– ನಗರಸಭೆ ದಿವ್ಯ ನಿರ್ಲಕ್ಷ್ಯಕ್ಕೆ ನಿವಾಸಿಗಳ ಪರದಾಟ
– ಘನತಾಜ್ಯ ವಿಲೇವಾರಿ ವೈಫಲ್ಯದಿಂದ ಘಟಕದಲ್ಲಿ ಬೆಂಕಿ
ರಾಯಚೂರು: ದೇಶದ ರಾಜಧಾನಿ ದೆಹಲಿಯನ್ನೇ ಮೀರಿಸುವ ಮಟ್ಟಕ್ಕೆ ರಾಯಚೂರು ನಗರ ಬೆಳೆದಿದೆ. ಆದರೆ ಇದು ಅಭಿವೃದ್ಧಿಯಲ್ಲಲ್ಲಾ ಹೊಗೆಯಲ್ಲಿ ಮಾತ್ರ. ಈಗ ರಾಯಚೂರಿನಲ್ಲಿ ಎಲ್ಲಿ ನೋಡಿದ್ರೂ ಹೊಗೆ ತುಂಬಿಕೊಂಡಿದ್ದು ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ರಾಯಚೂರು ನಗರ ಶಾಸಕ ಡಾ. ಶಿವರಾಜ್ ಪಾಟೀಲ್ ಮನೆಯ ಹತ್ತಿರದಲ್ಲೇ ಇರುವ ಘನತಾಜ್ಯ ಘಟಕದಿಂದ ಹೊಗೆ ಬರುತ್ತಿದೆ. ನಗರದ ಘನ ತ್ಯಾಜ್ಯ ವಿಲೇವಾರಿ ಘಟಕದ ನಿರ್ವಹಣೆ ವೈಫಲ್ಯ ಇದಕ್ಕೆಲ್ಲಾ ಕಾರಣವಾಗಿದೆ.
ಸುಮಾರು 10 ಎಕರೆ ಪ್ರದೇಶದಲ್ಲಿ ಕಸಕ್ಕೆ ಬೆಂಕಿ ಬಿದ್ದಿರುವುದರಿಂದ ನಗರದಲ್ಲಿ ಹೊಗೆ ತುಂಬಿದೆ. ನಗರದ ಅಶೋಕ್ ಕುಮಾರ್ ಕಾಲೋನಿ, ಡ್ಯಾಡಿ ಕಾಲೋನಿ, ನಿಜಲಿಂಗಪ್ಪ ಕಾಲೋನಿ ಹಾಗೂ ಯಕ್ಲಾಸಪುರ ಗ್ರಾಮ ಸಂಪೂರ್ಣ ಹೊಗೆಯಿಂದ ಕೂಡಿದೆ. ನಗರಸಭೆ, ನಗರಾಭಿವೃದ್ಧಿ ಕೋಶ, ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಹೊಗೆ ತುಂಬಿದೆ. ಆಗಾಗ ಬೆಂಕಿ ಬೀಳುತ್ತಲೇ ಇದ್ದು ಜನ ನರಕಯಾತನೆ ಅನುಭವಿಸುತ್ತಿದ್ದಾರೆ. ಈ ಬಾರಿ ಭಾರೀ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದೆ.
