ಉಡುಪಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ಆದ ಘಟನೆ ಉಡುಪಿಯ ಬಲಾಯಿಪಾದೆಯಲ್ಲಿ ನಡೆದಿದೆ.
ಇಂದು ಬೆಳಗ್ಗಿನ ಜಾವ ಚಾಲಕ ಯೂ ಟರ್ನ್ ಮಾಡುವ ಸಂದರ್ಭದಲ್ಲಿ ಟ್ಯಾಂಕರ್ ಮಗುಚಿ ಬಿದ್ದಿದೆ. ಈ ಅವಘಡದಿಂದ ಟ್ಯಾಂಕರ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಷಯ ತಿಳಿದು ಅಗ್ನಿಶಾಮಕ ಮತ್ತು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಒಂದು ಭಾಗದ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಸದ್ಯ ಗ್ಯಾಸ್ ಸೋರಿಕೆ ಇಲ್ಲ ಎಂದು ದೃಢಪಡಿಸಿದ ಅಗ್ನಿಶಾಮಕ ದಳ ಟ್ಯಾಂಕರ್ ಮೇಲೆ ಎತ್ತುವ ತನಕ ಸಾರ್ವಜನಿಕರು ಟ್ಯಾಂಕರ್‍ನಿಂದ ದೂರ ಇರಲು ಸೂಚಿಸಿದ್ದಾರೆ.
ಈ ಘಟನೆ ನಡೆದ ಸ್ಥಳದ ಅಂಗಡಿಗಳನ್ನು ಮುಚ್ಚಿಸಿದ ಪೊಲೀಸರು ಮೊಬೈಲ್ ಬಳಸದಂತೆ, ಸುತ್ತಮುತ್ತ ಬೆಂಕಿ ಹಚ್ಚದಂತೆ ತಿಳಿಸಿದ್ದಾರೆ.