– ಓರ್ವನಿಗೆ ಗಂಭೀರ ಗಾಯ
ಬೆಂಗಳೂರು: ನಗರದ ಹುಳಿಮಾವು (Hulimavu) ಬಳಿಯ ಪಾತ್ರೆ ಅಂಗಡಿ ಒಂದರಲ್ಲಿ ಸಿಲಿಂಡರ್ ಸ್ಫೋಟಗೊಂಡ (Gas cylinder explosion) ಘಟನೆ ನಡೆದಿದೆ. ಸ್ಫೋಟದ ತೀವ್ರತೆಗೆ 200 ಮೀಟರ್ ದೂರದ ಮನೆ ಹಾಗೂ ಅಂಗಡಿಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ.
ಸುರೇಶ್ ದಾಸ್ ಎಂಬವರಿಗೆ ಸೇರಿದ ಅಂಗಡಿಯಲ್ಲಿ ಕಳೆದ ರಾತ್ರಿ 10:55ಕ್ಕೆ ಈ ಘಟನೆ ಸಂಭವಿಸಿದೆ. ಅವಘಡದಲ್ಲಿ ರಾಹುಲ್ ದಾಸ್ ಎಂಬಾತ ಗಾಯಗೊಂಡಿದ್ದಾನೆ. ಅಲ್ಲದೇ ಅಂಗಡಿಯ ಶೆಟರ್, ಪಾತ್ರೆಗಳು ಚೆಲ್ಲಾಪಿಲ್ಲಿಯಾಗಿವೆ. ರಸ್ತೆಯಲ್ಲಿ ನಿಂತಿದ್ದ ಎರಡು ಸ್ಕೂಟರ್‌ಗಳು ಸಂಪೂರ್ಣ ಜಖಂಗೊಂಡಿವೆ. ಸ್ಫೋಟದ ಸದ್ದು ಸುಮಾರು 1 ಕಿಮೀ ವ್ಯಾಪ್ತಿಗೆ ಕೇಳಿಸಿದ್ದು, ಜನ ಹಾಗೂ ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿನ ರೋಗಿಗಳು ಬೆಚ್ಚಿಬಿದ್ದಿದ್ದಾರೆ.
ಇನ್ನೂ ಅಂಗಡಿಯಲ್ಲಿ ಅಕ್ರಮ ಸಿಲಿಂಡರ್ ರೀ ಫಿಲ್ಲಿಂಗ್ ಕೂಡ ಮಾಡಲಾಗುತ್ತಿತ್ತು ಎಂಬ ಅನುಮಾನ ಮೂಡಿದೆ. ಇದರಿಂದ ಅಂಗಡಿಯೊಳಗೆ ಗ್ಯಾಸ್ ಲೀಕ್ ಆಗಿದೆ. ಅಂಗಡಿಯ ಮುಂಭಾಗ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡಲಾಗುತ್ತಿತ್ತು. ಚಾರ್ಜರ್ ತೆಗೆಯುವ ವೇಳೆ ಸ್ಪಾರ್ಕ್ ಆಗಿ ಸ್ಫೋಟಗೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಫೋಟದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಫೋಟ ಸಂಭವಿಸಿದ ಅಂಗಡಿ ಎದುರಿನಲ್ಲಿರುವ ಮನೆಯ ಎರಡನೇ ಮಹಡಿಯ ಕಿಟಕಿಯ ಗಾಜು ಒಡೆದಿದ್ದು, ಅದೃಷ್ಟವಶಾತ್ ಅಲ್ಲೇ ಮಲಗಿದ್ದ ಒಂದು ತಿಂಗಳ ಮಗು ಪ್ರಾಣಾಪಾಯದಿಂದ ಪಾರಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಹುಳಿಮಾವು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.