Advertisement
Advertisement
ನಗರಪ್ರದೇಶ ಹಾಗೂ ಯಕ್ಲಾಸಪುರ ಗ್ರಾಮಕ್ಕೆ ಹತ್ತಿರದಲ್ಲೇ ಇರುವುದರಿಂದ ಘನತಾಜ್ಯ ವಿಲೆವಾರಿ ಘಟಕವನ್ನು ಸ್ಥಳಾಂತರ ಮಾಡಬೇಕು ಎಂದು ಜನ ಆಕ್ರೋಶಗೊಂಡಿದ್ದಾರೆ. ಜನರ ಆಕ್ರೋಶದಿಂದ ಎಚ್ಚೆತ್ತಿರುವ ಅಧಿಕಾರಿಗಳು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಹೊಗೆ ಪ್ರಮಾಣ ಹಾಗೇ ಇರುವುದರಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳು ಬೀರುತ್ತಿದ್ದು ಜನರಿಗೆ ಮಾಸ್ಕ್ ಗಳನ್ನು ನೀಡಲು ನಗರಸಭೆ ಮುಂದಾಗಿದೆ. ಆದರೆ ಆಸ್ಪತ್ರೆಗಳ ತಾಜ್ಯ, ಮಾಂಸ ಪದಾರ್ಥಗಳ ತ್ಯಾಜ್ಯ,ಪ್ಲಾಸ್ಟಿಕ್ ಸೇರಿ ನಾನಾ ವಸ್ತುಗಳು ಸುಡುತ್ತಿರುವುದರಿಂದ ಅಪಾಯಕಾರಿ ಹೊಗೆ ಜನರನ್ನ ಬಾಧಿಸುತ್ತಿದೆ.
Advertisement
Advertisement
ತಾಜ್ಯವನ್ನ ಸಮರ್ಪಕವಾಗಿ ವಿಲೇವಾರಿ ಮಾಡಲಾಗದೇ ನಗರಸಭೆ ಹಾಗೂ ನಗರಾಭಿವೃದ್ಧಿ ಕೋಶದ ಅಧಿಕಾರಿಗಳೆ ಬೆಂಕಿ ಹಚ್ಚಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಆದರೆ ಅಧಿಕಾರಿಗಳು ಮಾತ್ರ ತುಂಬಾ ದಿನಗಳಿಂದ ಕಸ ಉಳಿದಿದ್ದರಿಂದ ಬೆಂಕಿ ತಾನಾಗೇ ಹೊತ್ತಿಕೊಂಡಿದೆ ಎಂದು ಸಮಜಾಯಿಷಿ ಹೇಳುತ್ತಿದ್ದಾರೆ.
ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಈ ಹಿಂದೆ ಘಟಕವನ್ನು ನವೀಕರಣಗೊಳಿಸಲಾಗಿತ್ತು. ಕ್ಯಾಷೊಟೆಕ್ ಸಂಸ್ಥೆಗೆ ನಿರ್ವಹಣೆಯನ್ನು ನೀಡಲಾಗಿತ್ತು. ಆಗ ಕಸದಿಂದ ರಸ ತೆಗೆಯುವ ಹಾಗೆ ಒಣ ಹಾಗೂ ಹಸಿ ತ್ಯಾಜ್ಯಗಳನ್ನು ಬೇರ್ಪಡಿಸಿ ಗೊಬ್ಬರ ತಯಾರಿಸಲಾಗುತ್ತಿತ್ತು. ಪ್ಲಾಸ್ಟಿಕ್, ಪೇಪರ್ ಪ್ರತ್ಯೇಕಿಸಿ ಇಟ್ಟಿಗೆ ಮಾಡಲಾಗುತ್ತಿತ್ತು. ಜೊತೆಗೆ ಕಸದಿಂದಲೇ ಲಕ್ಷಾಂತರ ರೂ. ಆದಾಯ ಕೂಡ ಬರುತ್ತಿತ್ತು. ಆದರೆ ಈಗ ನಗರಸಭೆ ಹಾಗೂ ನಗರಾಭಿವೃದ್ಧಿ ಕೋಶ ನಿರ್ವಹಣೆ ಆರಂಭಿಸಿದಾಗಿನಿಂದ ಎಲ್ಲವೂ ಹಳ್ಳ ಹಿಡಿದಿದೆ.
ಪ್ರತಿನಿತ್ಯ ಸುತ್ತಮುತ್ತಲ ಜನ ನರಕಯಾತನೆ ಅನುಭವಿಸುತ್ತಿದ್ದು ಕೂಡಲೇ ಸ್ಥಳಾಂತರ ಮಾಡುವಂತೆ ಒತ್ತಾಯಿಸಿದ್ದಾರೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮುಂದಾಗಬೇಕು ಅಂತ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.