ ಗುರುತಿಸಲಾಗುತ್ತದೆ.
ಸದ್ಯ ಜಿಬಿಎ ಆಸ್ತಿ ತೆರಿಗೆ ವ್ಯಾಪ್ತಿಯಿಂದ ಹೊರಗುಳಿದಿರುವ ಲಕ್ಷಾಂತರ ಆಸ್ತಿಗಳನ್ನು ಪತ್ತೆಹಚ್ಚಿ, ಅವುಗಳನ್ನು ಅಧಿಕೃತ ಕಂದಾಯ ದಾಖಲೆಗಳಿಗೆ ಸೇರ್ಪಡೆಗೊಳಿಸಿ ತೆರಿಗೆ ಸಂಗ್ರಹ ಹೆಚ್ಚಿಸುವ ಗುರಿ ಹೊಂದಲಾಗಿದೆ.
ಈ ಸಮೀಕ್ಷೆಯ ಮೂಲಕ ಬೆಂಗಳೂರಿನ ಆಸ್ತಿ ಮಾಲೀಕತ್ವದ ನಿಖರ ವಿವರಗಳು ಸಿಗಲಿದ್ದು, ಸುಳ್ಳು ಮಾಹಿತಿ ನೀಡಿ ವಂಚಿಸುವ ಮಾಲೀಕರಿಗೆ ದಂಡ ಮತ್ತು ಕಾನೂನು ಕ್ರಮದ ಬಿಸಿ ತಟ್ಟಲಿದೆ.
