ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ಗೌರಿ ಲಂಕೇಶ್ ಹಂತಕರನ್ನು ಬಂಧಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮುರುಗೇಶ್ ಪಾಳ್ಯದ ಆಟದ ಮೈದಾನದಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಯ ಬೆಂಗಳೂರಿನ 2ನೇ ವಿಶೇಷ ಸಮಾವೇಶ ನಡೆಯಿತು. ಈ ವೇಳೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಯಾವ ತನಿಖೆಯನ್ನು ಸರಿಯಾಗಿ ಮಾಡುತ್ತಿಲ್ಲ. ಗೌರಿ ಹತ್ಯೆ ಹಂತಕರನ್ನು ಏಕೆ ಇನ್ನು ಬಂಧಿಸಿಲ್ಲ ಎಂದು ಪ್ರಶ್ನಿಸಿದರು.
Advertisement
ರುದ್ರೇಶ್, ಕುಟ್ಟಪ್ಪ ಕೊಲೆ ಆಯ್ತು, ಇತ್ತಿಚೀಗೆ ಪರೇಶ್ ಮೆಸ್ತಾ ಕೊಲೆ ಆಯ್ತು. ಗೌರಿ ಲಂಕೇಶ್ ಕೊಲೆ ಆಯ್ತು, ಯಾವ ಪ್ರಕರಣಗಳ ತನಿಖೆ ತಾರ್ಕಿಕ ಅಂತ್ಯ ಕಾಣ್ತಿಲ್ಲ ಏಕೆ? ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಎಲ್ಲ ತನಿಖೆಗಳು ನಿಷ್ಪಕ್ಷಪಾತವಾಗಿ ನಡೆಯುತ್ತವೆ. ಗೌರಿ ಹಂತಕರನ್ನ ಸುಮ್ಮನೆ ಬಿಡುವುದಿಲ್ಲ ಎಂದರು.
Advertisement
Advertisement
ಟಿಪ್ಪು ಜಯಂತಿ ಆಚರಿಸಿ ರಾಜ್ಯ ಸರ್ಕಾರ ವೋಟ್ ಬ್ಯಾಂಕ್ ರಾಜಕಾರಣ ಮಾಡ್ತಿದೆ. ನಾನು ಇತಿಹಾಸದ ಸರಿ ತಪ್ಪುಗಳ ಬಗ್ಗೆ ಮಾತನಾಡಲ್ಲ. ಆದ್ರೆ ವಿವಾದಿತ ವಿಷಯಗಳಿಂದ ದೂರವಿರಿ. ರಾಜಕಾರಣಕ್ಕಾಗಿ ವಿವಾದಿತ ವಿಷಯಗಳನ್ನ ಬೆರೆಸಬೇಡಿ. ಕಿತ್ತೂರು ರಾಣಿ ಚೆನ್ನಮ್ಮ, ಕೇಂಪೇಗೌಡ, ವಿಶ್ವೇಶ್ವರಯ್ಯ ಅವರ ಜನ್ಮದಿನ ಆಚರಿಸೋಣ. ಆದ್ರೆ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವುದು ಬೇಡ. ಇದು ದುಃಖಕರ ವಿಷಯ ಅಂತಾ ವಿಷಾದ ವ್ಯಕ್ತಪಡಿಸಿದ್ರು.
Advertisement
ಕರ್ನಾಟಕದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು ಸಮೀಕ್ಷೆ ವರದಿಯಲ್ಲಿ ಕರ್ನಾಟಕ ಭ್ರಷ್ಟಾಚಾರದಲ್ಲಿ ಮುಂಚೂಣಿಯಲ್ಲಿದೆ ಎನ್ನುವ ಅಂಶ ವ್ಯಕ್ತವಾಗಿದೆ. ಸ್ಟೀಲ್ ಬ್ರಿಡ್ಜ್, 300 ಕೋಟಿ ರೂ. ವೈಟ್ ಟ್ಯಾಪಿಂಗ್, ಕಸದ ವಿಚಾರಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರದ ಮೇಲಿನ ಆರೋಪದಿಂದ ಪರಾರಿಯಾಗಲು ಲೋಕಾಯುಕ್ತ ಬಂದ್ ಮಾಡಿ ಎಸಿಬಿ ರಚಿಸಿದ್ರು. ಇದನ್ನು ನೋಡಿದ್ರೆ ಭ್ರಷ್ಟಾಚಾರ ಎಷ್ಟರಮಟ್ಟಿಗೆ ಇದೆ ಅನ್ನೋದು ಗೊತ್ತಾಗುತ್ತೆ ಅಂತೇಳಿದ್ರು.
ಕರ್ನಾಟಕದಲ್ಲಿ ಪರಿವರ್ತನೆ ಆಗುತ್ತೆ, ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಪರವಾಗಿ ಫಲಿತಾಂಶ ಬರುತ್ತದೆ. ಮುಂದಿನ ಚುನಾವಣೆ ಬಹುದೊಡ್ಡ ರಾಜ್ಯ ಕರ್ನಾಟಕದಲ್ಲಿ, ಹಾಗಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರಕ್ಕೆ ಸ್ಪಷ್ಟ ಬಹುಮತ ಕೊಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದೇ ಬರುತ್ತೆ ಎಂದು ಹೇಳಿದ್ರು.
ಬಿಜೆಪಿಯವರು ಬೆಂಕಿ ಹಚ್ಚುತ್ತಾರೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಾಯಕನಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದ್ರೆ ನಾನು ಅವರಿಗೆ ಕೇಳುತ್ತೇನೆ ದೇಶದಲ್ಲಿ ಕೋಮುಗಲಭೆಗೆ ಯಾರು ಕಾರಣ? ಪಂಜಾಬ್, ಕಾಶ್ಮೀರದ ಘಟನೆಗಳಿಗೆ ಯಾರು ಕಾರಣ? ಬೆಂಕಿ ಹಚ್ಚಿದ್ದು ಕಾಂಗ್ರೆಸ್ ಹೊರತು ಬಿಜೆಪಿ ಅಲ್ಲ. ಬಿಜೆಪಿ ಬೆಂಕಿ ಆರಿಸುವ ಕೆಲಸ ಮಾಡಿದೆ ಅಂತಾ ತಿರುಗೇಟು ನೀಡಿದ್ರು.
ಇದೇ ವೇಳೆ ಕಳೆದ ಮೂರುವರೆ ವರ್ಷಗಳಿಂದ ಉಗ್ರರನ್ನ ಮಟ್ಟ ಹಾಕಿದ್ದೇವೆ. ಪಾಕ್ ನಮ್ಮ ನೆರೆಯ ದೇಶವಾಗಿದ್ದು ಮೊದಲ ಗುಂಡು ನಾವು ಹೊಡೆಯುವುದಿಲ್ಲ, ಅಲ್ಲಿಂದ ಮೊದಲು ಒಂದು ಗುಂಡು ಬೀಳಬೇಕು. ಆಗ ನಾವು ಎಷ್ಟು ಗುಂಡು ಹೊಡೆಯುತ್ತೇವೆಂದು ಪಾಕ್ ಎಣಿಸಬೇಕು. ಆ ಕಡೆಯಿಂದ ಮೊದಲು ಒಂದು ಗುಂಡು ಬಂದ್ರೆ ನೀವು ಎಷ್ಟು ಗುಂಡು ಬೇಕಾದ್ರೂ ಹೊಡೆಯಿರಿ ಅಂತಾ ನಮ್ಮ ಸೈನಿಕರಿಗೆ ಸೂಚಿಸಿದ್ದೇವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿವಿ ಸದಾನಂದ ಗೌಡ, ಬಿಜೆಪಿ ನಾಯಕರು ಉಪಸ್ಥಿತರಿದ್ದರು.
https://www.youtube.com/watch?v=binO7aGl07M